Advertisement

ಬೇಡಿಕೆಗಳ ಈಡೇರಿಕೆಗೆ 27ರಿಂದ ಮಾಜಿ ಸೈನಿಕರ ಧರಣಿ

05:42 PM Jan 25, 2020 | Naveen |

ದಾವಣಗೆರೆ: ಹುತಾತ್ಮ ಯೋಧರ ಸ್ಮಾರಕದ ಅನುಷ್ಠಾನ, 24+7 ಕಾಲ ಅತ್ಯುಚ್ಚ ಸುವರ್ಣ ಧ್ವಜ ಸ್ಥಾಪನೆ , ಸಮುದಾಯ ಭವನಕ್ಕೆ ಸೂಕ್ತ ನಿವೇಶನ ಒಳಗೊಂಡಂತೆ ವಿವಿಧ ಬೇಡಿಕೆಗೆ ಒತ್ತಾಯಿಸುತ್ತಲೇ ಬಂದಿರುವ ಮಾಜಿ ಸೈನಿಕರು ಅಂತಿಮವಾಗಿ ತೀರಾ ಅನಿವಾರ್ಯವಾಗಿ ಜ.27 ರಿಂದ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಶಾಂತಿ ಯುತ ಧರಣಿಗೆ ಮುಂದಾಗಿದ್ದಾರೆ.

Advertisement

ದೇಶ ರಕ್ಷಣೆಗಾಗಿ ತಮ್ಮ ಅಮೂಲ್ಯ ಜೀವ, ವೈಯಕ್ತಿಕ ಬದುಕನ್ನೇ ಪಣಕ್ಕಿಟ್ಟು ಅನೇಕ ವರ್ಷಗಳ ದೇಶದ ಸೇವೆ ಮಾಡಿರುವ ಸೈನಿಕರು ತಮಗೆ, ಇಲ್ಲ ತಮ್ಮ ಕುಟುಂಬಕ್ಕೆ, ವೈಯಕ್ತಿಕವಾಗಿ ಯಾವುದೇ ಬೇಡಿಕೆ ಮುಂದಿಟ್ಟಿಲ್ಲ. ತಮ್ಮಂತೆ ಆಸಕ್ತಿ ಇರುವ ಯುವಕರನ್ನು ಸೈನ್ಯಕ್ಕೆ ಸಜ್ಜುಗೊಳಿಸಬೇಕು. ಒಂದಷ್ಟು ತರಬೇತಿ, ಮಾಹಿತಿ ನೀಡಬೇಕು. ಸೈನಿಕ ಶಾಲೆ ಮಾದರಿಯಲ್ಲಿ ತರಬೇತಿ ಕೇಂದ್ರಕ್ಕೆ ಅಲೆಯುತ್ತಿರುವ ಮಾಜಿ ಯೋಧರಿಗೆ ಜನಪ್ರತಿನಿಧಿಗಳು, ಅಧಿಕಾರಿಗಳಿಂದ ದೊರೆತ ಸ್ಪಂದನೆ ಶೂನ್ಯ!. ಮಾಜಿ ಸೈನಿಕರ ಸಂಘದ ಕಚೇರಿ, ಸಮುದಾಯ ಭವನದ ಜಾಗದ ಮಂಜೂರಾತಿಗೆ ಹಲವಾರು ತಿಂಗಳಿನಿಂದ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿರುವ ಮಾಜಿ ಸೈನಿಕರಿಗೆ ಉನ್ನತ ಅಧಿಕಾರಿಯೊಬ್ಬರು ನೀಡಿದಂತಹ ಅಮೋಘ ಸಲಹೆ ಎಂದರೆ ಯಾವುದಾದರೂ ಜಾತಿ, ಸಮುದಾಯದ ಹೆಸರಿನೊಂದಿಗೆ ಬನ್ನಿ…. ಎಂಬುದು!. ತಮ್ಮ ಸೇವಾವೃತ್ತಿಯಲ್ಲಿ ಯಾವ ಜಾತಿಯವರು ಎಂಬುದನ್ನೂ ನೋಡದೆ ಒಂದೇ ತಟ್ಟೆಯಲ್ಲಿ ಊಟ, ಒಂದೇ ಲೋಟದಲ್ಲಿ ಟೀ, ಕಾಫಿ ಕುಡಿದಂತಹ ಮಾಜಿ ಸೈನಿಕರು ಜಾತಿ… ಹೆಸರೇಳಿಕೊಂಡು ಜಾಗ ಕೇಳುವುದಕ್ಕೆ ಸುತಾರಾಂ ಒಪ್ಪುತ್ತಿಲ್ಲ. ನಮ್ಮ ಜೀವನದಲ್ಲಿ ಯಾರ ಜಾತಿ ಕೇಳಿಲ್ಲ. ನಮ್ಮೊಟ್ಟಿಗೆ ಇರುವರ ಜಾತಿ ಯಾವುದೂ ಎಂಬುದು ಗೊತ್ತಿಲ್ಲ. ಈಗ ಜಾಗಕ್ಕಾಗಿ ಜಾತಿ ಹೆಸರು ಹೇಳಿಕೊಂಡು ಹೋಗಬೇಕಾ. ಅದು ಸುಧೀರ್ಘ‌ ಕಾಲ ತಾಯಿ ಭಾರತೀಯ ಸೇವೆ ಮಾಡಿದ ನಂತರ ಎಂಬ ಪ್ರಶ್ನೆ ಮಾಜಿ ಸೈನಿಕರನ್ನು ಕ್ಷಣಕ್ಷಣಕ್ಕೂ ಕಾಡುತ್ತಿದೆ.

ಭಾರತೀಯ ಸೈನಿಕರು ಶತ್ರುಗಳ ಮೇಲೆ ದಾಳಿ ನಡೆಸಿ, ಮಣ್ಣು ಮುಕ್ಕಿಸಿದಾಗ ದೇಶಪ್ರೇಮ…ದ
ಬಗ್ಗೆ ಭಾರೀ ಮಾತಗಳಾಡುವ ಜನಪ್ರತಿನಿಧಿಗಳ ಬಳಿ ಬೇಡಿಕೆಯೊಂದಿಗೆ ತೆರಳಿದಾಗ ಕೇಳಿದ ಪ್ರಶ್ನೆ, ನಿಮ್ಮ ಮತಗಳೆಷ್ಟು… ? ಎಂಬುದು. ಮಾಜಿ ಸೈನಿಕರು ಎಂಬುದು ಗೊತ್ತಿದ್ದರೂ
ಅನೇಕ ಸರ್ಕಾರಿ ಕಚೇರಿಯಲ್ಲಿ ಕನಿಷ್ಟ ಪಕ್ಷ ಕುಳಿತುಕೊಳ್ಳಿ… ಎಂದು ಹೇಳದೆ ಗಂಟೆಗಟ್ಟಲೆ ನಿಲ್ಲಿಸಿ, ಏನೋ ಒಂದು ಉತ್ತರ ಕೊಟ್ಟು ಕಳಿಸಿದ ಅಧಿಕಾರಿಗಳೂ ಇದ್ದಾರೆ. ನಿವೃತ್ತಿ ಜೀವನ ನಿರ್ವಹಣೆಗೆ ಸೂಕ್ತ ಕೆಲಸದ ಅವಕಾಶ, ಮಹಾನಗರ ಪಾಲಿಕೆ ಮಳಿಗೆಯಲ್ಲಿ ಮೀಸಲು.. ವ್ಯವಸ್ಥೆ ಮಾಡಿಕೊಡಲು ಸಹ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ನೀಡುವುದೇ ಇಲ್ಲ ಎಂಬ ಕೊರಗು ಕಾಡುತ್ತಿದೆ. ತಮ್ಮ ಜೀವವನ್ನೇ ಕೈಯಲ್ಲಿಟ್ಟುಕೊಂಡು, ಶತ್ರು ದೇಶಗಳ ಗುಂಡಿಗೆ ಎದೆಯೊಡ್ಡಿ ನಿಂತು ಕೆಲಸ ಮಾಡಿರುವ ಮಾಜಿ ಸೈನಿಕರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜ.27 ರಂದು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಶಾಂತಿಯುತ ಧರಣಿ ನಡೆಸುತ್ತಿರುವುದಾಗಿ ದಾವಣಗೆರೆ ಜಿಲ್ಲಾ ಮಾಜಿ ಸೈನಿಕ ವಿವಿಧೋದ್ದೇಶ ಸಂಘದ ಅಧ್ಯಕ್ಷ ಎಂ.ಎನ್‌. ಸತ್ಯಪ್ರಕಾಶ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗಾವಿ, ಚಿತ್ರದುರ್ಗ ಇತರೆಡೆಯಂತೆ ದಾವಣಗೆರೆಯಲ್ಲಿ ದಿನದ 24 ಗಂಟೆ
ಸದಾ ತ್ರಿವರ್ಣ ಧ್ವಜ ಹಾರಾಡುವ ವ್ಯವಸ್ಥೆ, ಸಮುದಾಯ ಭವನ, ಸೈನಿಕ ಶಾಲೆ ಮಾದರಿ
ತರಬೇತಿ ಕೇಂದ್ರಕ್ಕೆ ಜಾಗ, ಸರ್ಕಾರಿ ಆದೇಶದಂತೆ ಮಾಜಿ ಸೈನಿಕರಿಗೆ ನಿವೇಶನ, ಜಮೀನು, ಸಂಘದ ಕಚೇರಿಗೆ ಸ್ಥಳವಕಾಶ, ನೇರ, ಗುತ್ತಿಗೆ ಆಧಾರದಲ್ಲಿ ಕೆಲಸ ನೇಮಕಾತಿ ಯಲ್ಲಿ ಮೀಸಲಾತಿ… ಇತರೆ ಬೇಡಿಕೆ ಈಡೇರಿಸುವ ತನಕ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯ ಎಸ್‌.ಟಿ. ವೀರೇಶ್‌ ಮಾತನಾಡಿ, ದೇಶದ ರಕ್ಷಣೆಗಾಗಿ
ತಮ್ಮ ಜೀವನವನ್ನೆ ಮುಡಿಪಾಗಿಟ್ಟಂತಹ ಸೈನಿಕರು ಈಗ ಕೇಳುತ್ತಿರುವುದು ಸಮುದಾಯಕ್ಕೆ ಬೇಕಾದ ಕೆಲಸಕ್ಕೆ ಅಗತ್ಯ ಜಾಗ, ಒಂದಷ್ಟು ಸೌಲಭ್ಯ. ಆದರೆ, ಯಾವುದೇ ಕಡೆಯಿಂದ ಸೂಕ್ತ ಸ್ಪಂದನೆ ದೊರೆಯದೆ ಅನಿವಾರ್ಯವಾಗಿ ಮಾಜಿ ಸೈನಿಕರು ಹೋರಾಟಕ್ಕೆ ಇಳಿಯುವಂತಾಗಿರುವುದು ಸಮಾಜ, ದೇಶಕ್ಕೆ ಅವಮಾನದ ವಿಚಾರ. ನಮ್ಮ ಪ್ರೇರಣಾ ಯುವ ಸಂಘದಿಂದ ಮಾಜಿ ಸೈನಿಕರ ಹೋರಾಟಕ್ಕೆ ಎಲ್ಲ ರೀತಿಯ ಬೆಂಬಲ ನೀಡುತ್ತೇವೆ. ಮಹಾನಗರ ಪಾಲಿಕೆ ಸದಸ್ಯ ನಾಗಿದ್ದು, ಅಲ್ಲಿಯೂ ಎಷ್ಟು ಸಾಧ್ಯವೋ ಅಷ್ಟು ನೆರವು ನೀಡಲು ಶ್ರಮಿಸುತ್ತೇನೆ ಎಂದು ತಿಳಿಸಿದರು. ಸಂಘದ ಕಾರ್ಯದರ್ಶಿಓ.ಬಿ. ಶಶಿಕಾಂತ್‌, ಖಜಾಂಚಿ ಎಂ. ದಾಸಪ್ಪ, ಗೋಪಾಲ್‌, ಬಸವರಾಜ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next