Advertisement
ಶನಿವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಾಂಸ್ಕೃತಿಕ ಸಭಾಂಗಣದಲ್ಲಿ ವಕೀಲರನ್ನುದ್ದೇಶಿಸಿ ಮಾತನಾಡಿದ ಅವರು, ಸಮಸ್ಯೆ ಹಾಗೂ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ಮಾಡುವುದು ತಪ್ಪಲ್ಲ, ಆದರೆ, ನ್ಯಾಯಾಲಯ ಬಹಿಷ್ಕರಿಸಕೂಡದೆಂದು ಸರ್ವೋಚ್ಛ ನ್ಯಾಯಾಲಯ ಕೂಡ ಆದೇಶಿಸಿದೆ. ಆದರೂ ವಕೀಲರು ಯಾವುದೋ ಕಾರಣದಿಂದಾಗಿ ನ್ಯಾಯಾಲಯದ ಕಲಾಪ ಬಹಿಷ್ಕರಿಸುವುದು ಸರಿಯಲ್ಲ ಎಂದರು.
Related Articles
Advertisement
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದ ನ್ಯಾಯಾಲಯಗಳಲ್ಲಿ ಉತ್ತಮ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಪ್ರಸ್ತುತ ದಾವಣಗೆರೆ ಜಿಲ್ಲಾ ನ್ಯಾಯಾಲಯಗಳಲ್ಲಿ ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ 15 ಕೋಟಿ ರೂ. ಯೋಜನೆಗೆ ಶೀಘ್ರದಲ್ಲೇ ಮಂಜೂರಾತಿ ಸಿಗಲಿದೆ. ವಕೀಲರ ಭವನ ನಿರ್ಮಾಣಕ್ಕೆ ಪ್ರಸ್ತಾವನೆ ಬಂದಿದ್ದು ಅದನ್ನೂ ಆದಷ್ಟು ಬೇಗ ಮಂಜೂರು ಮಾಡಲಾಗುವುದು.
ನ.26ರಂದು ಸಂವಿಧಾನ ದಿನ ಆಗಿರುವುದರಿಂದ ಎಲ್ಲ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಸಂವಿಧಾನ ದಿನ ಕಡ್ಡಾಯವಾಗಿ ಆಚರಿಸಬೇಕು. ಇದನ್ನು ರಾಷ್ಟ್ರಪತಿಗಳೇ ಸೂಚಿಸಿದ್ದಾರೆ ಎಂದರು. ಜನಸಾಮಾನ್ಯರಿಗೆ ಶೀಘ್ರ ನ್ಯಾಯದಾನದ ಉದ್ದೇಶದಿಂದ ಈ ವರ್ಷದ ಅಂತ್ಯಕ್ಕೆ ಎಲ್ಲ 10 ವರ್ಷ ಹಳೆಯ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣ ಹಾಗೂ 2020ರ ಅಂತ್ಯಕ್ಕೆ 7 ವರ್ಷ ಹಳೆಯ ಪ್ರಕರಣಗಳನ್ನು ವಿಲೇವಾರಿಗೆ ಆದ್ಯತೆ ನೀಡಬೇಕಿದೆ. ಒಟ್ಟಾರೆ ಮುಂದಿನ ವರ್ಷಗಳಲ್ಲಿ ಕೆಳಹಂತದ ನ್ಯಾಯಾಲಯಗಳಲ್ಲಿ 5 ವರ್ಷದ ಹಳೆಯ ಯಾವುದೇ ಪ್ರಕರಣ ಇತ್ಯರ್ಥವಾಗದೇ ಬಾಕಿ ಉಳಿಯಬಾರದೆಂಬುದು ನಮ್ಮ ಗುರಿ. ಆ ನಿಟ್ಟಿನಲ್ಲಿ ಕರ್ನಾಟಕವನ್ನು ಬಾಕಿ ಪ್ರಕರಣ ಮುಕ್ತ ರಾಜ್ಯವಾಗಿಸಲು ನ್ಯಾಯಾಂಗ ವ್ಯವಸ್ಥೆಯೊಂದಿಗೆ ವಕೀಲರು ಕೈ ಜೋಡಿಸಬೇಕಿದೆ ಎಂದು ಮನವಿ ಮಾಡಿದರು.
ದಾವಣಗೆರೆ ಜಿಲ್ಲಾ ನ್ಯಾಯಾಲಯ ತಾವು ಭೇಟಿ ನೀಡುತ್ತಿರುವ 14ನೇ ಜಿಲ್ಲಾ ನ್ಯಾಯಾಲಯವಾಗಿದೆ. ಜಿಲ್ಲಾ ನ್ಯಾಯಾಲಯಗಳ ಮೂಲ ಸೌಕರ್ಯ ತಮ್ಮ ಆದ್ಯತೆಯಾಗಿದೆ. ತಮ್ಮ ತಂದೆ ಸಹ ಜಿಲ್ಲಾ ನ್ಯಾಯಾಧೀಶರಾಗಿದ್ದರು. ತಾವು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗುವ ಮುನ್ನ 16 ವರ್ಷ ಜಿಲ್ಲಾ ನ್ಯಾಯಾಲಯದಲ್ಲಿ ಕಲಿತಿದ್ದೇ ಹೆಚ್ಚು ಎಂದು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ಸನ್ಮಾನ, ಗೌರವಿಸುವ ಸಂದರ್ಭದಲ್ಲಿ ನೀಡುವ ಬೊಕ್ಕೆ, ಹಾರ, ಇತರೆ ವಸ್ತುಗಳನ್ನು ನಿರಾಕರಿಸುವೆ. ಏಕೆಂದರೆ ಅವುಗಳನ್ನು ತಯಾರಿಕೆಗೆ ಪರಿಸರ ಹಾಳಾಗಲಿದೆ. ಅರಣ್ಯ, ಪರಿಸರ ಸಂರಕ್ಷಣೆ ನ್ಯಾಯಾಂಗ ವ್ಯವಸ್ಥೆಯಲ್ಲಿರುವವರ ಜವಾಬ್ದಾರಿ ಹಾಗೂ ಕರ್ತವ್ಯಕೂಡ ಎಂದು ಹೇಳಿದರು. ರಾಜ್ಯ ಉಚ್ಛ ನ್ಯಾಯಾಲಯದ ಜನರಲ್ ರಿಜಿಸ್ಟ್ರಾರ್ ರಾಜೇಂದ್ರ ಬದಾಮಿಕರ್, ಇನ್‌ಫ್ರಾಸ್ಟ್ರಕ್ಚರ್ ರಿಜಿಸ್ಟ್ರಾರ್ ಎಂ.ಚಂದ್ರಶೇಖರ ರೆಡ್ಡಿ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾ ಧೀಶ ಅಂಬಾದಾಸ್ ಜಿ ಕುಲಕರ್ಣಿ ವೇದಿಕೆಯಲ್ಲಿದ್ದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ. ಮಂಜುನಾಥ್ ಸ್ವಾಗತಿಸಿದರು. ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ದಿವಾಕರ್ ರಾಜ್ಯ ಮುಖ್ಯ ನ್ಯಾಯಮೂರ್ತಿಗಳ ಪರಿಚಯ ಮಾಡಿಕೊಟ್ಟರು. ಎಸ್.ಬಸವರಾಜು ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಮುಖ್ಯ ನ್ಯಾಯಮೂರ್ತಿಗಳು ಜಿಲ್ಲಾ ನ್ಯಾಯಾಲಯದಲ್ಲಿನ ಮೂಲ ಸೌಲಭ್ಯ ಪರಿಶೀಲಿಸಿದರು.