Advertisement

7ನೇ ಆರ್ಥಿಕ ಗಣತಿಗೆ ಎಲ್ಲರೂ ಸಹಕರಿಸಿ

11:27 AM Jan 01, 2020 | Naveen |

ದಾವಣಗೆರೆ: ಮನೆ ಮನೆಗೆ ತೆರಳಿ ಗಣತಿದಾರರು ಕೈಗೊಳ್ಳಲಿರುವ 7ನೇ ಆರ್ಥಿಕ ಗಣತಿಯ ಬಗ್ಗೆ ಯಾವುದೇ ಗೊಂದಲ, ಆತಂಕ ಬೇಡ ಎಂದು ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

Advertisement

ಮಂಗಳವಾರ, ತಮ್ಮ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಿಎಎ ಹಾಗೂ ಎನ್‌ಆರ್‌ಸಿ ಬಗ್ಗೆ ಪ್ರತಿಭಟನೆ ನಡೆಯುತ್ತಿರುವುದರಿಂದ ಆರ್ಥಿಕ ಗಣತಿ ವೇಳೆ ಸಾರ್ವಜನಿಕರು ಮಾಹಿತಿ ನೀಡಲು ಸಹಕರಿಸುತ್ತಿಲ್ಲ. ಆದರೆ, ಆರ್ಥಿಕ ಗಣತಿಯು ಯಾವುದೇ ಜಾತಿ, ಧರ್ಮದವರ, ಎನ್‌ಆರ್‌ಸಿ ಅಥವಾ ಇನ್ಯಾವುದೇ ಕಾರ್ಯಕ್ಕೆ ಸಂಬಂಧ ಮಾಹಿತಿ ಸಂಗ್ರಹಿಸುತ್ತಿಲ್ಲ. ಹಾಗಾಗಿ ಈ ಕಾರ್ಯದ ಬಗ್ಗೆ ಜನರಿಗೆ ಕಿಂಚಿತ್ತೂ ಸಂಶಯ ಬೇಡ ಎಂದರು.

ಆರ್ಥಿಕ ಗಣತಿಯು ದೇಶದ ಭೌಗೋಳಿಕ ಗಡಿಯೊಳಗೆ ನೆಲೆಗೊಂಡು ಸ್ವಂತ ಉಪಯೋಗಕ್ಕಲ್ಲದ ಸರಕುಗಳ ಉತ್ಪಾದನೆ ಅಥವಾ ವಿತರಣೆ/ಮಾರಾಟ ಇಲ್ಲವೆ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿರುವ ಉದ್ಯಮಗಳ/ಘಟಕಗಳ ಪೂರ್ಣ ಎಣಿಕೆಯಾಗಿದೆ. ಈ ಗಣತಿಯಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯಗಳ ಎಲ್ಲಾ ಉದ್ಯಮಗಳ ಗಣತಿ ಮಾಡಲಾಗುವುದು ಎಂದು ಅವರು ಹೇಳಿದರು.

ಸರಕುಗಳ ಉತ್ಪಾದನೆ, ಅವುಗಳ ವಿತರಣೆ/ ಮಾರಾಟ ಅಥವಾ ಸೇವಾ ಚಟುವಟಿಕೆಯಿಂದ ರಾಷ್ಟ್ರೀಯ ಉತ್ಪನ್ನಕ್ಕೆ ಮೌಲ್ಯ ತಂದು ಕೊಡುತ್ತಿವೆಯೋ ಅಂತಹವುಗಳನ್ನು ಆರ್ಥಿಕ ಚಟುವಟಿಕೆ ಎಂಬುದಾಗಿ ಪರಿಗಣಿಸಲಾಗುವುದು. ಆರ್ಥಿಕ ಚಟುವಟಿಕೆಯು ದೇಶದ ಪ್ರಗತಿ, ರಾಷ್ಟ್ರೀಯ ತಲಾ ಆದಾಯ ಮತ್ತು ಜಿಡಿಪಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ಸ್ಪಷ್ಟನೆ ನೀಡಿದರು.

1977ರಲ್ಲಿ ಮೊದಲನೇ ಆರ್ಥಿಕ ಗಣತಿ ನಡೆಸಲಾಗಿತ್ತು. ಆ ನಂತರ 1980, 1990, 1998, 2005 ಹಾಗೂ 2012-13ರಲ್ಲಿ 6ನೇ ಗಣತಿ ಕೈಗೊಳ್ಳಲಾಗಿದೆ. ಪ್ರಸ್ತುತ 7ನೇ ಆರ್ಥಿಕ ಗಣತಿ ಕಾರ್ಯಕ್ಕೆ ದೇಶಾದ್ಯಂತ ಡಿ.31ರಿಂದ ಆರಂಭವಾಗಲಿದ್ದು, ಈ ಕಾರ್ಯ ಬರುವ ಸೆಪ್ಟಂಬರ್‌ ಅಂತ್ಯದವರೆಗೆ ನಡೆಯಲಿದೆ. ಈವರೆಗೂ ಗಣತಿಯನ್ನು ಆರ್ಥಿಕ ಮತ್ತು ಸಾಂಖ್ಯೀಕ ನಿರ್ದೇಶನಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಭಾಗಿತ್ವ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ನಡೆಸಲಾಗಿದ್ದು, ಈ ಬಾರಿ ಗಣತಿಯನ್ನು ಮೊಬೈಲ್‌ ಆ್ಯಪ್‌ ಬಳಸಿ ಮಾಡುತ್ತಿರುವುದು ವಿಶೇಷ.

Advertisement

7ನೇ ಆರ್ಥಿಕ ಗಣತಿಯು ಸಿಎಸ್‌ಸಿ (ಕಾಮನ್‌ ಸರ್ವೀಸ್‌ ಸೆಂಟರ್‌), ಇ-ಗವರೆ°ನ್ಸ್‌ ಸರ್ವೀಸ್‌ ಇಂಡಿಯಾ ಲಿಮಿಟೆಡ್‌ ಮತ್ತು ನ್ಯಾಷನ್‌ಲ್‌  ಪಲ್‌ ಸರ್ವೇ ಆರ್ಗನೈಜೇಷನ್‌ ರವರ ಸಂಪೂರ್ಣ ಜವಾಬ್ದಾರಿ ಹಾಗೂ ನೇತೃತ್ವದಲ್ಲಿ ನಡೆಯಲಿದೆ. ಬ್ಲಾಕ್‌ಗಳ ರಚನೆ, ಗಣತಿದಾರರು, ಮೇಲ್ವಿಚಾರಕ ನೇಮಕಾತಿ, ಕ್ಷೇತ್ರ ಕಾರ್ಯಾಚರಣೆ, ಪ್ರಗತಿ ವರದಿ, ಇತ್ಯಾದಿ ಕಾರ್ಯಗಳ ಉಸ್ತುವಾರಿ, ಹೊಣೆ ಸಿಎಸ್‌ಸಿ ಮತ್ತು ಎನ್‌ಎಸ್‌ಎಸ್‌ಒ ಇವರದ್ದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕೃಷಿ ಚಟುವಟಿಕೆ ಹೊರತಾಗಿ ಬೇರೆರೀತಿ ಆದಾಯ ಗಳಿಕೆಯಲ್ಲಿ ಕುಟುಂಬದ ಸದಸ್ಯರು ತೊಡಗಿಕೊಂಡಿದ್ದಾರೆಂಬ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಆರ್ಥಿಕ ಗಣತಿ ಕಾರ್ಯ ನಡೆಯಲಿದೆ.
ಜಿಲ್ಲಾ ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿಗಳ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳು ತಮ್ಮ ತಮ್ಮ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಆರ್ಥಿಕ ಗಣತಿ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕಿದೆ.

ವಿವಿಧ ಇಲಾಖೆಗಳು ತಮ್ಮಲ್ಲಿ ನೋಂದಣಿಯಾದ ಎಲ್ಲಾ ಉದ್ಯಮ ಘಟಕಗಳ ಪಟ್ಟಿಯನ್ನು ತಾಲೂಕುವಾರು ಸಿದ್ದಪಡಿಸಿ, ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕರು, ತಹಶೀಲ್ದಾರ್‌ಗಳು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಿಗೆ ಸಲ್ಲಿಸಬೇಕಿದೆ. ಗ್ರಾಮಗಳಲ್ಲಿ ಪಿಡಿಓ ಹಾಗೂ ಬಿಲ್‌ ಕಲೆಕ್ಟರ್‌ ನೆರವಿನಿಂದ ಗಣತಿ ಕಾರ್ಯ ನಡೆಯಲಿದೆ. ಗಣತಿ ವೇಳೆ ಆಕಸ್ಮಿಕ ಸಂದರ್ಭದಲ್ಲಿ ಪೊಲೀಸರು ರಕ್ಷಣೆ ನೀಡಲಿದ್ದಾರೆ. ಜನರು ಗಣತಿ ಸಂದರ್ಭದಲ್ಲಿ ತಮ್ಮ ಹೆಸರು, ಮನೆಯಲ್ಲಿ ಇತರೆ ಸದಸ್ಯರ ಕೈಗೊಂಡಿರುವ ಆರ್ಥಿಕ ಚಟುವಟಿಕೆ ವಿವರ, ಕುಟುಂಬದ ವಾರ್ಷಿಕ ವರಮಾನ, ಪಾನ್‌ಕಾರ್ಡ್‌ ನಂಬರ್‌ ಹಾಗೂ ಮೊಬೈಲ್‌ ನಂಬರ್‌ ಗಳನ್ನು ಗಣತಿದಾರರಿಗೆ ನೀಡಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಗಣತಿದಾರರಿಗೆ ಕ್ಯಾಪ್‌ ವಿತರಿಸಿ, ಆರ್ಥಿಕ ಗಣತಿ ಕಾರ್ಯ ಕೈಗೊಳ್ಳುವ ಸಂದರ್ಭದಲ್ಲಿ ಮಾಹಿತಿ ಸಂಗ್ರಹಿಸುವ ವಿಧಾನದ ಬಗ್ಗೆ ಕೆಲವು ಸಲಹೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ನಜ್ಮಾ ಜಿ., ಜಿಲ್ಲಾ ಸಾಂಖ್ಯೀಕ ಅಧಿಕಾರಿ ಜಿ.ಬಿ.ಹರಮಗಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next