ದಾವಣಗೆರೆ: ಠೇವಣಿ ಹಣ ವಾಪಸ್ಸಾತಿಗೆ ಒತ್ತಾಯಿಸಿ ಶುಕ್ರವಾರ ಲಕ್ಷ್ಮೀ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಠೇವಣಿದಾರರ ವೇದಿಕೆ ನೇತೃತ್ವದಲ್ಲಿ ಠೇವಣಿದಾರರು ಲಕ್ಷ್ಮೀ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಎದುರು ಧರಣಿ ನಡೆಸಿದರು.
ಕಳೆದ 35 ವರ್ಷದಿಂದ ನಡೆಯುತ್ತಿರುವ ಲಕ್ಷ್ಮೀ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ 1,500 ರಿಂದ 1,600 ಠೇವಣಿದಾರರಿಗೆ 18 ರಿಂದ 20 ಕೋಟಿ ರೂಪಾಯಿಯಷ್ಟು ಹಣ ಬರಬೇಕಿದೆ. ಒಂದು ವರ್ಷದಿಂದ ಆಡಳಿತ ಮಂಡಳಿಯವರು ಹಣ ವಾಪಸ್ ಕೊಡುವುದಾಗಿಯೇ ಹೇಳುತ್ತಾ ಬರುತ್ತಿದ್ದರು. ಈಗ ಸೊಸೈಟಿ ಕಾರ್ಯದರ್ಶಿ ನಾಪತ್ತೆಯಾಗಿರುವುದ ನೋಡಿದರೆ ಹಣ ಬರುವುದು ಅನುಮಾನ ಆಗುತ್ತಿದೆ. ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಸೊಸೈಟಿ ದುಸ್ಥಿತಿಗೆ ಕಾರಣ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.
2017-18ನೇ ಸಾಲಿನವರೆಗೆ ಸಾಮಾನ್ಯ ಸಭೆಯಲ್ಲಿ ಎಲ್ಲರಿಗೂ ಸೊಸೈಟಿ ಲಾಭದಲ್ಲಿದೆ ಎಂದೇ ಸುಳ್ಳು ಮಾಹಿತಿ ನೀಡಲಾಗಿದೆ. ಸುಳ್ಳು ಮಾಹಿತಿ ನಂಬಿದಂತಹ ಅನೇಕರು ಹಣ ಕೊಟ್ಟೇ ಕೊಡುತ್ತಾರೆ ಎಂದೇ ಸುಮ್ಮನಿದ್ದರು. ಈಗ ಹಣ ಕೇಳಿದರೆ ಹೆಣ್ಣು ಮಕ್ಕಳು ಎನ್ನುವುದನ್ನೂ ನೋಡದಂತೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹಣ ಕೊಡಲಿಕ್ಕೆ ಆಗುವುದಿಲ್ಲ. ಅದೇನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ. ನಾವು ಯಾವುದಕ್ಕೂ ಹೆದರುವುದಿಲ್ಲ. ಎಲ್ಲವನ್ನೂ ನೋಡಿಕೊಳ್ಳುತ್ತೇವೆ ಎಂದು ದೂರಿದರು.
1,500 ರಿಂದ 1,600 ಠೇವಣಿದಾರರ ಠೇವಣಿಗಳ ಅವಧಿ ಮುಗಿದು 1 ರಿಂದ 2 ವರ್ಷ ಆಗಿವೆ. ಅಸಲು ಮತ್ತು ಬಡ್ಡಿ ಎಲ್ಲಾ ಸೇರಿದರೆ 18 ರಿಂದ 20 ಕೋಟಿ ರೂಪಾಯಿ ಕೊಡಬೇಕಾಗುತ್ತದೆ. ಸೊಸೈಟಿಗೆ 6-7 ಕೋಟಿ ಬರಬೇಕಿದೆ. ಇನ್ನುಳಿದ ಹಣಕ್ಕೆ ಏನು ಮಾಡುವರೋ ಗೊತ್ತಿಲ್ಲ. ಆಡಳಿತ ಮಂಡಳಿವರನ್ನು ಬಂಧಿಸಿ, ಅವರ ಆಸ್ತಿ ಎಲ್ಲವನ್ನೂ ಮಾರಾಟ ಮಾಡಿ, ಠೇವಣಿದಾರರಿಗೆ ಹಣ ನೀಡಬೇಕು ಎಂದು ಒತ್ತಾಯಿಸಿದರು.
ಠೇವಣಿದಾರರಿಗೆ ಹಣ ವಾಪಸ್ ನೀಡುತ್ತಿಲ್ಲ. ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಡಳಿತ, ಪೊಲೀಸ್, ಸಹಕಾರ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತಾದರೂ ಎಲ್ಲರೂ ಭರವಸೆ ನೀಡಿದ್ದರಿಂದ ಇಲ್ಲಿಯವರೆಗೆ ಕಾದೆವು. ಈಗ ಸೊಸೈಟಿ ಮುಳುಗಿದೆ. ಜಿಲ್ಲಾಡಳಿತ, ಸಂಬಂಧಿತರು ಸೂಕ್ತ ಕ್ರಮ ತೆಗೆದುಕೊಂಡು ಹಣ ವಾಪಸ್ ಕೊಡಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ವೇದಿಕೆ ಅಧ್ಯಕ್ಷ ಎನ್.ವಿ. ಬಂಡಿವಾಡ್, ಶಿವಯೋಗಿ ಬೂಸ್ನೂರ್, ಸಿ. ವೇದಮೂರ್ತಿ, ಉಮೇಶ್ ಗುಜ್ಜಾರ್, ಉಮಾಪತಿ, ಜಯದೇವಪ್ಪ ಇತರರು ಇದ್ದರು.