Advertisement

ಶಾಲಾ ಶೌಚಾಲಯ ನಿರ್ಮಿಸಲು ಮುಂದಾಗಿ

12:14 PM Jan 17, 2020 | Naveen |

ದಾವಣಗೆರೆ: ಸಾಮಾಜಿಕ ಜವಾಬ್ದಾರಿ ಹೊಣೆಗಾರಿಕೆಯ ಮೊದಲ ಹಂತವಾಗಿ ಸರ್ಕಾರಿ ಶಾಲೆಗಳಿಗೆ ಅತ್ಯಗತ್ಯವಾಗಿರುವ ಶೌಚಾಲಯಗಳ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಜಿ. ಬೀಳಗಿ ಜಿಲ್ಲೆಯ ವಿವಿಧ ಕೈಗಾರಿಕೆ, ಉದ್ದಿಮೆ, ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ.

Advertisement

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸಾಮಾಜಿಕ ಜವಾಬ್ದಾರಿಯುತ ಹೊಣೆಗಾರಿಕೆ ಯೋಜನೆಯ ಬಗ್ಗೆ ಪದಾಧಿಕಾರಿಗಳೊಂದಿಗೆ ಚರ್ಚಿಸಲು ಕರೆಯಲಾಗಿದ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜದಿಂದ ಲಾಭ ಪಡೆದುಕೊಂಡಿರುವ ಕೈಗಾರಿಕೆ, ಉದ್ದಿಮೆ, ಸಂಸ್ಥೆಗಳವರು ಲಾಭದಲ್ಲಿ ತಮ್ಮ ಶಕ್ತಿ ಅನುಸಾರ ಸಮಾಜಕ್ಕೆ ಕೊಡುಗೆ ನೀಡಬೇಕು. ಆ ಉದ್ದೇಶದಿಂದ ಸಾಮಾಜಿಕ ಜವಾಬ್ದಾರಿಯುತ ಹೊಣೆಗಾರಿಕೆ ಯೋಜನೆಯಡಿ ಜಿಲ್ಲೆಯ ವಿವಿಧ ಸಂಸ್ಥೆಗಳು, ಉದ್ದಿಮೆಗಳು, ಕೈಗಾರಿಕೆಗಳು, ಇಲಾಖೆಗಳು ಸಮಾಜಕ್ಕೆ ಉಪಯುಕ್ತವಾಗುವ ಕೈಂಕರ್ಯ ಮಾಡಬೇಕು. ಸರ್ಕಾರಿ ಯೋಜನೆಗಳ ಹೊರತಾಗಿಯೂ ಮಾಡಬೇಕಾದ ಕೆಲಸಗಳು ಅನೇಕ ಇವೆ. ಮೊದಲನೇ ಆದ್ಯತೆ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಸುಸಜ್ಜಿತ ಶೌಚಾಲಯ ನಿರ್ಮಿಸುವುದಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗದ 60 ಸರ್ಕಾರಿ ಶಾಲೆಗಳಲ್ಲಿ 8 ಲಕ್ಷ ರೂ. (ಒಂದು ಘಟಕಕ್ಕೆ) ವೆಚ್ಚದಲ್ಲಿ ಶೌಚಾಲಯ ಕಟ್ಟಲು ಸಂಸದರ ನೇತೃತ್ವದಲ್ಲಿ ಪಟ್ಟಿ ಮಾಡಲಾಗಿದೆ. ಜಿಲ್ಲೆಯ ವಿವಿಧ ಕೈಗಾರಿಕೆಗಳು, ಉದ್ಯಮಿಗಳು ಮತ್ತು ಸಂಸ್ಥೆಗಳು ಧನ ಸಹಾಯ ಮಾಡುವಂತೆ ಮೊದಲನೇ ಸಭೆಯಲ್ಲಿ ತಿಳಿಸಲಾಗಿತ್ತು. ಆಗ ಅನೇಕ ಸಂಸ್ಥೆಯವರು ಗೈರು ಹಾಜರಾಗಿದ್ದರು. ಇಂದಿನ ಸಭೆಯಲ್ಲಿ ಇರುವಂತಹವರು ನಿರ್ಧಾರ ಕೈಗೊಂಡಿರುವ ಬಗ್ಗೆ ತಿಳಿಸಬೇಕು ಎಂದು ಮನವಿ ಮಾಡಿದರು.

ಆದಿಶಕ್ತಿ ಆಟೋಮೊಬೈಲ್ಸ್‌ ವ್ಯವಸ್ಥಾಪಕ ಪರಶುರಾಮ್‌ ಮಾತನಾಡಿ, ಆಟೋಮೊಬೈಲ್‌ ಡೀಲರ್‌ಗಳು ಸಭೆ ಸೇರಿ ಚರ್ಚಿಸಿ ಶೌಚಾಲಯ ನಿರ್ಮಿಸುವ ಬಗ್ಗೆ ತಿಳಿಸುತ್ತೇವೆ ಎಂದರು.

Advertisement

ಗ್ರೀನ್‌ ಆಗ್ರೋ ಪ್ಯಾಕ್‌ ಸಂಸ್ಥೆಯ ಖಲೀಂ ಮಾತನಾಡಿ, ದಾವಣಗೆರೆ ತಾಲೂಕಿನ ಗಂಗನಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಒಂದು ಶೌಚಾಲಯ ನಿರ್ಮಿಸುವುದಾಗಿ ಹಿಂದಿನ ಸಭೆಯಲ್ಲಿ ನಾವು ಒಪ್ಪಿಗೆ ಸೂಚಿಸಿದ ಪ್ರಕಾರ ಅಲ್ಲಿ ಸ್ಥಳ ಪರಿಶೀಲನೆಯನ್ನೂ ನಡೆಸಲಾಗಿದೆ. ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ಕಟ್ಟಡಗಳೂ ಶಿಥಿಲಾವಸ್ಥೆಯಲ್ಲಿರುವುದನ್ನು ಕಂಡು ಸಂಸ್ಥೆ ವತಿಯಿಂದ ಕೊಠಡಿಗಳಿಗೂ ಕಾಯಕಲ್ಪ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಹರಿಹರೇಶ್ವರ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಹನುಮಂತರಾವ್‌ ಮಾತನಾಡಿ, ಸಣ್ಣ ಕೈಗಾರಿಕೋದ್ಯಮಿಗಳು ತಮ್ಮ ವಿಚಾರಗಳಿಂದ ಪ್ರೇರಿತಗೊಂಡಿದ್ದು ಸಭೆ ಸೇರಿ ನಮ್ಮ ಶಕ್ತಿ ಅನುಸಾರ ಕೊಡುಗೆ ನೀಡುತ್ತೇವೆ ಎಂದರು.

ಕಾರ್ಗಿಲ್‌ ಸಂಸ್ಥೆಯ ಅಧಿಕಾರಿ ರವೀಂದ್ರ ಕುಲಕರ್ಣಿ ಮಾತನಾಡಿ, ಹರಿಹರ ತಾಲೂಕಿನ ಹನಗವಾಡಿಯಲ್ಲಿ ಶೌಚಾಲಯ ಘಟಕ ನಿರ್ಮಿಸುವ ಬಗ್ಗೆ ಶೀಘ್ರದಲ್ಲೇ ತಿಳಿಸಲಾಗುವುದು ಎಂದರು. ಹರಿಹರದ ಗ್ರಾಸಿಮ್‌ ಸಂಸ್ಥೆಯ ಜನರಲ್‌ ಮ್ಯಾನೇಜರ್‌ ಶ್ರೀರಾಜ್‌ ಮಾತನಾಡಿ, ಶೌಚಾಲಯ ಘಟಕದ ಬಗ್ಗೆ ಶೀಘ್ರವೇ ಜಿಲ್ಲಾ ಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.

ಅಕ್ಕಿಗಿರಣಿ ಮಾಲಿಕರ ಸಂಘದ ಅಧ್ಯಕ್ಷರ ಪರವಾಗಿ ಬಂದ ಬಿ.ಎಂ. ನಂಜಯ್ಯ ಮಾತನಾಡಿ, ಸಂಘದ ವತಿಯಿಂದ ಕೊಡುಗೆ ಕೊಟ್ಟೇ ಕೊಡುತ್ತೇವೆ ಎಂದು ತಿಳಿಸಿದರು.

ಕಲ್ಯಾಣ ಮಂಟಪಗಳ ಸಂಘದ ಖಜಾಂಚಿ ನಲ್ಲೂರು ರಾಜಕುಮಾರ್‌ ಮಾತನಾಡಿ, ನರಹರಿ ಶೇಟ್‌ ಕಲ್ಯಾಣ ಮಂಟಪದ ವತಿಯಿಂದ 50 ಸಾವಿರ ಕೊಡುಗೆ ನೀಡುತ್ತೇನೆ ಹಾಗೂ ಸಂಘದ ವತಿಯಿಂದ ಶೌಚಾಲಯ ನಿರ್ಮಿಸಲು ಕೊಡುಗೆ ಸಂಗ್ರಹಿಸುವ ಬಗ್ಗೆ ಚರ್ಚಿಸಿ ನಂತರ ತಿಳಿಸುತ್ತೇವೆ ಎಂದರು.

ಟೆಕ್ಸ್‌ಟೈಲ್ಸ್‌ ಕೈಗಾರಿಕೋದ್ಯಮಿ ಡಿ. ಶೇಷಾಚಲ ಮಾತನಾಡಿ, ನಾವೆಲ್ಲ ಸಭೆ ಕರೆದು ಈ ಕೈಂಕರ್ಯಕ್ಕೆ ಕೊಡುಗೆ ನೀಡುವ ಬಗ್ಗೆ ಚರ್ಚಿಸಿ ತಿಳಿಸುತ್ತೇವೆ ಎಂದರು. ಕ್ರಷರ್‌ ಸಂಘದ ಅಧ್ಯಕ್ಷ ರವಿಗೌಡ, ಸಣ್ಣ ಕೈಗಾರಿಕೆಗಳ ಸಂಘದ ಪದಾಧಿ ಕಾರಿ ಕಲ್ಲೇಶ್‌ ಗೌಡ್ರು,ಖಾಸಗಿ ನರ್ಸಿಂಗ್‌ಹೋಂ ಸಂಘದ ಅಧ್ಯಕ್ಷ ಡಾ| ಮಾವಿನತೋಪು, ದಾವಣಗೆರೆ ಹರಿಹ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಎನ್‌.ಎ. ಮುರುಗೇಶ್‌ ಆರಾಧ್ಯ ಕೂಡ ಕೊಡುಗೆ ನೀಡುವುದಾಗಿ ತಿಳಿಸಿದರು.

ಕಳೆದ ಸಭೆಯಲ್ಲಿ ಮಹಿಳಾ ಠಾಣೆಗೆ ಶೌಚಾಲಯದ ಅವಶ್ಯಕತೆಯ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದರು. ಶೌಚಾಲಯ ನಿರ್ಮಿಸಿಕೊಡುವುದಾಗಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಅಧ್ಯಕ್ಷ ಶಂಭುಲಿಂಗಪ್ಪ ತಿಳಿಸಿದರು. ಜಿಲ್ಲಾಧಿಕಾರಿ ಮಹಾಂತೇಶ್‌ ಜಿ. ಬೀಳಗಿ, ಸಮಾಜಕ್ಕೆ ಕೊಡುಗೆ ನೀಡಬೇಕೆನ್ನುವ ಮನಸ್ಸಿರುವ ಎಲ್ಲರಿಗೆ ಅಭಿನಂದನೆ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಪೂಜಾರ್‌ ವೀರಮಲ್ಲಪ್ಪ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎಂ. ರಾಜೀವ್‌, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಸ್ಥೆಯ ಉಪ ನಿರ್ದೇಶಕ ಮಂಜುನಾಥ್‌, ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ, ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಅಧಿಕಾರಿ ಶಿವಕುಮಾರ್‌, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಸಂತೋಷ್‌, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಸುಶೃತ ಡಿ. ಶಾಸ್ತ್ರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next