Advertisement

ದುಗ್ಗಮ್ಮ ಜಾತ್ರೆಗೆ ಪ್ರಾಣಿಬಲಿ ನಿಷಿದ್ಧ

11:12 AM Feb 09, 2020 | Naveen |

ದಾವಣಗೆರೆ: ನಗರ ದೇವತೆ ದುರ್ಗಾಂಬಿಕಾ ದೇವಿ ಜಾತ್ರಾ ಸಂದರ್ಭದಲ್ಲಿ ಯಾವುದೇ ಪ್ರಾಣಿ ಬಲಿ ನಿಷಿದ್ಧವಾಗಿದ್ದು, ಪ್ರಾಣಿ ಬಲಿ ನೀಡಿದ ಪ್ರಕರಣ ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಸಿದ್ದಾರೆ.

Advertisement

ಶನಿವಾರ, ಶ್ರೀದುಗಾಂಬಿಕಾ ದೇವಸ್ಥಾನದ ಟ್ರಸ್ಟ್‌ ಸಭಾಂಗಣದಲ್ಲಿ ನಗರದ ದೇವತೆ ಜಾತ್ರಾ ಮಹೋತ್ಸವದ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇವಿ ಜಾತ್ರಾ ಮಹೋತ್ಸವದ ಸಕಲ ಸಿದ್ಧತೆ ಆರಂಭವಾಗಿದ್ದು, ಜಿಲ್ಲಾಡಳಿತ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಾತ್ರೆ ಯಶಸ್ಸಿಗೆ ಸಂಪೂರ್ಣವಾಗಿ ಶ್ರಮಿಸಲಿದೆ ಎಂದರು.

ಜಾತ್ರೆ ಸಂದರ್ಭದಲ್ಲಿ ಪ್ರಾಣಿಬಲಿ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪ್ರಾಣಿ ಬಲಿ ನೀಡಿದ ಪ್ರಕರಣಗಳು ಕಂಡು ಬಂದಲ್ಲಿ ಕಾನೂನಿನ ಅನ್ವಯ ಸೂಕ್ತ ಕ್ರಮ ಜರುಗಿಸಲಾಗುವುದು. ಪ್ರಾಣಿಬಲಿ ನೀಡುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಪ್ರಾಣಿಬಲಿ ತಡೆಯಲು ಎಲ್ಲರ ಸಹಕಾರ ಬಹು ಮುಖ್ಯ. ಪ್ರಾಣಿಬಲಿ ನಿಷೇಧದ ಫ್ಲೆಕ್ಸ್‌ಗಳನ್ನು ದೇವಸ್ಥಾನದ ಸುತ್ತಮುತ್ತ ಅಳವಡಿಸಲಾಗುವುದು ಎಂದು ತಿಳಿಸಿದರು.

ದೇವಸ್ಥಾನ ಟ್ರಸ್ಟ್‌ ಸಮಿತಿ ಸಲ್ಲಿಸಿದ್ದ ಮನವಿಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ದೇವಿಗೆ ಹರಕೆ ಸಲ್ಲಿಸಲು ದೀಡ ನಮಸ್ಕಾರ ಹಾಕುವ ಭಕ್ತಾದಿಗಳಿಗೆ ದೇವಸ್ಥಾನದ ಸುತ್ತಮುತ್ತಲೂ ಸುಮಾರು 1 ಅಡಿ ಎತ್ತರದ ಮರಳಿನ ವ್ಯವಸ್ಥೆ ಮಾಡಲಾಗುವುದು. ದೀಡ ನಮಸ್ಕಾರ ಮಾಡುವ ಭಕ್ತಾದಿಗಳಿಗೆ ಸ್ನಾನದ ವ್ಯವಸ್ಥೆ ಕಲ್ಪಿಸಲು 24 ಗಂಟೆಗಳ ಕಾಲ ನೀರು ಹಾಗೂ ಶವರ್‌ ಬಾತ್‌ ನಲ್ಲಿಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.

ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್‌ ಸಮಿತಿ ಗೌರವಧ್ಯಾಕ್ಷರೂ ಆಗಿರುವ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಕಂರಪ್ಪ ಮಾತನಾಡಿ, ಜಾತ್ರೆಗೆ ಆಗಮಿಸುವ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಹೆಚ್ಚಿನ ಮಹಿಳಾ ಪೊಲೀಸ್‌ ಸಿಬ್ಬಂದಿ ನೇಮಿಸಬೇಕು. ನಗರದ ಹಳೇ ಭಾಗದಲ್ಲಿ ಸ್ವಚ್ಛತೆಗೆ ಕ್ರಮ ವಹಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ತಿಳಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಜಾತ್ರೆಗೆ ಆಗಮಿಸುವ ಭಕ್ತರು ಹಾಗೂ ಸಾರ್ವಜನಿಕರ ವಾಹನಗಳಿಗೆ ಹಗೆದಿಬ್ಬ ಸರ್ಕಲ್‌, ಹೊಂಡದ ಸರ್ಕಲ್‌ ಹಾಗೂ ಬೂದಿಹಾಳ್‌ ರಸ್ತೆಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗುವುದು. ದೇವಸ್ಥಾನದ ಬಳಿ ವಾಹನಗಳು ನಿಲುಗಡೆಯಾಗದಂತೆ ಕ್ರಮ ವಹಿಸಲಾಗುವುದು. ಭಕ್ತರ ಭದ್ರತೆಗೆ ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.

Advertisement

ದೇವಾಲಯದ ಆವರಣ ಮತ್ತು ಪ್ರಮುಖ ಬೀದಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. ಇದಕ್ಕೆ ದೇವಸ್ಥಾನದ ಧರ್ಮದರ್ಶಿಗಳು ಸಹಕರಿಸಬೇಕು ಎಂದರು. ಬಿಜೆಪಿ ಮಾಜಿ ಅಧ್ಯಕ್ಷ ಯಶವಂತ್‌ ಜಾದವ್‌ ಮಾತನಾಡಿ, ಮಾ.1ರಿಂದ 20ರವರೆಗೆ ದೇವಸ್ಥಾನದ ಕಾರ್ಯಕ್ರಮಗಳು ನಡೆಯುವುದರಿಂದ ದಿನದ 24
ಗಂಟೆಗಳ ಕಾಲ ವಿದ್ಯುತ್‌ ಸರಬರಾಜು ಮಾಡಬೇಕು. ಜಾತ್ರೆಯ ಸಂದರ್ಭದಲ್ಲಿ ಸಂಗ್ರಹವಾಗುವ ತ್ಯಾಜ್ಯ ಸೂಕ್ತ ವೀಲೆವಾರಿ ಮಾಡುವುದರ ಜತೆಗೆ ಕ್ರೀಮಿ ಕೀಟಗಳು ಹರಡದಂತೆ ಕ್ರಿಮಿನಾಶಕ ಸಿಂಪಡಿಸಬೇಕು. ಹಳೆ ದಾವಣಗೆರೆ ನಗರಗಳಲ್ಲಿ ನಡೆಯುತ್ತಿರುವ ಸ್ಮಾರ್ಟ್‌ ಸಿಟಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸಬೇಕು ಎಂದು ಹೇಳಿದರು.

ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡಿ, ಸ್ವಚ್ಛತೆ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈಗಾಗಲೇ ಕೆಲಸ ಆರಂಭಿಸಿಲಾಗಿದೆ. ದೇವಾಸ್ಥಾನಗಳಿಗೆ ಸುಣ್ಣ, ಬಣ್ಣ ಬಳಿಸಿ, ಮೊಬೈಲ್‌ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗುವುದು. ನೀರಿನ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು. ಜಾತ್ರೆಗೆ ಹೊರಗಡೆಯಿಂದ ಬರುವ ಭಕ್ತಾದಿಗಳಿಗೆ ಆರೋಗ್ಯ ಇಲಾಖೆಯು ತುರ್ತು ಚಿಕಿತ್ಸಾ ಮತ್ತು ಆರೋಗ್ಯ ತಪಾಸಣಾ ಕೇಂದ್ರ ತೆರೆಯಲಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಪ್ರಜ್ಞಾ ಪಟೇಲ್‌ ಮಾತನಾಡಿ, ಪ್ರತಿ ಬಾರಿಯು ಜಾತ್ರೆ ಸಮಯದಲ್ಲಿ ಅರೆಬೆತ್ತಲೆ ಮತ್ತು ಬೆತ್ತಲೆ ಸೇವೆಗಳ ಜತೆಗೆ ಬೇವಿನುಡಿಗೆಯಂತಹ ಮೌಡ್ಯಚರಣೆ ನಡೆಯುತ್ತವೆ. ಇತಂಹ ಮೌಡ್ಯ ಆಚರಣೆಗಳ ನಿಷೇಧ ಕುರಿತು ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿಗಳು ಪ್ರತಿಕ್ತಿಯಿಸಿ, ಮೌಡ್ಯ ನಿಷೇಧದ ಕುರಿತ ಫ್ಲೆಕ್ಸ್‌ಗಳನ್ನು ದೇವಾಲಯದ ಸುತ್ತಮುತ್ತ ಅಳವಡಿಸಲಾಗುವುದು. ಇಂತಹ ಆಚರಣೆಗಳು ನಡೆಸುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ದೇವದಾಸಿ ಮತ್ತು ಮುತ್ತುಕಟ್ಟುವಂತಹ ಪದ್ದತಿ ನಿಷೇಧಿಸಲಾಗಿದೆ ಎಂದರು.

ಸಭೆಯಲ್ಲಿ ಶ್ರೀ ದುರ್ಗಾಂಬಿಕಾದೇವಿ ದೇವಸ್ಥಾನ ಟ್ರಸ್ಟ್‌ ಧರ್ಮದರ್ಶಿಗಳಾದ ಯಜಮಾನ್‌ ಮೋತಿ ವೀರಣ್ಣ, ಅಥಣಿ ವೀರಣ್ಣ, ಗೌಡ್ರು ಚನ್ನಬಸಪ್ಪ, ಬಿ.ಎಚ್‌.ವೀರಭದ್ರಪ್ಪ, ಸಾಳಂಕಿ ಉಮೇಶ್‌, ಸೊಪ್ಪಿನವರ ಗುರುರಾಜ್‌, ಪಿ.ಜಿ.ಸತ್ಯನಾರಾಯಣ, ಹನುಮಂತರಾವ್‌ ಸಾವಂತ್‌, ಮಹಾನಗರ ಪಾಲಿಕೆಯ ಸದಸ್ಯರಾದ ಸುಧಾ ಮಂಜುನಾಥ್‌ ಇಟ್ಟಗಿ, ಜಿ.ಡಿ ಪ್ರಕಾಶ್‌, ವಿನಾಯಕ ಪೈಲ್ವಾನ್‌, ದೇವರಮನಿ ಶಿವಕುಮಾರ್‌, ಎಲ್‌.ಡಿ.ಗೋಣೆಪ್ಪ, ರಾಕೇಶ್‌ ಜಾದವ್‌, ಗಾಯತ್ರಿ ಬಾಯಿ, ಜಿಲ್ಲಾ ಉಪವಿಭಾಗಾಧಿಕಾರಿ ಮಮತ ಹೊಸಗೌಡರ್‌, ನಗರಾಭಿವೃದ್ಧಿ ಕೋಶದ ನಿರ್ದೇಶಕಿ ನಜ್ಮಾ .ಜಿ., ತಹಶೀಲ್ದಾರ್‌ ಸಂತೋಷಕುಮಾರ್‌, ಮಹಾನಗರ ಪಾಲಿಕೆ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next