Advertisement

ಕೃಷಿ ಉತ್ಪನ್ನಗಳ ಬೆಲೆ ಸ್ಥಿರವಾಗಿರಲಿ

06:05 PM Dec 28, 2019 | Naveen |

ದಾವಣಗೆರೆ: ಕೃಷಿ ಉತ್ಪನ್ನಗಳ ಧಾರಣೆ ಯಾವಾಗಲೂ ಸ್ಥಿರವಾಗಿರಲಿ. ಇದರಿಂದ ಬೆಳೆ ಬೆಳೆದ ರೈತರು ಹಾಗೂ ವರ್ತಕರಿಗೂ ಅನುಕೂಲವಾಗಲಿದೆ. ಯಾವುದೇ ಕಾರಣಕ್ಕೂ ಬೆಂಬಲ ಬೆಲೆಗಿಂತ ಕಡಿಮೆಗೆ ಧಾನ್ಯ ಖರೀದಿಸಬಾರದು ಎಂದು ವರ್ತಕರಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

Advertisement

ಶುಕ್ರವಾರ, ತಮ್ಮ ಕಚೇರಿ ಸಭಾಂಗಣದಲ್ಲಿ ಕೃಷಿ ಉತ್ಪನ್ನಗಳ ಧಾರಣೆ ಸ್ಥಿರತೆ ಕುರಿತ ರೈತರು, ವರ್ತಕರು ಹಾಗೂ ಕೃಷಿ ಮಾರುಕಟ್ಟೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕೃಷಿ ಉತ್ಪನ್ನ ಖರೀದಿಸಲು ರೈತರಿಗೆ ನೀಡಿರುವ ಫ್ರೂಟ್‌ ತಂತ್ರಾಂಶದಲ್ಲಿ ನೀಡಲಾಗುವ ದಾಖಲಾತಿ ಇದ್ದರೆ ಸಾಕು. ಅದನ್ನು ಕೃಷಿ ಇಲಾಖೆ ಆ ಹಂಗಾಮಿಗೆ ದೃಢೀಕರಣ ನೀಡಿರುತ್ತದೆ. ಮತ್ತೆ ಬೇರೆ ದಾಖಲೆಗಳ ಅಗತ್ಯವಿರುವುದಿಲ್ಲ ಎಂದರು.

ರೈತರು ಕೂಡ ಉತ್ತಮ ಉತ್ಪನ್ನ ವರ್ತಕರಿಗೆ ನೀಡಬೇಕು. ಹಿಂದಿನ ವರ್ಷಗಳಲ್ಲಿ ಹಲವಾರು ರೈಸ್‌ ಮಿಲ್‌ ಮಾಲೀಕರು ಭತ್ತ ಖರೀದಿಸಿ, ರೈತರಿಗೆ ಹಣ ಪಾವತಿಸಿಲ್ಲ ಎಂಬ ದೂರುಗಳಿವೆ. ಸುಮಾರು 4-5 ಕೋಟಿಗಳಷ್ಟು ಮೋಸವಾಗಿದೆ ಎಂದು ತಿಳಿದು ಬಂದಿದೆ. ಒಂದು ವೇಳೆ ಅಂತಹ ಪ್ರಕರಣ ಕಂಡು ಬಂದರೆ ಸಂಬಂಧಿ ಸಿದವರ ಆಸ್ತಿ ಜಪ್ತಿ ಮಾಡಿ ರೈತರಿಗೆ ಹಣ ಕೊಡಿಸಲು ಹಿಂದು-ಮುಂದು ನೋಡುವುದಿಲ್ಲ ಎಂದು ಎಚ್ಚರಿಸಿದರು.

ವರ್ತಕರ ಸಂಘದ ಪ್ರತಿನಿಧಿ ಮಾತನಾಡಿ, ಸುಗ್ಗಿ ಕಾಲದಲ್ಲಿ ಧಾನ್ಯಗಳಲ್ಲಿ 25 ರಿಂದ 26 ರಷ್ಟು ತೇವಾಂಶ ಪ್ರಮಾಣ ಇರಲಿದೆ. ಹಾಗಾಗಿ ಅಂತಹ ದಿನಗಳಲ್ಲಿ ಮಾರುಕಟ್ಟೆ ಬೆಲೆಗೆ ಖರೀದಿಸಿದರೆ ಅದು ಒಣಗುವಷ್ಟರಲ್ಲಿ ಮಾಲೀಕರಿಗೆ ನಷ್ಟವಾಗಲಿದೆ. ಕೊನೆ ಪಕ್ಷ 15 ರಿಂದ 16 ರಷ್ಟು ತೇವಾಂಶ ಪ್ರಮಾಣ ಇದ್ದರೆ ಪರವಾಗಿಲ್ಲ ಎಂದಾಗ, ಜಿಲ್ಲಾ ಧಿಕಾರಿಗಳು ಪ್ರತಿಕ್ರಿಯಿಸಿ, ರೈತರು ಕೂಡ ಉತ್ಪನ್ನ ಚೆನ್ನಾಗಿ ಒಣಗಿಸಿ ನೀಡಬೇಕು. ರಾಗಿ ಕನಿಷ್ಠ 12ರಷ್ಟು ತೇವಾಂಶ ಪ್ರಮಾಣಕ್ಕಿಂತ ಹೆಚ್ಚಿರಬಾರದು ಎಂದರು.

ರೈತ ಮುಖಂಡ ಬಲ್ಲೂರು ರವಿಕುಮಾರ್‌ ಮಾತನಾಡಿ, ಈಗಾಗಲೇ ಎಲ್ಲರೂ ಕೃಷಿ ಉತ್ಪನ್ನಗಳನ್ನು ಒಣಗಿಸಲು ಡ್ರೈಯರ್‌ ಅಳವಡಿಸಿಕೊಂಡಿದ್ದಾರೆ. ಅವುಗಳ ಮೂಲಕ ಧಾನ್ಯಗಳನ್ನು ಒಣಗಿಸುತ್ತಾರೆ. ಹಾಗಾಗಿ ಅಷ್ಟೊಂದು ತೇವಾಂಶವಿರುವುದಿಲ್ಲ. ಕೃಷಿ ಬೆಲೆ ಆಯೋಗವು ಭತ್ತ ಬೆಳೆದ ರೈತರಿಗೆ ಒಂದು ಕ್ವಿಂಟಾಲ್‌ಗೆ 2250 ರೂ. ಖರ್ಚು ಬರಲಿದೆ ಎಂಬುದಾಗಿ ತಿಳಿಸಿದೆ. ಆದರೆ, ಮಾರುಕಟ್ಟೆಯಲ್ಲಿ ಆ ಸಮಯದಲ್ಲಿ 1800 ರಿಂದ 1900 ರೂ. ಗಳಷ್ಟು ಬೆಲೆ ಇರುತ್ತದೆ. ಕಡಿಮೆ ಬೆಲೆಗೆ ಮಾರಿದರೆ ರೈತರಿಗೆ ನಷ್ಟವಾಗುತ್ತದೆ ಎಂದರು.

Advertisement

ಮತ್ತೋರ್ವ ರೈತ ಮುಖಂಡ ಮಾತನಾಡಿ, ರೈತರ ಹೊಲಗಳಿಗೆ ಬಂದು ಬೆಳೆ ಖರೀದಿಸುವುದಕ್ಕಿಂತ ಎಪಿಎಂಸಿ ಆವರಣದಲ್ಲಿ ಟೆಂಡರ್‌ ಮುಖಾಂತರ ಖರೀದಿಸುವುದು ಒಳ್ಳೆಯದು. ಇದರಿಂದ ರೈತರಿಗೆ ಉತ್ತಮ ಬೆಲೆ ದೊರೆಯಲಿದೆ ಎಂದು ಹೇಳಿದರು.

ಆಗ, ಜಿಲ್ಲಾಧಿಕಾರಿ ಮಾತನಾಡಿ, ಕೇವಲ ಸ್ಯಾಂಪಲ್‌ ಅಷ್ಟೇ ಎಪಿಎಂಸಿಗೆ ತರುವ ಬದಲು ಬೆಳೆದ ಬೆಳೆ ಸಂಪೂರ್ಣ ಎಪಿಎಂಸಿ ಮಾರುಕಟ್ಟೆಗೆ ತಂದರೆ ಹರಾಜು ಪ್ರಕ್ರಿಯೆ ಮಾಡಬಹುದು. ಸರ್ಕಾರ ಬೆಳೆಗಳಿಗೆ ಏನು ಬೆಲೆ ನಿಗದಿ ಮಾಡಿದೆಯೋ ಅದಕ್ಕಿಂತ 1
ರೂ. ಆದರೂ ಹೆಚ್ಚಿಗೆ ಸಿಗಬೇಕು ಎಂದರು.

ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್‌,
ಎಪಿಎಂಸಿ ಸಹಾಯಕ ನಿರ್ದೇಶಕ ಸೋಮಶೇಖರ್‌, ಕಾರ್ಯದರ್ಶಿ
ಪ್ರಭು, ರೈತ ಮುಖಂಡರಾದ ಕೆಂಗೋ ಹನುಮಂತಪ್ಪ, ಬಸವರಾಜಪ್ಪ, ಪಾಮೇನಹಳ್ಳಿ ಲಿಂಗರಾಜು, ದಿಳ್ಯಪ್ಪ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next