ದಾವಣಗೆರೆ: ಕುಡಿಯುವುದಕ್ಕೆ ಹಣ ಕೊಡಲಿಲ್ಲ ಮತ್ತು ಲೈಂಗಿಕ ಕ್ರಿಯೆಗೆ ಸಹಕಾರ ನೀಡಲಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿಗೆ ದಾವಣಗೆರೆಯ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 11 ಸಾವಿರ ರೂಪಾಯಿ ದಂಡ ವಿಧಿಸಿದೆ.
ಹರಿಹರ ಸಮೀಪದ ಅಮರಾವತಿ ಗ್ರಾಮದ ಮರಿಯಪ್ಪ (54) ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿ.
2020ರ ಫೆ. 19 ರಂದು ಅಮರಾವತಿ ಗ್ರಾಮದ ಮಲ್ಲಿಕಾರ್ಜುನ ಬಡಾವಣೆಯಲ್ಲಿ ಆರೋಪಿ ಮರಿಯಪ್ಪ ಹೆಂಡತಿ ಸೌಭಾಗ್ಯಮ್ಮನ ಜೊತೆ ಕುಡಿಯುವದಕ್ಕೆ ಹಣ ಕೊಡಲಿಲ್ಲ ಎಂದು ಜಗಳವಾಡಿದ್ದ. ನಂತರ ಲೈಂಗಿಕ ಕ್ರಿಯೆಗೆ ಸಹಕಾರ ನೀಡಲಿಲ್ಲ ಎಂಬ ವಿಚಾರಕ್ಕೆ ಬೇಸರದಿಂದ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದನು.
ಇದನ್ನೂ ಓದಿ:‘ದೇಶದ ಜನರಿಗೆ ಬುದ್ದಿಯಿಲ್ಲ ಎಂದು ತಿಳಿದಿದ್ದೀರಾ..’: ಆದಿಪುರುಷ್ ತಂಡಕ್ಕೆ ಕೋರ್ಟ್ ತರಾಟೆ
ಪ್ರಕರಣ ದಾಖಲಿಸಿಕೊಂಡ ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವೃತ್ತ ನಿರೀಕ್ಷಕರಾಗಿದ್ದ ಯು. ಸತೀಶ್ ಕುಮಾರ್ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ದಾವಣಗೆರೆಯ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜೆ.ವಿ. ವಿಜಯನಂದ ಆರೋಪಿ ಮರಿಯಪ್ಪನಿಗೆ ಜೀವಾವಧಿ ಶಿಕ್ಷೆ ಹಾಗೂ 11 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕ ಸತೀಶ್ ಸರ್ಕಾರದ ಪರ ವಾದ ಮಂಡಿಸಿದ್ದರು.