ದಾವಣಗೆರೆ: ಆಮ್ಲೆಟ್, ಮರಿಗೌಡ, ಕಾಲಾಪಾಡ್, ಕಲರ್‌ಪಳ್, ಆಮ್ರಪಾಲಿ, ಗೋಲಿಲ್ನಾಟಿ, ರತ್ನ, ಇಮಾಮ್ ಪಸಂದ್, ಎಚ್-13, ನಿರಂಜನ್, ಅರ್ಕ ಪುನೀತ್, ಸುಂದರ್ ಷಾ, ಅರ್ಕನೀಲ ಕಿರಣ್, ರಂಗೂನ್ ಗೋವಾ, ಲಾಲ್ಖಾತ್ರ, ಚಿರುಕು ರಸಂ, ಪೂಸಾ ಸೂರ್ಯ, ಮಾನ್ಯ-2, ಬನೇಶಾನ್, ಬಂದಾರಿಯಾ, ಇಲೈಸಿ, ಐಶ್ವರ್ಯ….
ಅರೇ ಇವೆಲ್ಲಾ ಏನು ಅನ್ನಿಸಬಹುದು. ಇವು ಹಣ್ಣುಗಳ ರಾಜ… ಎಂದೇ ಕರೆಯಲ್ಪಡುವ ಮಾವಿನ ವಿವಿಧ ತಳಿಗಳ ಹೆಸರು!.
ಹ್ಹಾ …ಆಮ್ಲೆಟ್, ಕಲರ್‌ಪಳ್, ಮರಿಗೌಡ, ಗೋಲಿಲ್ನಾಟಿ, ಆಮ್ರಪಾಲಿ, ಎಚ್-13, ನಿರಂಜನ್, ರತ್ನ, ಮಾನ್ಯ… ಎನ್ನುವಂತಹ ಮಾವಿನ ಹಣ್ಣುಗಳು ಇದಾವಾ ಎಂದು ಆಶ್ಚರ್ಯ ಆಗಬಹುದು. ನಿಜವಾಗಿಯೂ ಇವು ಮಾವಿನ ಹಣ್ಣುಗಳ ವಿವಿಧ ತಳಿಗಳು. ಅಂತಹ ಎಲ್ಲ ಮಾವಿನ ಹಣ್ಣುಗಳನ್ನ ಒಟ್ಟಿಗೆ ನೋಡಬೇಕು ಎನ್ನುವುದಾದರೆ ಗಾಜಿನಮನೆಗೆ ಭೇಟಿ ನೀಡಿದರೆ ಸಾಕು. ಒಂದೇ ಕಡೆ 30ಕ್ಕೂ ಹೆಚ್ಚು ವಿವಿಧ ಮಾವಿನ ಹಣ್ಣುಗಳನ್ನ ನೋಡಬಹುದು, ಮಾತ್ರವಲ್ಲ ನೈಸರ್ಗಿಕವಾಗಿ ಮಾಗಿದ ಹಣ್ಣುಗಳನ್ನ ಮನಃಪೂರ್ವಕವಾಗಿ ಸವಿಯಲೂಬಹುದು.
ನೈಸರ್ಗಿಕವಾಗಿ ಮಾಗಿಸಿದ, ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಯೋಗ್ಯ ಬೆಲೆಯಲ್ಲಿ ಒದಗಿಸುವ, ಮಾವಿನ ಹಣ್ಣಿನಲ್ಲಿರುವ ಪೋಷಕಾಂಶಗಳ ಲಭ್ಯತೆ, ಸೇವನೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ಒಳಗೊಂಡಂತೆ ವಿವಿಧ ಉದ್ದೇಶದೊಂದಿಗೆ ಆಯೋಜಿಸಲಾಗಿರುವ ಮೇಳದಲ್ಲಿ ಸಂತೇಬೆನ್ನೂರು, ಹಾವೇರಿ ಮುಂತಾದ ಕಡೆಯಲ್ಲಿ ಬೆಳೆಯಲಾಗಿರುವ ಹಣ್ಣುಗಳನ್ನ ಗ್ರಾಹಕರು ಯೋಗ್ಯ ಬೆಲೆಗೆ ಕೊಂಡುಕೊಳ್ಳಬಹುದು.
ಅಡಕೆ ಮಾವು… ಎಂಬ ಸಣ್ಣ ಗಾತ್ರದ ಮಾವಿನ ರುಚಿ ಸಖತ್ ಟೇಸ್ಟ್. ನೋಡಲಿಕ್ಕೆ ಅಡಕೆ ಗಾತ್ರದಂತಿರುವ ಈ ಮಾವಿನ ಹಣ್ಣನ್ನು ನಮ್ಮ ಸಂತೇಬೆನ್ನೂರು ಬಳಿ ಬೆಳೆಯಲಾಗುತ್ತದೆ. ಆದರೆ, ಅಡಕೆ ಮಾವು ಹೆಚ್ಚಾಗಿ ಬೆಳೆಯುವುದಿಲ್ಲ ಎನ್ನುವುದೇ ವಿಶೇಷ. ಹಣ್ಣಿನ ಗಾತ್ರ ಸಣ್ಣದ್ದಾಗಿದ್ದರೂ ರುಚಿ ಬಹಳ ಚೆನ್ನಾಗಿ ಇರುತ್ತದೆ ಎನ್ನುತ್ತಾರೆ ಸಂತೇಬೆನ್ನೂರಿನ ರೋಷನ್.
ಕರ್ನಾಟಕದಲ್ಲಿ ಅತಿ ಕಡಿಮೆಯಾಗಿ ಬೆಳೆಯುವ ಕೇಸರ್… ಹಣ್ಣು ಬಹಳ ರುಚಿಯಾಗಿರುತ್ತದೆ. ನಮಗಿಂತಲೂ ಮಹಾರಾಷ್ಟ್ರದಲ್ಲಿ ಬಹಳ ಹೆಚ್ಚಾಗಿ ಕೇಸರ್… ಮಾವಿನಹಣ್ಣು ಬೆಳೆಯಲಾಗುತ್ತದೆ. ಮೇಳದ ಅಂಗವಾಗಿ ದೂರದ ಮಹಾರಾಷ್ಟ್ರದಿಂದ ತರಿಸಿ, ಮಾರಾಟ ಮಾಡಲಾಗುತ್ತಿದೆ.
ಇತರೆ ಎಲ್ಲಾ ಹಣ್ಣುಗಳಿಗಿಂತಲೂ ಡಿಫರೆಂಟ್ ಟೇಸ್ಟ್‌ನ ಮಲಗೋವಾ, ಸ್ಥಳೀಯ ತಳಿ ಸಿಂಧೂರ, ನಾರು ಹೆಚ್ಚಾಗಿ ಇರದ, ಸಿಪ್ಪೆ ತಿನ್ನುತ್ತಿದ್ದಂತೆ ಸಕ್ಕರೆ ತಿಂದ ಸವಿ ನೀಡುವ ಬೇನಿಶಾನ್, ಎಲ್ಲಕ್ಕಿಂತಲೂ ಬಲು ರುಚಿಯ ದಶೆಹರಿ, ಸಾರ್ವಜನಿಕರು, ಮಾವಿನ ಪ್ರಿಯರು ಅತೀ ಹೆಚ್ಚಾಗಿಯೇ ಬಯಸುವ ಬಾದಾಮಿ, ಅತಿ ಹೆಚ್ಚಿನ ಉದ್ದನೆಯ, ಭರಪೂರ ಸಿಹಿಯ ಮಲ್ಲಿಕಾ… ಎಲ್ಲಾ ಬಗೆಯ ಹಣ್ಣುಗಳು ಮೇಳದಲ್ಲಿ ಲಭ್ಯ. ರಾಜ್ಯ ಮಾರುಕಟ್ಟೆ ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕಾ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಈ ತಿಂಗಳ 23ರ ವರೆಗೆ ನಡೆಯಲಿದೆ. ಮಾವು ಪ್ರಿಯರು ಎಲ್ಲ ರೀತಿಯ ಹಣ್ಣುಗಳ ಸವಿಯನ್ನು ಸವಿಯಬಹುದು.