ದಾವಣಗೆರೆ: ದಾವಣಗೆರೆಯಲ್ಲೇ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡುವುದಾಗಿ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ದಾವಣಗೆರೆ ಜಿಲ್ಲಾ ಯುವ ಘಟಕದಿಂದ ಇಲ್ಲಿನ ಶಿವಯೋಗಿ ಮಂದಿರದಲ್ಲಿ ಭಾನುವಾರ ನಡೆದ 64ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಸರ್ಕಾರ ದಾವಣಗೆರೆಯಲ್ಲೇ ವಿಶ್ವ ಕನ್ನಡ ಸಮ್ಮೇಳನ ನಡೆಸಲು ನಿರ್ಧಾರ ಮಾಡಿತ್ತು. ಆದರೆ ಹೊಸ ಸರ್ಕಾರ ಬಂದ ನಂತರ ಶಿವಮೊಗ್ಗಕ್ಕೆ ಸ್ಥಳಾಂತರ ಮಾಡಿರುವುದರಿಂದ ಕನ್ನಡ ಅಭಿಮಾನಿಗಳಿಗೆ ಬೇಸರವಾಗಿದೆ. ದಾವಣಗೆರೆ ರಾಜ್ಯದ ಹೃದಯ ಭಾಗದಲ್ಲಿ ಇದ್ದು, ಇಲ್ಲಿ ಅಪ್ಪಟ ಕನ್ನಡಿಗರು ಇದ್ದಾರೆ. ಇಲ್ಲಿಯೇ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಜಿಲ್ಲಾ ಕಸಾಪ ಅಧ್ಯಕ್ಷ ಮಂಜುನಾಥ ಕುರ್ಕಿ, ಎಂ.ಜಿ. ಈಶ್ವರಪ್ಪ ಹಾಗೂ ಪತ್ರಕರ್ತ ಬಿ.ಎನ್. ಮಲ್ಲೇಶ್ ಅವರ ಜೊತೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವರಿಕೆ ಮಾಡುತ್ತೇವೆ ಎಂದರು.
ಕಲಬುರ್ಗಿಯಲ್ಲಿ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ದಾವಣಗೆರೆಯಲ್ಲಿ 20 ವರ್ಷಗಳ ಹಿಂದೆ ನಡೆದಿತ್ತು. ವಿಶ್ವ ಕನ್ನಡ ಸಮ್ಮೇಳನ ಮಾಡುವ ಆಸೆ ತೋರಿಸಿ ಈಗ ಕಿತ್ತುಕೊಳ್ಳಬೇಡಿ ಎಂದು ಹೇಳಿದ ಅವರು, ಕನ್ನಡದ ಹಬ್ಬವನ್ನು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಕನ್ನಡಿಗರ ಮೊದಲ ಧರ್ಮ ಎಂದರೆ ಅದು ಲಿಂಗಾಯತ ಧರ್ಮ. ಕನ್ನಡ ಧರ್ಮದ ಭಾಷೆಯಾಗಿದೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ತತ್ವದ ಆಧಾರದ ಮೇಲೆ ಕಲ್ಯಾಣ ತತ್ವ, ಆದರ್ಶದ ಮೂಲಕ ಕಲ್ಯಾಣ ರಾಜ್ಯ ಕಟ್ಟಬೇಕು. ಬಸವಾದಿ ಶರಣರು ನೀಡಿದ್ದ ವಚನ ಸಾಹಿತ್ಯ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು. ವಿವಿಧ ಭಾಷೆಗಳಿಗೆ ಶರಣರ ವಚನಗಳ ಭಾಷಾಂತರ ಕಾರ್ಯ ಆರಂಭವಾಗಿದೆ. ಆ ಮೂಲಕ ಜೀವನದ ಮೌಲ್ಯಗಳನ್ನು ವಿಶ್ವಕ್ಕೆ ಪರಿಚಯಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಕರವೇ ರಾಜ್ಯ ಘಟಕದ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗಂಗಾಧರ ಬಿ.ಎಲ್. ನಿಟ್ಟೂರ್ ಆಶಯ ನುಡಿಗಳನ್ನಾಡಿದರು. “ಕನ್ನಡಪರ ಸಂಘಟನೆಗಳ ಪ್ರಸ್ತುತತೆ’ ಕುರಿತು ಸಾಹಿತಿ ಆನಂದ್ ಋಗ್ವೇದಿ ಮಾತನಾಡಿದರು. ಜಿಲ್ಲಾ ವರದಿಗಾರರ ಒಕ್ಕೂಟದ ಅಧ್ಯಕ್ಷ ಬಿ.ಎನ್. ಮಲ್ಲೇಶ್, ಮಹಾನಗರ ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ಬಿ.ಜೆ.ಅಜಯ್‌ಕುಮಾರ್, ರೇಖಾ ಸುರೇಶ್, ಉದ್ಯಮಿಗಳಾದ ನಾಗರಾಜ್ ಲೋಕಿಕೆರೆ, ಕೆ.ಎಂ. ಇಂದೂಧರ್, ಕನ್ನಡಪರ ಹೋರಾಟಗಾರ ಕೆ.ಜಿ. ಶಿವಕುಮಾರ್ ವೇದಿಕೆಯಲ್ಲಿ ಇದ್ದರು.
ಪರಿಸರ ಪ್ರೇಮಿ ವೀರಾಚಾರಿ ಮಿಟ್ಲಕಟ್ಟೆ, ಜಾನಪದ ವಿದ್ವಾಂಸ ಎಂ.ಜಿ. ಈಶ್ವರಪ್ಪ, ಪತ್ರಕರ್ತ ಜಿ.ಎಂ.ಆರ್. ಆರಾಧ್ಯ, ಕೆಟಿಜೆ ನಗರ ಠಾಣೆಯ ಇನ್‌ಸ್ಪೆಕ್ಟರ್ ನಾಗರಾಜ್, ಸಮಾಜ ಸೇವಕ ಅಮಾನುಲ್ಲಾ ಖಾನ್, ರಶ್ಮಿ ಹೆಣ್ಣು ಮಕ್ಕಳ ವಸತಿ ಶಾಲೆಯ ಪ್ರೇಮಾ ನಾಗರಾಜ್, ವಕೀಲರ ಸಂಘದ ಅಧ್ಯಕ್ಷ ಎನ್.ಟಿ. ಮಂಜುನಾಥ್, ಡಾ|ಸುಬ್ಬರಾವ್, ಗಾನಶ್ರೀ ಸ್ವರಾಲಯದ ಸಂಸ್ಥಾಪಕಿ ಸಂಗೀತ ರಾಘವೇಂದ್ರ, ವಿಜ್ಞಾನ ಬರಹಗಾರ್ತಿ ಜ್ಯೋತಿ ಉಪಾಧ್ಯಾಯ, ಯುವ ಕರ್ನಾಟಕ ಪ್ರಶಸ್ತಿ ಪುರಸ್ಕೃತ ವಿನಯ್ ಪ್ರಭಾಕರ್, ಶಿಕ್ಷಕಿ ಬಿ.ಜಯಪ್ಪ ಅವರನ್ನು ಸನ್ಮಾನಿಸಲಾಯಿತು.
ಕಲಾವಿದ ಅನಿಲ್ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚಿತ್ರ ಬಿಡಿಸಿದರು. ಬಾಲಕಿ ಮಹನ್ಯ ಗುರು ಪಾಟೀಲ್ ಕೈಗೂಡಿಸಿದರು. ಮಿಮಿಕ್ರಿ ಗೋಪಿ ಹಾಗೂ ಮೈಸೂರು ಆನಂದ್ ಹಾಸ್ಯದ ಮೂಲಕ ಜನರನ್ನು ರಂಜಿಸಿದರು.