Advertisement

ಕೆಲಸದಲ್ಲಿ ದೇವರ ಕಾಣುವುದೇ ಕಾಯಕ

11:28 AM Feb 03, 2020 | Naveen |

ದಾವಣಗೆರೆ: ಕಾಯಕ ಮತ್ತು ನೌಕರಿ ಪರಸ್ಪರ ಭಿನ್ನ. ಕೆಲಸದಲ್ಲೇ ದೇವರನ್ನು ಕಂಡಾಗ ಅದು ಕಾಯಕವಾಗುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಜಿ. ಬೀಳಗಿ ತಿಳಿಸಿದ್ದಾರೆ.

Advertisement

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಮಡಿವಾಳ ಮಾಚಿದೇವ ಸಮಾಜ ಮತ್ತು ಜಿಲ್ಲಾ ಸವಿತಾ ಸಮಾಜ ಸಂಯುಕ್ತಾಶ್ರಯದಲ್ಲಿ ವಿನೋಬ ನಗರದ ಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ನಡೆದ ಶ್ರೀ ಮಡಿವಾಳ ಮಾಚಿದೇವ ಮತ್ತು ಶ್ರೀ ಸವಿತಾ ಮಹರ್ಷಿ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮರ ಕಾಯಕ ಮತ್ತು ತತ್ವ-ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದಾಗ ಜಯಂತಿಗಳು ಅರ್ಥಪೂರ್ಣವಾಗುತ್ತವೆ ಎಂದರು.

ಮಾಡುವಂತಹ ಯಾವುದೇ ಕೆಲಸದಲ್ಲಿ ದೇವರನ್ನು ಕಾಣಬೇಕು. ಲಿಂಗ ಹಿಡಿದು ಧ್ಯಾನ ಮಾಡಿದರೆ ಮಾತ್ರ ದೇವರನ್ನು ಕಾಣಲು ಸಾಧ್ಯ ಎಂದುಕೊಳ್ಳದೇ ಮಾಡುವ ಕೆಲಸದಲ್ಲೇ ದೇವರನ್ನು ಕಾಣುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ದೇವರು ದಯಪಾಲಿಸಿರುವ ಕೆಲಸವನ್ನು ನಿಷ್ಠೆಯಿಂದ ಮಾಡಿ, ಆ ಕೆಲಸದ ಫಲವನ್ನು ಕೇವಲ ನಾವು ಮತ್ತು ನಮ್ಮವರಿಗಷ್ಟೇ ಎಂದುಕೊಳ್ಳದೆ ಸಮಾಜಕ್ಕೆ ದಾಸೋಹ ನೀಡಿದರೆ ಅದು ಕಾಯಕ ಆಗುತ್ತದೆ ಎಂದು ತಿಳಿಸಿದರು. ರಾಜ್ಯದಲ್ಲಿ ಸಂಭವಿಸಿರುವ ಅತಿವೃಷ್ಟಿ ಹಿನ್ನಲೆಯಲ್ಲಿ ಮಡಿವಾಳ ಮಾಚಿದೇವ ಮತ್ತು ಸವಿತಾ ಮಹರ್ಷಿ ಜಯಂತಿಯನ್ನು ಸರಳವಾಗಿ ಆಚರಿಸುವ ಮೂಲಕ ಜಯಂತಿಯ ಅನುದಾನವನ್ನು ಮುಖ್ಯಮಂತ್ರಿಗಳ ಪರಿಹಾರ ನಿ ಧಿಗೆ ನೀಡಲಾಗುವುದು. ಪ್ರಕೃತಿ ವಿಕೋಪದಿಂದ ನಲುಗಿರುವ ಜನರಿಗೆ ನಮ್ಮ ಜಿಲ್ಲೆಯಿಂದ ಸಹಾಯ ನೀಡುವ ಉದ್ದೇಶದಿಂದ ಸರಳವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಮಡಿವಾಳರ ಮಾಚಿದೇವರು ಮತ್ತು ಸವಿತಾ ಸಮಾಜದ ಹಡಪದ ಅಪ್ಪಣರು 770 ಶರಣರಲ್ಲಿ ಪ್ರಮುಖ ಶರಣರು. ತಮ್ಮದೇ ಆದ ಕಾಯಕ ನಿಷ್ಠೆಯ ಮೂಲಕ ಜನಪ್ರಿಯರಾಗಿದ್ದು, ಸಮಾಜದಲ್ಲಿ ಅಸಮಾನತೆ ವಿರುದ್ಧ ತಮ್ಮ ವಚನಗಳ ಮೂಲಕ ಜನರಿಗೆ ತಿಳಿಸಿದ ಮಹಾ ಶರಣರು. ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

Advertisement

ಮಹಾತ್ಮರು, ಶರಣರ ತತ್ವ ಮತ್ತು ಆದರ್ಶಗಳನ್ನು ಪಾಲಿಸುವ ಮೂಲಕ ನಾವೆಲ್ಲರು ದಿನದ 24 ಗಂಟೆಯಾಗದಿದ್ದರೂ ಒಂದೆರೆಡು ನಿಮಿಷವಾದರೂ ಶರಣರಾಗಲು ಪ್ರಯತ್ನಿಸೋಣ. ನಾವೆಲ್ಲರೂ ಒಂದೇ… ಎಂಬ ಭಾವನೆಯಿಂದ ಬದುಕಬೇಕು. ಪ್ರೀತಿ, ಸಹಕಾರವಿದ್ದರೆ ನಾನು ಶರಣರಂತೆ ಕಾಯಕ ಮಾಡಲು ಸಿದ್ಧನಿದ್ದೇನೆ ಎಂದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪದ್ಮಾ ಬಸವಂತಪ್ಪ ಮಾತನಾಡಿ, ಮಹನೀಯರು ಸಮಾನತೆ, ಸೌಹಾರ್ದತೆಯ ತತ್ವಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸಾಮಾನ್ಯ ಭಾಷೆಯಲ್ಲಿ ವಚನಗಳನ್ನು ರಚಿಸುವುದರ ಮೂಲಕ ಶರಣರೆನಿಸಿಕೊಂಡಿದ್ದಾರೆ. ಶರಣರ ತತ್ವ ಪದಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಆಚರಣೆಗಳನ್ನು ಸಾರ್ಥಕಗೊಳಿಸಬೇಕು ಎಂದು ತಿಳಿಸಿದರು.

ಬೀದರ್‌ನ ಬಸವ ಅನುಭವ ಮಂಟಪದಲ್ಲಿ ಎಲ್ಲಾ ಶರಣರ ತತ್ವ ಆದರ್ಶಗಳನ್ನು ಹಾಗೂ ಶರಣರ ಜೀವನವನ್ನು ಸಾರುವ ಕುಟೀರಗಳನ್ನು ಅಳವಡಿಸಲಾಗಿದೆ. ರಾಜ್ಯದಲ್ಲಿ 31 ಶರಣರ ಜಯಂತಿಗಳನ್ನು ಆಚರಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಎಲ್ಲಾ ಶರಣರ ಜಯಂತಿಗಳನ್ನು ಒಂದೇ ಕಡೆ ಆಚರಿಸಿ ಅವರ ತತ್ವ ಆದರ್ಶಗಳನ್ನು ಇಂದಿನ ಯುವಜನಾಂಗಕ್ಕೆ ಪರಿಚಯಿಸುವ ಪ್ರಯತ್ನವಾಗಬೇಕು ಎಂದು ಸಲಹೆ ನೀಡಿದರು.

ಡಾ| ಅನಿತ ದೊಡ್ಡಗೌಡರ್‌ ಮಾತನಾಡಿ, ಅರಸುತನ ಮೇಲಲ್ಲ, ಮಡಿವಾಳ ವೃತ್ತಿ ಕೀಳಲ್ಲ…
ಎನ್ನುವ ಮಾತಿನಂತೆ ಮಡಿವಾಳ ಮಾಚಿದೇವರು ತಮ್ಮ ಛಲದ ಕಾಯಕವನ್ನು ಜಗತ್ತಿಗೆ ತೋರಿಸಿದ್ದಾರೆ. ಅವರು ಶಿವಶರಣರ ಬಟ್ಟೆ ಸ್ವಚ್ಛಗೊಳಿಸುವ ಕಾಯಕದ ಜೊತೆ ಕ್ಷತ್ರಿಯರೂ ಆಗಿದ್ದರು ಎಂದು ತಿಳಿಸಿದರು.

12ನೇ ಶತಮಾನದಲ್ಲಿ ಮಹಿಳೆಯರ, ಮಕ್ಕಳ ಸ್ಥಿತಿಯು ಶೋಚನೀಯವಾಗಿತ್ತು. ಮಹಿಳೆಯರು ಅಸಹಾಯಕರು ಮತ್ತು ಅಶಕ್ತರಾಗಿದ್ದರು. ಅಂತಹ ಕಾಲದಲ್ಲಿ ವಚನಗಳು ತುಂಬಾ ಪ್ರಭಾವ ಬೀರಿದ್ದವು ಎಂದು ತಿಳಿಸಿದರು. ವಕೀಲ ಎನ್‌. ರಂಗಸ್ವಾಮಿ ಮಾತನಾಡಿ, ಸವಿತಾ ಸಮಾಜದ ಮೂಲ ಪುರುಷ ಸವಿತಾ ಮಹರ್ಷಿಗಳು ಶ್ರೀವಿಷ್ಣು ನಾಮದಿಂದ ಸೃಷ್ಟಿಯಾದವರು. ಲೋಕದ ಕಲ್ಯಾಣಕ್ಕಾಗಿ ಅವರನ್ನು ಸೃಷ್ಟಿಸಲಾಯಿತು ಎಂದು ಸವಿತಾ ಸಮಾಜದ ಕಾರ್ಯ ವಿಧಾನವನ್ನು ವಿವರಿಸಿದರು.

ಒಬ್ಬ ಮನುಷ್ಯನಿಗೆ ಹುಟ್ಟಿನಿಂದ ಸಾಯುವವರೆಗೆ ಕ್ಷೌ ರಿಕರ ಅಗತ್ಯವಿದೆ. ಮನುಷ್ಯನ ಪಾಪವನ್ನು ತೊಳೆಯುವ ಕೆಲಸವನ್ನು ಕ್ಷೌರಿಕರು ಮಾಡುತ್ತಾರೆ. ಅಷ್ಟೇ ಅಲ್ಲದೆ ಸಂಗೀತದಲ್ಲಿ ಹಾಗೂ ಸಂಗೀತ ವಾದ್ಯವನ್ನು ನುಡಿಸುವ ಕಾರ್ಯದಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿದ ಸಮುದಾಯವಾಗಿದೆ. ಕದಂಬ, ಪಲ್ಲವರ ಇತಿಹಾಸ ಕಾಲದಲ್ಲಿಯೇ ಹಡಪದ ಅಣ್ಣಪ್ಪನವರು ತಮ್ಮ ನಿಷ್ಠೆಯ ಕಾಯಕವನ್ನು ಮಾಡುತ್ತಾ ಬಂದವರು ಎಂದು ತಿಳಿಸಿದರು.

ಬಾಲರಾಜ್‌, ಧನಂಜಯ, ನಾಗೇಂದ್ರಪ್ಪ ಹಾಗೂ ವಿವಿಧ ಸಮಾಜದ ಮುಖಂಡರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿದರು. ಆವರಗೆರೆ ಎಚ್‌.ಜಿ. ಉಮೇಶ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next