Advertisement

ಕನ್ನಡ ಅನ್ನ -ಉದ್ಯೋಗ ನೀಡುವ ಭಾಷೆಯಾಗಲಿ

06:37 PM Feb 29, 2020 | Naveen |

ದಾವಣಗೆರೆ: ಇಂದಿನ ಆಧುನಿಕ ತಂತ್ರಜ್ಞಾನ, ಪೈಪೋಟಿ ಯುಗದಲ್ಲಿ ಕನ್ನಡವನ್ನು ಅನ್ನ ಮತ್ತು ಉದ್ಯೋಗದ ಭಾಷೆಯನ್ನಾಗಿಸುವ ಮೂಲಕ ಸದೃಢಗೊಳಿಸಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ| ಸ.ಚಿ. ರಮೇಶ್‌ ತಿಳಿಸಿದರು.

Advertisement

ಹಂಪಿ ಕನ್ನಡ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕನ್ನಡದ ಬೆಳವಣಿಗೆ: ಸವಾಲುಗಳು ಮತ್ತು ಸಾಧ್ಯತೆಗಳು… ವಿಷಯ ಕುರಿತ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಇಂಜಿನಿಯರಿಂಗ್‌, ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗವಕಾಶ ಎಂಬ ಆದೇಶ ಸರ್ಕಾರ ಮಾಡಬೇಕು. ಕನ್ನಡ ಅನ್ನ, ಉದ್ಯೋಗದ ಭಾಷೆ ಆಗಬೇಕು ಎಂದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್‌ ಕಲಿಕೆ ಅನಿವಾರ್ಯ. ಆದರೆ, ಕನ್ನಡ ನಮ್ಮ ಮೊದಲ ಆದ್ಯತೆ ಆಗಬೇಕು. ಆಗ ಕನ್ನಡ ರಾಜಭಾಷೆ, ಅಭಿಮಾನದ ಭಾಷೆಯಾಗಿ ಹೊರ ಹೊಮ್ಮುತ್ತದೆ. ಬೆಂಗಳೂರಿನಲ್ಲಿ ಓಡಾಡಿದೆರೆ ನಾವು ಬೇರೆ ದೇಶದಲ್ಲಿವೆ ಎಂದೆನಿಸುತ್ತದೆ. ಕನ್ನಡದಲ್ಲಿ ಮಾತನಾಡಿದರೆ ಅಪಮಾನ ಎನ್ನುವ ವಾತಾವರಣ ಇರುವುದು ಅತ್ಯಂತ ನೋವು, ವಿಷಾದದ ಸಂಗತಿ. ಆ ಮನೋಭಾವ, ವಾತಾವರಣ ಬದಲಾಗಬೇಕು ಎಂದು ತಿಳಿಸಿದರು.

ಪ್ರತಿಯೊಬ್ಬರು ಕನ್ನಡ ನಾಡು, ನುಡಿ ಪ್ರೀತಿಸುವ ಕಡೆಗೆ ಅತೀ ಹೆಚ್ಚಿನ ಒಲವು ಹರಿಸಬೇಕು. ಕನ್ನಡದ ಒಳಗೆ ಪ್ರವೇಶ ಮಾಡಿದರೆ ಕನ್ನಡ ಏಕೆ ನಮ್ಮಿಂದ ದೂರವಾಗುತ್ತಿದೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳ ಬೇಕು. ಎಂದೆಂದಿಗೂ ಆತ್ಮಸಾಕ್ಷಿಗೆ ವಿರುದ್ಧವಾಗಿ ಬದುಕು ಕಟ್ಟಿಕೊಳ್ಳಬಾರದು. ನಮ್ಮ ಸಾಕ್ಷಿಪ್ರಜ್ಞೆಯಾಗಿರುವ ಕನ್ನಡದ ಮೂಲಕವೇ ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.

ಭಾಷೆ ಎನ್ನುವುದು ಜೀವನ ಚೈತನ್ಯ. ಭಾಷೆಯ ಬಗೆಗಿನ ಶಕ್ತಿಯನ್ನ ಅರಿತು ಕನ್ನಡವನ್ನು ಉಳಿಸಬೇಕು. ಒಂದು ಜನಾಂಗವನ್ನು ಒಂದುಗೂಡಿಸುವ, ಕೂಡಿ ಬಾಳುವಂತಹ ಶಕ್ತಿ ಜಾತಿ, ಧರ್ಮಕ್ಕೆ ಇಲ್ಲವೇ ಇಲ್ಲ. ಒಂದು ಭಾಷೆಗೆ ಅಂತಹ ಶಕ್ತಿ ಇದೆ. ಕನ್ನಡ ಭಾಷೆ ನಮ್ಮ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಹೊಂದಿದೆ. ಭಾಷೆಯ ಮೂಲಕ ಒಂದಾಗಿ ಸಮಾಜ ವನ್ನ ಸದೃಢಗೊಳಿಸುವ ಜೊತೆಗೆ ಜಾತಿಯ ವಿನಾಶ ಮಾಡಬೇಕು. ಕನ್ನಡವೆಂಬ ಒಂದೇ ಆಚಾರದ ಮೂಲಕ ವಿಶ್ವ ಮಾನವರಾಗುವತ್ತ ಮುನ್ನಡೆಯಬೇಕು ಎಂದು ಆಶಿಸಿದರು.

Advertisement

ಪ್ರಾಚೀನ ಕಾಲದಿಂದಲೂ ಕನ್ನಡವನ್ನ ಉಳಿಸಿ, ಬೆಳೆಸಲು ಕವಿಗಳು, ಸಂತರು, ಶರಣರು, ಕನ್ನಡ ಪರ ಸಂಘಟನೆಯವರು, ಸರ್ಕಾರ ಎಲ್ಲರೂ ಶ್ರಮಿಸಿದ್ದಾರೆ. ಅನೇಕರು ಜೀವನವನ್ನೇ ಮುಡಿಪಾಗಿಟ್ಟಿರುವುದನ್ನ ಅಲ್ಲಗೆಳೆಯುವಂತೆಯೇ ಇಲ್ಲ. ಜಾನಪದ, ಆಧುನಿಕ ಕವಿಗಳು, ಸಿನಿಮಾ, ಮಾಧ್ಯಮ ಕ್ಷೇತ್ರ ಕನ್ನಡವನ್ನ ಕಟ್ಟುವ ಕೆಲಸ ಮಾಡಿವೆ. ಕನ್ನಡದ ಬಗೆಗೆ ಅಪಾರ ಅಭಿಮಾನ, ಪ್ರೀತಿ, ಕಾಳಜಿಯಿಂದ ಕನ್ನಡವನ್ನ ಎಲ್ಲಾ ಕಡೆ ಬೆಳೆಸಬೇಕು. ಯುವ ಜನಾಂಗ, ವಿದ್ಯಾರ್ಥಿ ಸಮೂಹ ಆ ಕಾರ್ಯದಲ್ಲಿ ಮುಂಚೂಣಿಯಲ್ಲಿರಬೇಕು ಎಂದು ತಿಳಿಸಿದರು.

ಪ್ರಾಸ್ತಾವಿಕ ನುಡಿಗಳಾಡಿದ ಹಂಪಿ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ವಿಭಾಗ ಮುಖ್ಯಸ್ಥ ಡಾ| ಡಿ. ಪಾಂಡು ರಂಗಬಾಬು, ಕನ್ನಡಿಗರಲ್ಲಿನ ನಿರಭಿಮಾನ, ರಾಜಕಾರಣದ ಇಚ್ಛಾಶಕ್ತಿ ಕೊರತೆ, ಇಂಗ್ಲಿಷ್‌ ಮೋಹ… ಕನ್ನಡ ಬೆಳಯದೇ ಇರುವುದಕ್ಕೆ ಕಾರಣ ಎಂದು ಹೇಳುತ್ತೇವೆ. ಆದರೆ, ಕನ್ನಡದ ಬೆಳವಣಿಗೆ ಆಗದೇ ಇರುವ ಮೂಲ ಸಮಸ್ಯೆಯತ್ತ ಗಮನ ಹರಿಸುವುದಿಲ್ಲ. ಕನ್ನಡದ ಬೆಳವಣಿಗೆಯ ನಿಟ್ಟಿನಲ್ಲಿ ಬೌದ್ಧಿಕ ವಲಯ, ಹೋರಾಟಗಾರರು, ರಾಜಕೀಯವನ್ನು ಒಂದೇ ವೇದಿಕೆಯಡಿ ತಂದು ಚರ್ಚೆ ಮಾಡಿದಾಗ ಸಮಗ್ರ ಬದಲಾವಣೆ ಸಾಧ್ಯ ಎಂದು ಪ್ರತಿಪಾದಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಪ್ರೊ| ತೂ.ಕ.ಶಂಕರಯ್ಯ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಎಚ್‌. ಗಿರಿಸ್ವಾಮಿ, ಡಾ| ಅಶೋಕ್‌ಕುಮಾರ್‌ ರಂಜೇರೆ ಇದ್ದರು. ಚೇತನ್‌ ಪ್ರಾರ್ಥಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next