Advertisement

ಅತ್ಯಾಚಾರಿಗಳಿಗೆ ಪೊಲೀಸ್‌ ಎನ್‌ಕೌಂಟರ್‌ ಸರಿಯಾದ ಶಿಕ್ಷೆ

11:33 AM Dec 07, 2019 | Naveen |

ದಾವಣಗೆರೆ: ಹೈದರಾಬಾದ್‌ ಪೊಲೀಸರು ಇದೇ ಸರಿಯಾದುದು ಎನ್ನುವಂತೆ ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆ ನೀಡಿದ್ದಾರೆ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ.

Advertisement

ಹೈದರಾಬಾದ್‌ ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್‌ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ ಸಮಿತಿ ಯಿಂದ ಶುಕ್ರವಾರ ಸಂಜೆ ಜಯದೇವ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತ್ಯಾಚಾರ ಮಾಡಿದಂತಹವರು ಮಾನವೀಯತೆಯೇ ಇಲ್ಲದ ರಾಕ್ಷಸರು. ಅಂತಹವರನ್ನು ಪೊಲೀಸರು ಎನ್‌ಕೌಂಟರ್‌ ಮಾಡಿರುವುದು ಸರಿಯಾದ ಶಿಕ್ಷೆ ಎಂದರು.

ದೇಶದಲ್ಲಿ ಹಲವಾರು ಸಮಸ್ಯೆಗಳಿವೆ. ಅದರಲ್ಲಿ ಅತೀ ಪ್ರಮುಖವಾಗಿರುವುದು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಟಾಳಿಕೆ, ಅತ್ಯಾಚಾರ, ಕೊಲೆ. ಪ್ರತಿ ನಿತ್ಯ ಒಂದಿಲ್ಲ ಒಂದು ಕಡೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಮಹಿಳೆಯರು ನಮ್ಮ ಮನೆಯ ಸದಸ್ಯರು. ಮಹಿಳೆಯರು ಇಲ್ಲದ ಸಮಾಜ ಊಹಿಸಲಿಕ್ಕೂ ಆಗದು. ತಾಯಿ, ಅಕ್ಕ, ತಂಗಿ, ಅಜ್ಜಿ, ಚಿಕ್ಕಮ್ಮನ ರೂಪದಲ್ಲಿ ಮಹಿಳೆಯರು ಇದ್ದಾರೆ. ಪುರುಷರೇ ಶ್ರೇಷ್ಠ, ಮಹಿಳೆಯರು ಕೀಳು… ಎಂಬ ಲಿಂಗಭೇದ, ತಾರತಮ್ಯ ದೂರ ಆಗಬೇಕು. ಮಹಿಳೆಯರೂ ಎಲ್ಲರಂತೆ ಸಮಾನನರು, ಶ್ರೇಷ್ಠರು ಎಂಬ ಮನೋಭಾವನೆ ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಆಶಿಸಿದರು.

ನಗರ, ಗ್ರಾಮೀಣ ಭಾಗದಲ್ಲಿ ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಲೇ ಇವೆ. ಕೆಲವೊಂದು ಬೆಳಕಿಗೆ ಬರುವುದೂ ಇಲ್ಲ. ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯವೆಸಗಿದವರಿಗೆ ಎನ್‌ಕೌಂಟರ್‌ನಂತಹ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ದುಬೈ ಮುಂತಾದ ದೇಶಗಳಲ್ಲಿ ಕಠಿಣವಾದ ಕ್ರಮಗಳಿವೆ. ಭಾರತದಲ್ಲೂ ಅಂತಹ ಕಠಿಣ ಕ್ರಮಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಮಹಿಳೆಯರು ನೆಮ್ಮದಿಯಿಂದ ಓಡಾಡುವ ವಾತಾವರಣ ನಿರ್ಮಾಣ ಮಾಡಬೇಕು. ಮಧ್ಯರಾತ್ರಿ ವೇಳೆಯಲ್ಲಿ ಮಹಿಳೆಯರು ನಿರ್ಭಯವಾಗಿ ಓಡಾಡುವುದೇ ನಿಜವಾದ ಸ್ವಾತಂತ್ರ್ಯ ಎಂದು ಗಾಂಧೀಜಿ ಎಂದಿದ್ದರು. ಅವರ ಕನಸನ್ನು ನನಸು ಮಾಡುವತ್ತ ರಾಜ್ಯ ಮತ್ತು ಕೇಂದ್ರ ಸರ್ಕಾರ ಇನ್ನೂ ಕಠಿಣಾತಿಕಠಿಣ ಕ್ರಮಗಳ ಮೂಲಕ ದುಷ್ಕೃತ್ಯ ತಡೆಗಟ್ಟಬೇಕು ಎಂದು ಶ್ರೀಗಳು ಆಗ್ರಹಿಸಿದರು.

ಮಹಿಳಾ ಪೊಲೀಸ್‌ ಠಾಣಾ ಇನ್ಸ್‌ಪೆಕ್ಟರ್‌ ನಾಗಮ್ಮ ಮಾತನಾಡಿ, ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ದಾವಣಗೆರೆಯಲ್ಲಿ ದುರ್ಗಾಪಡೆ… ಪ್ರಾರಂಭಿಸಲಾಗಿದೆ. ದೌರ್ಜನ್ಯಕ್ಕೆ ಒಳಗಾದವರು ಅಥವಾ ಕಂಡಂತಹವರು ಕೂಡಲೇ ದುರ್ಗಾಪಡೆಗೆ ಮಾಹಿತಿ ನೀಡಬೇಕು. 100ಗೆ ಕರೆ ಮಾಡಿ ತಿಳಿಸಿದರೂ ಸಾಕು. ದುರ್ಗಾಪಡೆಯವರು ಕೂಡಲೇ ನೆರವಿಗೆ ಧಾವಿಸುವ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್‌ ಇಲಾಖೆ ಬಿಡುಗಡೆ ಮಾಡಿರುವ ಆ್ಯಪ್‌ ಮೂಲಕವೂ ದೂರು, ಮಾಹಿತಿ ನೀಡಬಹುದು ಎಂದು ತಿಳಿಸಿದರು.

ಪಿಎಸ್‌ಐ ತೇಜೋವತಿ ಮಾತನಾಡಿ, ಪೊಲೀಸ್‌ ಇಲಾಖೆ ಬಿಡುಗಡೆ ಮಾಡಿರುವ ಕೆಎಸ್‌ಪಿ ಮೊಬೈಲ್‌ ಆ್ಯಪ್‌ ಮೂಲಕ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ದೂರು ನೀಡಬಹುದು. ದೌರ್ಜನ್ಯಕ್ಕೆ ಒಳಗಾದವರೇ ದೂರು ನೀಡಬೇಕು ಎನ್ನುವುದೇನು ಇಲ್ಲ. ಯಾರಿಗೇ ಆಗಲಿ ಗಮನಕ್ಕೂ ಬಂದರೂ ದೂರು ನೀಡಬಹುದು. ದೂರು, ಮಾಹಿತಿ ನೀಡಿದವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

ಮಹಿಳೆಯರು ಮತ್ತು ಮಕ್ಳ ಳ ಮೇಲಿನ ದೌರ್ಜನ್ಯ ತಡೆಗಟ್ಟಲು ಸರ್ವರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಮಹಿಳಾ ಸೇವಾ ಸಮಾಜ ಶಾಲೆಯ ವಿದ್ಯಾರ್ಥಿನಿ ರಮ್ಯಾ ಮಾತನಾಡಿ, ಹೈದರಾಬಾದ್‌ ಪೊಲೀಸರು ಎನ್‌ಕೌಂಟರ್‌ ಮಾಡುವ ಮೂಲಕ ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆ ನೀಡಿದ್ದಾರೆ. ಇವತ್ತು ನಿಜಕ್ಕೂ ಬಹಳ ಖುಷಿ ಆಗುತ್ತಿದೆ. ಯಾರೆಯೇ ಆಗಲಿ ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯ ಮಾಡುತ್ತಾರೋ ಅಂತಹವರಿಗೆ ಇಂತಹ ಕಠಿಣ ಶಿಕ್ಷೆ ಆಗಬೇಕು. ಮಹಿಳೆಯರು, ಮಕ್ಕಳು ನೆಮ್ಮದಿ, ಸುರಕ್ಷಿತವಾಗಿ ಓಡಾಡುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಮಾನವ ಹಕ್ಕುಗಳ ಸಮಿತಿಯ ಎಚ್‌. ತಿಮ್ಮಣ್ಣ, ಹದಡಿ ವೆಂಕಟೇಶ್‌, ಕವಿತಾ ಸೆಲ್ವರಾಜ್‌, ಗೀತಾ ಪ್ರಶಾಂತ್‌, ಕೆ.ವಿ.ಚಂದ್ರಶೇಖರ್‌, ರೈತ ಸಂಘದ ಬಲ್ಲೂರು ರವಿಕುಮಾರ್‌ ಇತರರು ಇದ್ದರು. ಮೊಂಬತ್ತಿ ಬೆಳಗುವ ಮೂಲಕ ಹೈದ್ರಾಬಾದ್‌ ಪಶುವೈದ್ಯೆಗೆ ಶ್ರದ್ಧಾಂಜಲಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next