Advertisement

ಚುನಾವಣಾ ಪ್ರಣಾಳಿಕೆ ನಮ್ಮ ಪಕ್ಷದಲ್ಲ, ಜನರದ್ದು : ಉಪೇಂದ್ರ

11:39 AM Apr 11, 2019 | Naveen |

ದಾವಣಗೆರೆ: ಜನಸಾಮಾನ್ಯರ ಕೈಗೆ ಸುಲಭವಾಗಿ ಸಿಗುವ,
ಪಾರದರ್ಶಕವಾಗಿ ಜನರ ಮಧ್ಯೆ ಇರುವ ವ್ಯಕ್ತಿ ಚುನಾಯಿತರಾಗಬೇಕೆಂಬ
ಉದ್ದೇಶ ಹೊಂದಿರುವ ಉತ್ತಮ ಪ್ರಜಾಕೀಯ ಪಕ್ಷದಿಂದ ದಾವಣಗೆರೆ
ಲೋಕಸಭಾ ಕ್ಷೇತ್ರದಲ್ಲಿ ಗಣೇಶ್‌ ಬಿ.ಎ. ಎಂಬುವರನ್ನು ಕಣಕ್ಕಿಳಿಸಲಾಗಿದೆ
ಎಂದು ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.

Advertisement

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು,
ನಾವು ಯಾರನ್ನೂ ದೂಷಿಸುವುದಿಲ್ಲ. ಮತ್ತೊಬ್ಬರನ್ನ ನಿಂದಿಸುವುದಿಲ್ಲ.
ನಾವೇನು ಮಾಡುತ್ತೇವೆ ಎಂಬುದನ್ನು ಮಾತ್ರ ಹೇಳುತ್ತೇವೆ. ಜತೆಗೆ ನಿಮ್ಮ
ಸಮಸ್ಯೆ, ಬೇಡಿಕೆಯ ಪ್ರಣಾಳಿಕೆ ಕೊಡಿ ಎಂಬುದಾಗಿ ಜನರನ್ನೇ ಕೇಳಲಿದ್ದೇವೆ
ಎಂದರು.

ದೇಶದಲ್ಲಿ ಸುದೀರ್ಘ‌ 72 ವರ್ಷಗಳ ಕಾಲದ ಪ್ರಜಾಪ್ರಭುತ್ವದಲ್ಲಿ
ರಾಜಕೀಯದ ಕೊಡುಗೆ ಏನೇಂಬುದು ಎಲ್ಲರಿಗೂ ಗೊತ್ತಿದೆ.
ನಮಗೇನೂ ಸೋಲಿನ ಬಗ್ಗೆ ಭಯವಿಲ್ಲ. ನಮ್ಮದೊಂದು
ಬದಲಾವಣೆ ಪ್ರಯತ್ನವಷ್ಟೇ. ಜನ ಬದಲಾಗುವವರೆಗಗೂ ಪ್ರಯತ್ನ
ಮುಂದುವರಿಯಲಿದೆ. ಮುಂದೊಂದು ದಿನ ಅದು ಸಾಕಾರವಾಗುವ ಭರವಸೆ
ಇದೆ ಎಂದು ಹೇಳಿದರು.

ರಾಜಕೀಯ ಎಂಬುದೀಗ ವ್ಯಾಪಾರವಾಗಿದೆ. ದೇಶಪ್ರೇಮ
ನನ್ನಲ್ಲೂ ಇದೆ. ಸುಳ್ಳು ಭರವಸೆ ಕೊಡುವ ಅನಿವಾರ್ಯತೆ ಇಲ್ಲ. ಚುನಾವಣೆ ಈಗ ಕೇವಲ ಶೇ. 20 ಜನರ ಕೈಯಲ್ಲಿದೆ. ಉಳಿದ ಶೇ. 80 ಜನರ ಪಾಲ್ಗೊಳ್ಳುವಿಕೆ
ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ನಾವು ಪ್ರಯತ್ನಕ್ಕೆ ಮುಂದಾಗಿದ್ದೇವೆ. ತಕ್ಷಣವೇ
ನಮಗೆ ಫಲಿತಾಂಶ ಸಿಗದಿರಬಹುದು.

ನಮಗೆ ಬೇಕಿರುವುದು ಜನಸಾಮಾನ್ಯರ ಪಕ್ಷ. ನಮ್ಮದೊಂದು ಮೈಕ್ರೋ ಮಟ್ಟದ ಯೋಜನೆ. ಇದರಲ್ಲಿ ಸಾರ್ವಜನಿಕರ ಭಾಗಿತ್ವ ಬಹಳ ಮುಖ್ಯ. ನಮ್ಮ
ಪ್ರಯತ್ನಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಇದು ನಮಗೆ
ಉತ್ಸಾಹ ತುಂಬಿದೆ ಎಂದು ತಿಳಿಸಿದರು.

Advertisement

ನಮ್ಮ ಅಭ್ಯರ್ಥಿ ರೋಡ್‌ ಶೋ, ರ್ಯಾಲಿ ನಡೆಸಿದರೆ ಅದರಿಂದ ತೊಂದರೆ
ಆಗುವುದು ಜನಸಾಮಾನ್ಯರಿಗಲ್ಲವೇ? ಎಂದು ಪ್ರಶ್ನಿಸಿದ ಉಪೇಂದ್ರ,
ಸಭೆ ಸಮಾರಂಭ ನಡೆಸುವುದಿಲ್ಲ. ಸಾಮಾಜಿಕ ಜಾಲತಾಣ, ಮಾಧ್ಯಮ
ಹಾಗೂ ಕರಪತ್ರಗಳ ಮೂಲಕ ಜನರನ್ನು ತಲುಪಲು ಪ್ರಯತ್ನಿಸುತ್ತೇವೆ ಎಂದರು. ನಮ್ಮ ಅಭ್ಯರ್ಥಿ ವೆಚ್ಚ ಮಾಡುವುದು ಕೇವಲ 30 ರಿಂದ 40 ಸಾವಿರ ರೂ. ಮಾತ್ರ. ಅದು ಕೂಡ ಠೇವಣಿ ಸೇರಿ. ಚುನಾವಣಾ ಆಯೋಗ ಅಭ್ಯರ್ಥಿಗೆ
70 ಲಕ್ಷ ನಿಗದಿ ಮಾಡಿದ್ದರೂ ಕೆಲವರು 70 ಕೋಟಿ ರೂ. ಖರ್ಚು
ಮಾಡುವುದು ಎಲ್ಲರಿಗೂ ಗೊತ್ತಿದೆ. ಜನಸಾಮಾನ್ಯರಿಗೆ ತೊಂದರೆ ಆಗದ
ರೀತಿ ಚುನಾವಣೆ ನಡೆಯಬೇಕೆಂದು ನಮ್ಮ ಉದ್ದೇಶ. ಅ ದಾರಿಯಲ್ಲಿ ನಾವು
ಸಾಗುತ್ತಿದ್ದೇವೆ ಎಂದು ತಮ್ಮ ಪಕ್ಷದ ಸಿದ್ಧಾಂತ ವಿವರಿಸಿದರು.

ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಯಾವುದೇ ಫಂಡ್‌ ನೀಡಿಲ್ಲ. ಎಲ್ಲ
ಅವರೇ ನಿಭಾಯಿಸುತ್ತಾರೆ. ಹಣ ಖರ್ಚು ಮಾಡಿ ಚುನಾವಣೆ ನಡೆಸುವ
ಬಗ್ಗೆ ನಮ್ಮ ವಿರೋಧವಿದೆ. ಜನರ ಕೈಗೆ ಸುಲಭವಾಗಿ ಸಿಗುವ ವ್ಯಕ್ತಿ
ಸಂಸದರಾಗಬೇಕು. ದಾವಣಗೆರೆ ಕ್ಷೇತ್ರದಲ್ಲಿ ಗಣೇಶ್‌ ಬಿ.ಎ. ನಮ್ಮ ಪಕ್ಷದ
ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಅವರ ಪರ ಪ್ರಚಾರಕ್ಕೆ ನಾನೇ ಬಂದಿದ್ದೇನೆ ಎಂದರು.
ಬಳ್ಳಾರಿ ಲೋಕಸಭಾ ಕ್ಷೇತ್ರ ಹೊರತುಪಡಿಸಿ ರಾಜ್ಯದ 27
ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬಳ್ಳಾರಿಯಲ್ಲಿ ಸೂಕ್ತ
ಅಭ್ಯರ್ಥಿ ಸಿಗದ ಕಾರಣ ಆ ಕ್ಷೇತ್ರದಲ್ಲಿ ಸ್ಪರ್ಧಿಸಲಿಲ್ಲ. ಸಿನಿಮಾ ಕಲಾವಿದರು
ಪ್ರಚಾರಕ್ಕೆ ಬಂದು ಹೇಳಿದರೆ ಬದಲಾವಣೆ ಆಗದು. ನಮ್ಮ ಸ್ವಂತಿಕೆ
ಇರಬೇಕು. ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ವ್ಯಕ್ತಿ ಆಯ್ಕೆಯಾಗಬೇಕೆಂಬ
ಆಪೇಕ್ಷೆ ನಮ್ಮದು. ಈ ಬದಲಾವಣೆಗೆ ಸಾಕಷ್ಟು ಸಮಯಬೇಕಿದೆ. ನಮ್ಮಿಂದ
ಆಗದು ಎಂದರೆ ಏನೂ ಆಗುವುದಿಲ್ಲ.ನಮಗೆ ಅತಿ ಬುದ್ಧಿವಂತರು ಬೇಕಾಗಿಲ್ಲ. ಮುಗ್ಧರು ಬೇಕಿದೆ. ನಾವು ವಿಭಿನ್ನ ಮಾರ್ಗದಲ್ಲಿ ಸಕಾರಾತ್ಮಕ ಚಿಂತನೆ ಮುಂದೆ ಸಾಗಬೇಕಿದೆ ಎಂದು ಅವರು ಹೇಳಿದರು.

ಪಕ್ಷದ ಅಭ್ಯರ್ಥಿ ಗಣೇಶ್‌ ಬಿ.ಎ. ಮಾತನಾಡಿ, ನನ್ನ ಆಲೋಚನೆಗೆ
ಈಗ ವೇದಿಕೆ ಸಿಕ್ಕಿದೆ. ಸಂದರ್ಶನ, ಲಿಖೀತ ಪರೀಕ್ಷೆ ಮೂಲಕ ನನ್ನನ್ನು
ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ಚುನಾವಣೆಯಲ್ಲಿ ಗೆದ್ದಲ್ಲಿ ಜನರ ಸಂಪರ್ಕ ಸೇತುವೆಯಾಗಿ ಪಾರ್ಲಿಮೆಂಟ್‌ನಲ್ಲಿ ಕಾರ್ಮಿಕನಾಗಿ
ಕೆಲಸ ಮಾಡುವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next