Advertisement

ಜಯಂತಿಗಳು ನಮ್ಮಲ್ಲಿ ಪರಿವರ್ತನೆ ತರಲಿ: ನ್ಯಾ|ಕೆಂಗಬಾಲಯ್ಯ

05:15 PM Feb 03, 2020 | Naveen |

ದಾವಣಗೆರೆ: ಯಾವುದೇ ಮಹನೀಯರ, ದಾರ್ಶನಿಕರ ಭಾವಚಿತ್ರ ಇಟ್ಟು ಪೂಜೆ ಮಾಡಿದಾಕ್ಷಣ ಜಯಂತ್ಯುತ್ಸವಕ್ಕೆ ಅರ್ಥ ಬರುವುದಿಲ್ಲ. ಆಚರಣೆ ಮಾಡುವರಲ್ಲಿ ಒಂದಿಷ್ಟಾದರೂ ಪರಿವರ್ತನೆಯಾದಲ್ಲಿ ನಿಜವಾದ ಅರ್ಥ ಬರುತ್ತದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆಂಗಬಾಲಯ್ಯ ತಿಳಿಸಿದರು.

Advertisement

ಭಾನುವಾರ ನಿಟುವಳ್ಳಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಹೆಣ್ಣು ಮಕ್ಳಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜಯಂತಿಗಳಿಗೆ ನೈಜ ಅರ್ಥ ಬರುವಂತೆ ಮಹನೀಯರು, ದಾರ್ಶನಿಕರ ತತ್ವಾದರ್ಶ ಪಾಲನೆ ಮಾಡಬೇಕು ಎಂದರು.

ಸ್ವಾಮಿ ವಿವೇಕಾನಂದರ ಮೂಲ ಹೆಸರು ನರೇಂದ್ರ. ಚಿಕ್ಕ ವಯಸ್ಸಿನಲ್ಲೇ ಹೇಳುತ್ತಿದ್ದ ರಾಮಾಯಣ, ಮಹಾಭಾರತ ಮುಂತಾದ ಕಥೆಗಳನ್ನ ಆಲಿಸುತ್ತಿದ್ದ ಅವರು ಆಗಲೇ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡಿದ್ದರು. ಮುಂದೆ ರಾಮಕೃಷ್ಣ ಪರಮಹಂಸರ ಪರಮಶಿಷ್ಯನಾಗಿ ವಿಶ್ವ ಖ್ಯಾತಿಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.

ಈಗ ಅನೇಕರು ಪ್ರತಿಶತ ಅಂಕ ಪಡೆಯುವ ಮೂಲಕ ರ್‍ಯಾಂಕ್‌ ಪಡೆಯುತ್ತಾರೆ. ನಮ್ಮ ಸುತ್ತಮುತ್ತಲಿನವರು, ಸಮಾಜದ ಸಂಕಷ್ಟಕ್ಕೆ ಮಿಡಿಯುವ, ಸ್ಪಂದಿಸುವ ಗುಣವಿಲ್ಲದೆ ಹೋದರೆ ಪಡೆದಂತಹ ರ್‍ಯಾಂಕ್‌ ನಿರರ್ಥಕ ಎಂದು ತಿಳಿಸಿದರು.

ತಂದೆ-ತಾಯಿ ಮಕ್ಕಳಲ್ಲಿ ಸ್ವಾಮಿ ವಿವೇಕಾನಂದರ ಸಂಸ್ಕಾರವನ್ನು ಬಿತ್ತಬೇಕು. ಮೊಬೈಲ್‌, ಟಿವಿ ಬಿಟ್ಟು ನಮ್ಮ ಮಕ್ಕಳಿಗೆ ನೀತಿ ಕಥೆಗಳನ್ನು ಹೇಳಬೇಕು. ನಮ್ಮನ್ನು ಪರಿಶೋಧಿಸಿಕೊಳ್ಳಬೇಕು ಎಂದು ತಿಳಿಸಿದರು.

Advertisement

ಯುವಜನಾಂಗ ಓದುವ ಹಂತದಲ್ಲೇ ಪ್ರೀತಿ, ಪ್ರೇಮದ ಹೆಸರಲ್ಲಿ ದಾರಿ ತಪ್ಪುತ್ತಿದೆ ಎಂಬುದನ್ನು ಅರಿತಿದ್ದ ವಿವೇಕಾನಂದರು ಪ್ರೀತಿಯ ಪರಿಕಲ್ಪನೆಯನ್ನು ತಮ್ಮ ಪುಸ್ತಕಗಳಲ್ಲಿ ಬರೆದು ಸಂದೇಶ ನೀಡಿದರು. ಆದರೆ ಅನೇಕರು ಇಂದು ಪುಸ್ತಕಗಳನ್ನೇ ಓದುತ್ತಿಲ್ಲ. ಸಂಸ್ಕಾರ, ಸಂಸ್ಕೃತಿ ಕಲಿಸುವ ಮೂಲಕ ತಮ್ಮ ಮಕ್ಕಳನ್ನು ವಿವೇಕಾನಂದರಂತೆ ಆಗಿಸುವ ಕನಸು ಕಾಣಬೇಕು ಎಂದು ತಿಳಿಸಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಪಿ.ಜೆ. ಸೋಮಶೇಖರ್‌ ಮಾತನಾಡಿ, ಗ್ರಾಮೀಣ ಜನರಿಂದಾಗಿ ಬಾಂಧವ್ಯ, ಸಂಸ್ಕೃತಿ ಉಳಿದಿದೆ. ನಗರದ ಜನರು ಹಾಗೂ ವಿದ್ಯಾವಂತರಿಂದ ಸಂಸ್ಕೃತಿ ಕಳೆದು ಹೋಗುತ್ತಿದೆ. ಪ್ರತಿಷ್ಠೆ ಕಾರಣಕ್ಕೆ ನ್ಯಾಯಾಲಯಗಳಿಗೆ ಹೆಚ್ಚಿನ ವ್ಯಾಜ್ಯಗಳು ಬರುತ್ತಿವೆ ಎಂದರು.

ಸಾಮಾನ್ಯ ಜ್ಞಾನದ ತಳಹದಿಯ ಮೇಲೆ ಕಾನೂನು ನಿಂತಿದೆ. ಕಾನೂನು ಅರಿವು ನೀಡಿದಲ್ಲಿ ಮಹಿಳೆಯರಿಗೆ ರಕ್ಷಣೆ ಒದಗಿಸಬಹುದು. 2005ರ ಹೊಸ ತಿದ್ದುಪಡಿ ಪ್ರಕಾರ ಮಹಿಳೆಯರಿಗೂ ಪುರುಷರಂತೆ ಆಸ್ತಿಯಲ್ಲಿ ಸಮಾನ ಹಕ್ಕಿದೆ. ಅದು ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು ಎಂದರು.

ಅಧಿವಕ್ತಾ ಪರಿಷತ್‌ ರಾಜ್ಯ ಉಪಾಧ್ಯಕ್ಷ ಪ್ರಕಾಶ್‌ರಾವ್‌ ಮಾತನಾಡಿ, ಯುವ ಜನಾಂಗಕ್ಕೆ ಸ್ವಾಮಿ ವಿವೇಕಾನಂದರ ವಿಚಾರಧಾರೆ ಪ್ರೇರಣಾದಾಯಕವಾಗಿವೆ ಎಂದು ತಿಳಿಸಿದರು. ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯವಾದಿ ಮಧುಕರ್‌ ದೇಶಪಾಂಡೆ, ವಿದ್ಯುನ್ಮಾನ ಸಾಕ್ಷ್ಯಗಳು… ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಪರಿಷತ್‌ನ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸಿ.ಪಿ. ಅನಿತಾ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯ ಉಪಾಧ್ಯಕ್ಷ ಮಂಜಪ್ಪ ಕಾಕನೂರು, ಜಿಲ್ಲಾ ಅಧ್ಯಕ್ಷ ಎಲ್‌.ದಯಾನಂದ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next