Advertisement

ಸಂತ್ರಸರ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸಿ

11:19 AM Oct 25, 2019 | |

ದಾವಣಗೆರೆ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ಶಾಲೆ, ಅಂಗನವಾಡಿ, ಆಸ್ಪತ್ರೆ, ರಸ್ತೆ, ಕೆರೆ-ಕಟ್ಟೆಗಳ ದುರಸ್ತಿಗೆ ತಕ್ಷಣ ಕಾರ್ಯೋನ್ಮುಖರಾಗುವಂತೆ ಸಂಬಂಧಿಸಿದ ವಿವಿಧ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಸೂಚಿಸಿದ್ದಾರೆ.

Advertisement

ಗುರುವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೆರೆಪೀಡಿತ ಪರಿಹಾರ ಕಾರ್ಯದ ಬಗ್ಗೆ ಏರ್ಪಡಿಸಿದ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೆರೆ ಸಂತ್ರಸ್ತರಿಗೆ ಹಾಗೂ ಮಳೆಯಿಂದ ಹಾನಿಗೊಳಗಾದ ಶಾಲೆ, ಆಸ್ಪತ್ರೆ, ಕೆರೆ ಕಟ್ಟೆಗಳು, ರಸ್ತೆಗಳನ್ನು ಆಯಾ ಇಲಾಖೆಯ ಅನುದಾನದಲ್ಲಿ ತಕ್ಷಣ ಅಗತ್ಯವಿರುವ ದುರಸ್ತಿ ಕಾರ್ಯ ಮಾಡಿಸಿಕೊಳ್ಳಬೇಕು.

ಸಂಕಷ್ಟಕ್ಕೊಳಗಾಗಿರುವ ಜನರ ನೋವಿಗೆ ತ್ವರಿತಗತಿಯಲ್ಲಿ ಸ್ಪಂದಿಸಬೇಕು ಎಂದರು. ಕಳೆದ ನಾಲ್ಕೈದು ದಿನಗಳಿಂದ ಸುರಿದ ಭಾರಿ ಮಳೆಯಿಂದ ಉಂಟಾದ ಹಾನಿ ಸಂಬಂಧ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂದಾಜುಪಟ್ಟಿ ತಯಾರಿಸಿ, ಅವರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ತಾವು ಹಣ ಬಿಡುಗಡೆ ಮಾಡಿಸುವುದಾಗಿ ಸಚಿವರು ಅಧಿಕಾರಿಗಳಿಗೆ ತಿಳಿಸಿದರು.

ಮಳೆ ಹಾನಿ ಸಂಬಂಧದ ಪರಿಹಾರ ಕಾರ್ಯದಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಅಧಿಕಾರಿಗಳು ಉತ್ತಮ ರೀತಿ ಕೆಲಸ ಮಾಡಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಸಿಯಿಂದ ಹಾನಿ ಮಾಹಿತಿ: ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ, ಕಳೆದ ಅ.18 ರಿಂದ 22ರ ವರೆಗೆ ಜಿಲ್ಲೆಯಲ್ಲಿ ಹಲವೆಡೆ ಭಾರೀ ಮಳೆಯಾಗಿದೆ. ಅ.22 ರಂದು ದಾವಣಗೆರೆ ತಾಲೂಕಿನ ಪುಟಗನಾಳ್‌ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಪೀರಿಬಾಯಿ ಎಂಬುವವರು ಮೃತಪಟ್ಟಿದ್ದು, ಅವರ ಕುಟುಂಬದವರಿಗೆ ಆರ್‌ಟಿಜಿಎಸ್‌ ಮುಖಾಂತರ ರೂ.5 ಲಕ್ಷ ಪರಿಹಾರ ಮೊತ್ತ ಜಮೆ ಮಾಡಲಾಗಿದೆ. ನಗರದ ಶಂಕರವಿಹಾರ ಬಡಾವಣೆಯ 100ಕ್ಕೂ ಹೆಚ್ಚು ಮನೆಗಳಿಗೆ ಹಾಗೂ ಲೋಕಿಕೆರೆ ಗ್ರಾಮದ 22 ಮನೆಗಳಿಗೆ ನೀರು ನುಗ್ಗಿದ್ದು, ಅವರ ಮನೆಗಳಿಗೆ ಅಗತ್ಯವಾದ ತಿಂಡಿ-ಊಟದ ವ್ಯವಸ್ಥೆ ಮಾಡಲಾಗಿತ್ತು.

Advertisement

ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಎ.ಕೆ. ಬಸವರಾಜಪ್ಪ ಎಂಬುವರು ರಾತ್ರಿ ಮಳೆಯಿಂದ ತುಂಬಿ ಹರಿಯುತ್ತಿದ್ದ ಹಳ್ಳ ದಾಟುವಾಗ ನೀರಲ್ಲಿ ಕೊಚ್ಚಿಕೊಂಡು ಹೋಗಿರಬಹುದೆಂದು ಶಂಕಿಸಲಾಗಿದ್ದು, ಅವರ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಸಚಿವರ ಗಮನಕ್ಕೆ ತಂದರು.

ಹರಿಹರದ ಬೆಂಕಿನಗರ, ಆಶ್ರಯ ಕಾಲೋನಿ, ನೀಲಕಂಠ ನಗರ, ಕಾಳಿದಾಸ ನಗರ, ಶಿವನಾಗಪ್ಪ ಕಾಂಪೌಂಡ್‌ ಸುತ್ತಮುತ್ತ 150 ಮನೆಗಳಿಗೆ ನೀರು ನುಗ್ಗಿದ್ದು, ಹತ್ತಿರದ ಅಂಜುಮನ್‌ ಶಾದಿ ಮಹಲ್‌ನಲ್ಲಿ ಗಂಜಿ ಕೇಂದ್ರ ತೆರೆಯಲಾಗಿತ್ತು. ಆದರೆ ಸಂತ್ರಸ್ತರು ಕೇಂದ್ರಕ್ಕೆ ಬಾರದೇ ಇದ್ದದ್ದರಿಂದ ಅವರ ಮನೆಗಳಿಗೇ ಆಹಾರ ಸಾಮಗ್ರಿ ಪೂರೈಸಲಾಯಿತು. ಹರಿಹರ ತಾಲೂಕಿನ ಕೊಂಡಜ್ಜಿ ವೃತ್ತದ ಕರ್ಲಹಳ್ಳಿ ಗ್ರಾಮದ ಕಕ್ಕರಗೊಳ್ಳ ಹಳ್ಳವು ತುಂಬಿ ಹರಿದು, 13 ಮನೆಗಳಿಗೆ ನೀರು ನುಗ್ಗಿದ್ದರಿಂದ 60 ಜನರನ್ನು ಕೆ.ಐಎ.ಡಿ.ಬಿ ಗೋಡಾನ್‌ಗೆ ಸ್ಥಳಾಂತರಿಸಿ ಊಟದ ವ್ಯವಸ್ಥೆ ಮಾಡಲಾಗಿದೆ.

ಚನ್ನಗಿರಿ ತಾಲೂಕಿನಲ್ಲೂ ಅಡಕೆ, ಭತ್ತ, ಮೆಕ್ಕೆಜೋಳ ಬೆಳೆಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ 3 ಮನೆ ಸಂಪೂರ್ಣ ಬಿದ್ದು ಹೋಗಿವೆ. 7 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 872 ಮನೆಗಳು ಅಲ್ಪ ಸ್ವಲ್ಪ ಹಾನಿಗೊಳಗಾಗಿವೆ. ಒಟ್ಟು 14 ಜಾನುವಾರುಗಳು ಸಾವನ್ನಪ್ಪಿವೆ.

ಎಲ್ಲಾ ಸಂತ್ರಸ್ತರಿಗೆ ಎಸ್‌ಡಿಆರ್‌ಎಫ್‌/ಎನ್‌ಡಿಆರ್‌ ಎಫ್‌ ಮಾರ್ಗಸೂಚಿಯನ್ವಯ ಪರಿಹಾರ ವಿತರಿಸಲು ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾಳಜಿ ಕೇಂದ್ರ ಎನ್ನಿ: ಆಗ, ಸಚಿವರು ಪ್ರತಿಕ್ರಿಯಿಸಿ, ಸಂತ್ರಸ್ತರಿಗೆ ಆಹಾರ ಪೂರೈಸುವ ಕೇಂದ್ರಗಳನ್ನು ಗಂಜಿ ಕೇಂದ್ರ ಎನ್ನದಿರಿ. ಅವುಗಳನ್ನು ಕಾಳಜಿ ಕೇಂದ್ರ ಎಂದು ಕರೆಯಿರಿ. ಅಗತ್ಯ ಇರುವ ತನಕ ಕಾಳಜಿ ಕೇಂದ್ರದಲ್ಲಿ ಆಹಾರ ನೀಡಿ. ಮಳೆನೀರು ಮನೆಗಳಿಗೆ ನುಗ್ಗಿ ಸಣ್ಣಪುಟ್ಟ ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಷಣಕ್ಕೆ ಅವರ ಖಾತೆಗೆ ಹತ್ತು ಸಾವಿರ ರೂ. ಪಾವತಿಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ನಜ್ಮಾ ಪ್ರತಿಕ್ರಿಯಿಸಿ, ಇದುವರೆಗೆ ನಮ್ಮ ಜಿಲ್ಲೆಯಲ್ಲಿ 10 ಸಾವಿರ ಪರಿಹಾರ ನೀಡುವ ಆದೇಶವಿರಲಿಲ್ಲ. 23ರಂದು ಆ ಬಗ್ಗೆ ಸರ್ಕಾರದಿಂದ ಆದೇಶ ಬಂದಿದ್ದು , ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಾಡಿಗೆ ಹಣ ನೀಡಿ: ಸಂಪೂರ್ಣ ಕುಸಿದ ಮತ್ತು ಭಾಗಶಃ ಹಾನಿಗೊಳಗಾದ ಮನೆಗಳನ್ನು ಇನ್ನು ಮುಂದೆ ಒಂದೇ ವರ್ಗದಲ್ಲಿ ಸೇರಿಸಿ, ಸರ್ಕಾರ 5 ಲಕ್ಷ ರೂ. ಪರಿಹಾರ ನೀಡುತ್ತದೆ. ಮನೆ ಹಾನಿಗೊಳಗಾದ ಮಾಲಿಕರು ಅವರೇ ಮನೆ ನಿರ್ಮಿಸಿಕೊಂಡಲ್ಲಿ ತಕ್ಷಣಕ್ಕೆ 1 ಲಕ್ಷ ಬಿಡುಗಡೆ ಮಾಡಬೇಕು. 10 ತಿಂಗಳವರೆಗೆ 5 ಸಾವಿರ ರೂ. ನಂತೆ ಬಾಡಿಗೆ ಹಣ ನೀಡಬೇಕು. ಮನೆ ಕಟ್ಟಿಸಿಕೊಳ್ಳದಿದ್ದರೆ ಸರ್ಕಾರದಿಂದ ರಾಜೀವ್‌ ವಸತಿ ಯೋಜನೆಯಡಿ ಮನೆ ಕಟ್ಟಿಸಿಕೊಡಲು ಕ್ರಮ ಕೈಗೊಳ್ಳಬೇಕೆಂದರು. ಸಂತ್ರಸ್ತರು ಸಂಕೋಚ ಮಾಡಿಕೊಂಡು ಸಂಬಂಧಿ ಕರ ಮನೆಯಲ್ಲಿ ಇರುವುದು ಬೇಡ. ಬದಲಾಗಿ ಬಾಡಿಗೆ ಮನೆಯಲ್ಲಿರಲು 5 ಸಾವಿರ ರೂ. ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಇಲಾಖಾವಾರು ಮಾಹಿತಿ: ಆರ್‌ಡಿಪಿಆರ್‌ ಕಾರ್ಯಪಾಲಕ ಅಭಿಯಂತರ ಪರಮೇಶ್ವರಪ್ಪ , ಜಿಲ್ಲೆಯಲ್ಲಿ ನೆರೆಯಿಂದ ಒಟ್ಟು 160 ಕಿಮೀ ರಸ್ತೆ, 13 ಸೇತುವೆ ಹಾಗೂ 15 ಕೆರೆಗಳು ಹಾನಿಗೊಳಗಾಗಿವೆ. ರಸ್ತೆ ದುರಸ್ತಿಗೆ ಅಂದಾಜು 361.50 ಲಕ್ಷ ರೂ. ಸೇತುವೆಗಳಿಗೆ 67.50 ಲಕ್ಷ ಮತ್ತು ಕೆರೆಗಳಿಗೆ 42 ಲಕ್ಷದ ಅವಶ್ಯಕತೆ ಇದೆ. ಅಂದಾಜು ಸಿದ್ಧಪಡಿಸಲಾಗಿದ್ದು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಡಿಎಚ್‌ಓ ಡಾ| ರಾಘವೇಂದ್ರಸ್ವಾಮಿ, ಜಿಲ್ಲೆಯ 12 ಪಿಎಚ್‌ ಸಿಗಳಲ್ಲಿ ಹಾನಿ ಉಂಟಾಗಿದ್ದು, ಅಂದಾಜು 24 ಲಕ್ಷ ರೂ. ಅಗತ್ಯವಿದೆ ಎಂದರು.

ಶಿಕ್ಷಣ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ರವಿ, ಜಿಲ್ಲೆಯ ಒಟ್ಟು 155 ಶಾಲೆಗಳಲ್ಲಿನ 345 ಕೊಠಡಿಗಳು ಹಾಳಾಗಿದ್ದು, ದುರಸ್ತಿಗೆ 688 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ್‌, ಭೆ çರನಾಯಕನಹಳ್ಳಿ ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಕುಸಿದಿದೆ. ಹಾನಿಗೊಳಗಾಗಿರುವ 7 ಅಂಗನವಾಡಿಗಳನ್ನು ಬೇರೆಡೆ ಸ್ಥಳಾಂತರಿಸಿ, ದುರಸ್ತಿಗೆ ಕ್ರಮ ವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಪಿಡಬ್ಲ್ಯೂಡಿ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್‌, ಜಿಲ್ಲೆಯಲ್ಲಿ ನೆರೆಯಿಂದ ಹಾಳಾಗಿರುವ ರಸ್ತೆ ಹಾಗೂ ಸೇತುವೆ ದುರಸ್ತಿಗೆ ಒಟ್ಟು 253.50 ಲಕ್ಷದ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ಆಗ ಸಚಿವ ಈಶ್ವರಪ್ಪ, ಮೊದಲು ತಮ್ಮ ತಮ್ಮ ಇಲಾಖೆಯ ಅನುದಾನ, ಎನ್‌ಡಿಆರ್‌ಎಫ್‌ ನಿಧಿ  ಮೂಲಕ ತಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಕೆರೆ, ಕಟ್ಟೆ, ರಸ್ತೆ, ಶಾಲೆ ಇತರೆಗಳಿಗೆ ಅನುದಾನ ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಮುಖಾಂತರ ಶೀಘ್ರವಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದರು.

ಪ್ರತಿ ಶಾಸಕರಿಗೆ 25 ಕೋಟಿ ರೂ. ಅನುದಾನವನ್ನು ಸರ್ಕಾರ ಮಂಜೂರು ಮಾಡಿದ್ದು, ಯಾವ್ಯಾವ ಕಾಮಗಾರಿಗೆ ಅದನ್ನು ಉಪಯೋಗಿಸಬಹುದು ಎಂಬುದನ್ನು ಅವರೊಂದಿಗೆ ಚರ್ಚಿಸಿ, ಬಳಸಿಕೊಳ್ಳಲು ಕ್ರಮ ವಹಿಸಿ ಎಂದು ಸಲಹೆ ನೀಡಿದರು.

ಶಿಥಿಲಗೊಂಡ ಕೊಠಡಿಗಳಲ್ಲಿ ಯಾವುದೇ ಕಾರಣಕ್ಕೆ ಪಾಠ ಮಾಡಬಾರದು. ಮಕ್ಕಳ ಸುರಕ್ಷತೆ ಕಡೆ ಗಮನ ಹರಿಸಬೇಕು. ಕೊಠಡಿಗೆ ಒಂದಕ್ಕೆ 2 ಲಕ್ಷ ರೂ. ಅಂದಾಜುಪಟ್ಟಿ ತಯಾರಿಸದೇ ಪಿಡಬ್ಲ್ಯೂಡಿ ಅಭಿಯಂತರರಿಂದ ಪರಿಶೀಲಿಸಿ ಅಂದಾಜು ಪಟ್ಟಿ ತಯಾರಿಸಿ ಸಲ್ಲಿಸಬೇಕೆಂದು ಸೂಚಿಸಿದರು.

ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸಹ ಮಳೆಯಿಂದ ಉಂಟಾದ ಹಾನಿ ಬಗ್ಗೆ ಸಭೆ ಮಾಹಿತಿ ನೀಡಿ, ಅಗತ್ಯವಿರುವ ಪರಿಹಾರದ ಬಗ್ಗೆ ಸಚಿವರ ಗಮನಕ್ಕೆ ತಂದರು.

ಜಿಲ್ಲಾಧಿಕಾರಿಗಳು ಮಾತನಾಡಿ, ಪ್ರಸ್ತುತ ತಮ್ಮ ಪಿ.ಡಿ. ಖಾತೆಯಲ್ಲಿ 3.73 ಕೋಟಿ ಅನುದಾನ ಲಭ್ಯವಿದ್ದು ಹೆಚ್ಚುವರಿಯಾಗಿ 5 ರಿಂದ 8 ಕೋಟಿ ಅನುದಾನ ಬೇಕಿದೆ ಎಂದಾಗ, ಸಚಿವರು ಪ್ರತಿಕ್ರಿಯಿಸಿ ಜಿಲ್ಲೆಯಲ್ಲಿ ನೆರೆ ಹಾವಳಿ ಕಡಿಮೆ ಇದೆ. ಆಯಾ ಇಲಾಖೆಗಳಲ್ಲಿ ಇರುವ ಅನುದಾನ, ಜಿಲ್ಲಾಡಳಿತದ ಅನುದಾನದಲ್ಲಿ ತಕ್ಷಣದ ರಿಪೇರಿ, ದುರಸ್ತಿ ಮಾಡಿಕೊಳ್ಳಬೇಕು. ಕೆರೆ, ಕಟ್ಟೆ, ರಸ್ತೆಯಂತಹ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ, ಮಹಾನಗರಪಾಲಿಕೆ ಚುನಾವಣೆ ಮುಗಿದ ನಂತರ ಏನೇನು ಕೆಲಸ ಆಗಿದೆ ಎಂದು ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು.

ಬೆಳೆ ಹಾನಿ ಪರಿಹಾರಕ್ಕೆ ಸಂಬಂ ಧಿಸಿದಂತೆ ಕೇಂದ್ರ ಸರ್ಕಾರದಿಂದ 1200 ಕೋಟಿ ರೂ. ಬಂದಿದ್ದು, ಅದರಲ್ಲಿ 1053 ಕೋಟಿ ರೂ. ಶೀಘ್ರದಲ್ಲೇ ರೈತರಿಗೆ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರ್‌ಗಳು, ತಮ್ಮ ತಮ್ಮ ತಾಲೂಕಿನಲ್ಲಿ ಸಂಭವಿಸಿರುವ ಹಾನಿ, ಕೈಗೊಳ್ಳಬೇಕಿರುವ ಕಾರ್ಯ, ಲಭ್ಯವಿರುವ ಅನುದಾನದ ಬಗ್ಗೆ ಸಚಿವರ ಗಮನ ಸೆಳೆದರು.

ಸಭೆಯಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ.ಎ. ರವೀಂದ್ರನಾಥ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಮಹಾನಗರಪಾಲಿಕೆ ಆಯುಕ್ತ ಮಂಜುನಾಥ ಆರ್‌.ಬಳ್ಳಾರಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next