ದಾವಣಗೆರೆ: ಇನ್ನು ಮುಂದೆ 60 ವರ್ಷದವರ ಮನೆಬಾಗಿಲಿಗೆ ವೃದ್ಧಾಪ್ಯ ವೇತನ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಬುಧವಾರ ಜಿಲ್ಲಾಡಳಿತದ ತುಂಗಭದ್ರಾ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಆವರು, ವೃದ್ದಾಪ್ಯ ವೇತನಕ್ಕಾಗಿ ಯಾರೂ ಸಹ ಜಿಲ್ಲಾಧಿಕಾರಿ, ತಹಶೀಲ್ದಾರ್ ಕಚೇರಿಗೆ ಅಲೆಯಬೇಕಿಲ್ಲ. ಜಿಲ್ಲಾ ಮತ್ತು ತಾಲೂಕು ಕಚೇರಿಯಲ್ಲಿ ಆಧಾರ್ ಕಾರ್ಡ್‌ಗಳ ಪಟ್ಟಿ ಇದ್ದು, ಯಾರಿಗೆ 60 ವರ್ಷ ತುಂಬಿರುತ್ತದೆಯೋ ಅವರಿಗೆ ಅಂಚೆ ಮೂಲಕ, ಇಲ್ಲವೇ ಗ್ರಾಮಲೆಕ್ಕಿಗರೇ ಹೋಗಿ ವೃದ್ಧಾಪ್ಯ ವೇತನ ನೀಡಬೇಕು ಮತ್ತು ಯೋಜನೆಯಡಿ ಸೇರ್ಪಡೆ ಪತ್ರ ಕೊಡಬೇಕು ಎಂದು ಸೂಚಿಸಿದರು.
ಕೋವಿಡ್ ಜೊತೆಗೆ ಆರ್ಥಿಕ ಅಭಿವೃದ್ಧಿ ಚಟುವಟಿಕೆ ನಡೆಸಬೇಕಿದೆ. ಎಲ್ಲ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಸಿ ಆರ್ಥಿಕ ಚಟುವಟಿಕೆ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳು ಪ್ರತಿ ತಿಂಗಳಿಗೆ ಒಂದು ಬಾರಿ ಒಂದು ಗ್ರಾಮಕ್ಕೆ ಭೇಟಿ ನೀಡಿ ಬೆಳಗ್ಗೆ 10 ರಿಂದ ಸಂಜೆಯವರೆಗೆ ಇದ್ದು ಸ್ಥಳದಲ್ಲಿಯೇ ಪಿಂಚಣಿ, ರೈತರ ಸಮಸ್ಯೆ, ಖಾತೆಗಳ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಅಂಗನವಾಡಿ ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬೇಕು. ನರೇಗಾ ಯೋಜನೆ ಕುರಿತಾಗಿ ಪರಿಶೀಲಿಸಬೇಕು. ಸರ್ಕಾರ ಹಾಗೂ ಕಂದಾಯ ಇಲಾಖೆಗಳು ಜನರ ಮನೆ ಬಾಗಿಲಿಗೆ ಬಂದಿದೆ ಎಂದು ಜನ ಹೇಳುವ ರೀತಿಯಲ್ಲಿ ಕೆಲಸ ಮಾಡಬೇಕು. ಅಲ್ಲಿನ ರೈತರ ಮನೆಯಲ್ಲಿ ಊಟ ಮಾಡಬೇಕು. ಎಸಿ, ತಹಶೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ಗ್ರಾಮಲೆಕ್ಕಿಗರು ಹಾಜರಿರಬೇಕು ಎಂದು ಸೂಚಿಸಿದರು.
ಸ್ಮಶಾನ ಇಲ್ಲದಿರುವ ಹಳ್ಳಿಗಳ ಪಟ್ಟಿ ಪಟ್ಟಿ ಮಾಡಿ ಜಾಗ ಗೊತ್ತು ಮಾಡಿಸಬೇಕು. ಜಾಗವಿಲ್ಲದಿದ್ದರೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಬೇಕು. ಬಗರ್ ಹುಕುಂ, ಸಾಗುವಳಿ ಹಕ್ಕುಪತ್ರ ವಿತರಿಸಬೇಕು. ಜೊತೆಗೆ 94 ಸಿ ಹಾಗೂ 94 ಸಿಸಿ ಅಡಿಯಲ್ಲಿನ ಅರ್ಜಿ ಪೂರ್ಣಗೊಳಿಸಬೇಕು. ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಪೋಡಿಗಾಗಿ ಬಂದ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳಬಾರದು ಎಂದರು. ಕಂದಾಯ ಗ್ರಾಮಕ್ಕೆ ಸಂಬಂಧಪಟ್ಟಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕು. ಭೂಮಿ ಅರಣ್ಯ ಇಲಾಖೆಗೆ ಸಂಬಂ ಧಿಸಿದವರೊಂದಿಗೆ ಮಾತುಕತೆ ನಡೆಸಬೇಕು. ಭೂ ಮಂಜೂರಾತಿಗೆ ಸಮಿತಿ ರಚಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಆರ್ಥಿಕ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಲು ನಿರಂತರವಾಗಿ ಸಭೆಗಳನ್ನು ಹಂತ ಹಂತವಾಗಿ ನಡೆಸಿಕೊಂಡು ಬರಲಾಗಿದೆ. ಲಾಕ್‌ಡೌನ್ ವೇಳೆಯಿಂದಲೂ ಕೈಗಾರಿಕೆ ನಡೆಸಿಕೊಂಡು ಬರಲಾಗಿದೆ. ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗಿದೆ. ಜಗಳೂರು ತಾಲೂಕಿನಲ್ಲಿ ನೀರಿನ ಸಮಸ್ಯೆ ಇರುವಂತಹ 20 ರಿಂದ 25 ಹಳ್ಳಿಗಳ ಪಟ್ಟಿ ಮಾಡಲಾಗಿದೆ. ಸಮಸ್ಯೆ ತಲೆದೋರಿದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದರು. ಎಡಿಸಿ ಪೂಜಾರ ವೀರಮಲ್ಲಪ್ಪ ಮಾತನಾಡಿ, ಆಧಾರ್ ಲಿಂಕ್ ನೋಂದಣಿಯಲ್ಲಿ ಶೇ. 99.7 ಪ್ರಗತಿ ಸಾಧಿಸಿದ್ದು, ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು.