ದಾವಣಗೆರೆ: ಬೆಳಕಿನ ಹಬ್ಬ ದೀಪಾವಳಿಯ ಕೊನೆಯ ದಿನ ಬಲಿಪಾಡ್ಯಮಿಯನ್ನು ಸಂಪ್ರದಾಯ, ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ದೀಪಾವಳಿಯ ಪಾಡ್ಯದ ಹಿನ್ನೆಲೆಯಲ್ಲಿ ಮಂಗಳವಾರ ಮನೆ, ಅಂಗಡಿ, ವಾಣಿಜ್ಯ ಸಂಕೀರ್ಣ, ಹೋಟೆಲ್, ಗ್ಯಾರೇಜ್, ಕಚೇರಿಗಳಲ್ಲಿ ಶ್ರದ್ಧಾಭಕ್ತಿ, ಸಂಪ್ರದಾಯಬದ್ಧವಾಗಿ ಲಕ್ಷ್ಮಿ ಪೂಜೆ ನೆರವೇರಿಸಲಾಯಿತು.
ಮನೆಗಳ ಮುಂದಿನ ಸುಂದರ ರಂಗೋಲಿ ಹಬ್ಬದ ಸಂಭ್ರಮದ ಪ್ರತೀಕದಂತೆ ಕಂಡು ಬಂದಿತು. ಮನೆಗಳಲ್ಲಿ ಹಿರಿಯರ ಪೂಜೆ, ಹಟ್ಟಿ ಲಕ್ಕಮ್ಮನ ಪೂಜೆಗಳು ನಡೆದವು. ತಮ್ಮ ಕುಟುಂಬದ ಹಿರಿಯರ ಫೋಟೋ ಇಟ್ಟು, ವಿಶೇಷ ಖಾದ್ಯಗಳು, ಅವರು ಇಷ್ಟಪಡುತ್ತಿದ್ದ ತಿಂಡಿ-ತಿನಿಸು ಇತರೆಗಳನ್ನಿಟ್ಟು ಪೂಜೆ ಸಲ್ಲಿಸುವ ಮೂಲಕ ಗೌರವ ಸಲ್ಲಿಸುವುದು, ಸ್ಮರಿಸುವುದು ಹಬ್ಬದ ವಿಶೇಷ.
ದೀಪಾವಳಿ ಹಿನ್ನೆಲೆಯಲ್ಲಿ ಮನೆ-ಕಚೇರಿಗಳ ಮುಂದೆ ಬಣ್ಣ ಬಣ್ಣ ಚಿತ್ತಾಕರ್ಷಕ ಆಕಾಶಬುಟ್ಟಿ, ಹಣತೆಗಳ ಲೋಕವೇ ಅನಾವರಣಗೊಂಡಿತ್ತು. ಇನ್ನು ಹಬ್ಬದ ಸ್ಪೆಷಲ್ ಎಂದರೆ ಪಟಾಕಿ. ದೀಪಾವಳಿ ಎಂದರೆ ಪಟಾಕಿ ಹಬ್ಬ ಎಂದೇ ಹೇಳಲಾಗುತ್ತದೆ. ಅದಕ್ಕೆ ಅನ್ವಯವಾಗಿ ಭಾರೀ ಸದ್ದಿನ ಪಟಾಕಿ, ಸರ ಪಟಾಕಿ, ರಾಕೆಟ್, ಬಿರುಸಿನ ಕುಡಿಕೆ, ಸುರ ಸುರ್ ಬತ್ತಿ, ದ್ರಾಕ್ಷಿ ಬಳ್ಳಿ, ಡಬ್ಬಲ್ ಸೌಂಡ್, ತ್ರಿಬ್ಬಲ್ ಸೌಂಡ್, ಹಂಡ್ರೆಡ್, ಥೌಸಂಡ್ ಶಾಟ್ಸ್… ಹೀಗೆ ವಿವಿಧ ನಮೂನೆಯ ಪಟಾಕಿ ಸಿಡಿಸುವ ಮೂಲಕ ಮಕ್ಕಳು, ವಯೋವೃದ್ಧರಾದಿಯಾಗಿ ಸಂಭ್ರಮಿಸಿದರು.
ಹಬ್ಬದ ಕೊನೆಯ ದಿನ ದಾವಣಗೆರೆಯ ಮಾರುಕಟ್ಟೆ ಜನಜಂಗುಳಿಯಿಂದ ತುಂಬಿ ಹೋಗಿತ್ತು. ಹೂವು- ಹಣ್ಣು, ಬಟ್ಟೆ. ದಿನಸಿ, ಪಟಾಕಿ… ಹೀಗೆ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಕೊಂಡುಕೊಳ್ಳುವಲ್ಲಿ ಜನರು ನಿರತರಾಗಿದ್ದರು.
ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಪಟಾಕಿ ಮಳಿಗೆಗಳಲ್ಲಿ ಭಾರೀ ಜನಸಂದಣಿ ಕಂಡು ಬಂದಿತು. ಸಂಜೆಯಾಗುತ್ತಿದ್ದಂತೆ ಪಟಾಕಿ ಖರೀದಿ ಭರ್ಜರಿಯಾಗಿತ್ತು. ದೀಪಾವಳಿ ಹಬ್ಬದ ಮುಂಚೆ ಸುರಿಯುತ್ತಿದ್ದ ಮಳೆ ಸಹ ಹಬ್ಬಕ್ಕಾಗಿಯೇ ಬಿಡುವು ಮಾಡಿಕೊಟ್ಟಿದ್ದು ಸಂಭ್ರಮ ಹೆಚ್ಚಾಗಲು ಕಾರಣವಾಗಿತ್ತು. ಮೂರು ದಿನಗಳ ಬೆಳಕಿನ ಹಬ್ಬ ದೀಪಾವಳಿಯನ್ನ ದಾವಣಗೆರೆಯ ಜನರು ಸಡಗರ, ಸಂಭ್ರಮದಿಂದ ಆಚರಿಸಿದರು.