ದಾವಣಗೆರೆ: ಜಿಲ್ಲೆಯಲ್ಲಿ ವರದಿಯಾಗಿದ್ದ ಮೂರು ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳ ಪೈಕಿ ಇಬ್ಬರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಇನ್ನೊಬ್ಬರ ಫಲಿತಾಂಶ ಮಂಗಳವಾರ ಲಭ್ಯವಾಗಲಿದೆ. ಅವರೂ ಸಹ ಆಸ್ಪತ್ರೆಯಿಂದ ಬಿಡುಗಡೆ ಹೊಂದುವ ಭರವಸೆ ಇದ್ದು, ಇದು ಜಿಲ್ಲೆಗೆ ಸಂತಸದ ಸುದ್ದಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.
ಸೋಮವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಇನ್ನು ಮುಂದೆಯೂ ಕೊರೊನಾ ವಿರುದ್ಧ ಸಮರ ಸಾರಲು ಜಿಲ್ಲಾಡಳಿತದ ತಂಡಗಳು ಸನ್ನದ್ಧವಾಗಿವೆ ಎಂದರು. ಜಿಲ್ಲೆಯಲ್ಲಿ ಮತ್ತೆ ಯಾವುದೇ ಕೊರೊನಾ
ಪಾಸಿಟಿವ್ ಪ್ರಕರಣ ವರದಿಯಾಗದಂತೆ ಎಲ್ಲ ತಂಡಗಳು ಶ್ರಮಿಸಬೇಕು. ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಇಬ್ಬರು ಗುಣಮುಖವಾದ ಸೋಂಕಿತರನ್ನು ಅ ಧಿಗ್ರಹಣ ಮಾಡಿಕೊಳ್ಳಲಾದ ಜಿಎಂಐಟಿ ಅತಿಥಿ ಗೃಹದಲ್ಲಿ 14 ದಿನಗಳ ಇನ್ ಸ್ಟಿಟ್ಯೂಷನಲ್ ಅವಲೋಕನ ಅವಧಿಯಲ್ಲಿ ಇರಿಸಲಾಗುವುದು ಎಂದು ತಿಳಿಸಿದರು.
ಅಂತ್ಯೋದಯ ಕಾರ್ಡಿಗೆ ಎರಡು ತಿಂಗಳಿಗೆ 70 ಕೆ.ಜಿ.ಅಕ್ಕಿ ನೀಡಲಾಗುವುದು. ಬಿಪಿಎಲ್ ಕಾರ್ಡಿಗೆ ಒಬ್ಬ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ಹಾಗೂ ಒಂದು ಕಾರ್ಡಿಗೆ
4 ಕೆ.ಜಿ. ಗೋದಿ ನೀಡಲಾಗುವುದು. ಎಪಿಎಲ್ ಕಾರ್ಡಿಗೆ ಒಂದು 1 ಕೆ.ಜಿ.ಗೆ 15 ರೂ. ನಂತೆ 10 ಕೆ.ಜಿ. ಅಕ್ಕಿ ನೀಡಲಾಗುವುದು. ಓಟಿಪಿ ಇಲ್ಲದಿದ್ದರೂ ಸಹ ಪಡಿತರ ಚೀಟಿದಾರರ ಸಹಿ ಪಡೆದು ಪಡಿತರ ನೀಡಬೇಕೆಂದು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರು.
ಜಿಲ್ಲೆಯಲ್ಲಿ ಕೆಲವೆಡೆ ಅಡುಗೆ ಅನಿಲ ಸಾಗಾಣಿಕೆ ವಾಹನಗಳನ್ನು ತಡೆದು ಅಡ್ಡಿಪಡಿಸುತ್ತಿರುವುದು ಗಮನಕ್ಕೆ ಬಂದಿದ್ದು, ಯಾರೂ ಕೂಡ ಅಡ್ಡಿಪಡಿಸಬಾರದು. ಕೋಳಿ, ಮೀನು, ಕುರಿ ಮಾಂಸದ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಾರ್ವಜನಿಕರು ಖರೀದಿ ಮಾಡಬೇಕು. ಜನದಟ್ಟಣೆಯಾದಲ್ಲಿ ಅಂಗಡಿಗಳ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಹೇಳಿದರು.
ಜಿ.ಪಂ ಸಿಇಒ ಪದ್ಮಾ ಬಸವಂತಪ್ಪ, ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಉಪ ವಿಬಾಗಾಧಿಕಾರಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಎಚ್‌ಓ ಡಾ| ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಜಿ.ಡಿ. ರಾಘವನ್, ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಆಹಾರ ಇಲಾಖೆ ಉಪನಿರ್ದೇಶಕ ಮಂಟೇಸ್ವಾಮಿ, ತೋಟಗಾರಿಕೆ ಇಲಾಖೆ ಡಿಡಿ ಲಕ್ಷ್ಮೀಕಾಂತ್ ಬೊಮ್ಮನ್ನಾರ್, ಇತರೆ ಅಧಿಕಾರಿಗಳು ಇದ್ದರು.