Advertisement

ದೇಶ ವಿಭಜನೆ ಹುನ್ನಾರ ಅಂತ್ಯ

11:16 AM Oct 12, 2019 | Naveen |

ದಾವಣಗೆರೆ: ಜಮ್ಮು ಮತ್ತು ಕಾಶ್ಮೀರದ ವಿಚಾರ ಮುಂದಿಟ್ಟುಕೊಂಡು ಧರ್ಮದ ಹೆಸರಿನಲ್ಲಿ ದೇಶ ವಿಭಜಿಸುವ ವ್ಯವಸ್ಥಿತ ಹುನ್ನಾರವನ್ನು ಸಂವಿಧಾನದ 370ನೇ ವಿಧಿ ಮತ್ತು ವಿಶೇಷ ಸ್ಥಾನಮಾನ 35 (ಎ) ವಿಧಿ ರದ್ದು ಕ್ರಮ ತಡೆದಿದೆ ಎಂದು ಚಿಂತಕ, ಬೆಂಗಳೂರಿನ ಗಿರಿಧರ್‌ ಉಪಾಧ್ಯಾಯ ಅಭಿಪ್ರಾಯಪಟ್ಟಿದ್ದಾರೆ.

Advertisement

ಶುಕ್ರವಾರ, ದಾವಣಗೆರೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ಸಂವಿಧಾನದ 370ನೇ ವಿಧಿ ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ 35 (ಎ) ವಿಧಿ ರದ್ದು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ಅವರು, ದೇಶದ ಭದ್ರತೆ, ಏಕತೆ ವಿಚಾರವನ್ನು ಮರೆಮಾಚಿ, ವೈಯಕ್ತಿಕ ಹಿತಾಸಕ್ತಿಗಾಗಿ ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ವ್ಯವಸ್ಥೆಯಿಂದ ದೂರ ಇಡುವ ಪ್ರಯತ್ನ ನಡೆಯಿತು. ಇದರ ಪರಿಣಾಮವಾಗಿ ಆ ಭಾಗ ಭಾರತದಲ್ಲಿದ್ದರೂ ಪರಕೀಯವಾದಂತಾಗಿ, ಪ್ರತ್ಯೇಕ ಸಂವಿಧಾನ, ರಾಷ್ಟ್ರಧ್ವಜ ಇತ್ತು.

ಇವೆಲ್ಲ ತಾರತಮ್ಯ ಧೋರಣೆಗಳಿಗೆ ಸಂವಿಧಾನದ 370ನೇ ವಿಧಿ ರದ್ದು ಅಂತ್ಯ ಹೇಳಿದೆ. ಇದೀಗ ಅಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ ಎಂದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಸಂವಿಧಾನದ 370ನೇ ವಿಧಿ ಮತ್ತು ವಿಶೇಷ ಸ್ಥಾನಮಾನ 35 (ಎ) ವಿಧಿಯನ್ನು ಅಲ್ಲಿಯ ರಾಜಕೀಯ ಪಕ್ಷಗಳು ದುರ್ಬಳಕೆ ಮಾಡಿಕೊಂಡು ತಮ್ಮ ಅಸ್ತಿತ್ವ ರೂಪಿಸಿಕೊಳ್ಳಲು ಮುಂದಾಗಿದ್ದವು. ಇದರಿಂದಾಗಿ ಆ ಭಾಗದ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಹಿಂದೂಗಳು ಅಲ್ಲಿ ಅಲ್ಪಸಂಖ್ಯಾತರಾಗಿದ್ದರೂ ಯಾವುದೇ ಸೌಲಭ್ಯ ಸಿಕ್ಕಿರಲಿಲ್ಲ. ನಿರಂತರ ದೌರ್ಜನ್ಯ, ದಬ್ಟಾಳಿಕೆಯಿಂದ ಅಸ್ತಿತ್ವ ಕಳೆದುಕೊಂಡಿದ್ದಾರೆ. ಲಕ್ಷಗಟ್ಟಲೆ ಹಿಂದೂಗಳ ಹತ್ಯೆ ನಡೆದಿದ್ದರೂ ವಿಚಾರಣೆ ನಡೆಯದೇ ಮುಚ್ಚಿ ಹಾಕಲಾಗಿದೆ. ಇಂಥ ಏಕಪಕ್ಷೀಯ ದುರಾಡಳಿತ ವ್ಯವಸ್ಥೆಯಿಂದ ಆ ಜನರು ನಲುಗಿದ್ದರು ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಹೊಸ ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಪರಿಣಾಮಕಾರಿ ಬದಲಾವಣೆ ನಿರೀಕ್ಷಿಸಲಾಗಿದೆ. ಮೊದಲು ಕಾಶ್ಮೀರಿ ಪಂಡಿತರು ತಮ್ಮ ಮೂಲ ನೆಲೆ ಕಂಡುಕೊಳ್ಳಲು ನೆರವಾಗಬೇಕಾಗಿದೆ.

Advertisement

ಕೈಗಾರಿಕೆ ಅಭಿವೃದ್ಧಿ, ಸಾಮಾಜಿಕ ಪರಿವರ್ತನೆ, ಜನರಲ್ಲಿ ನೆಮ್ಮದಿ ನೀಡುವ ವಾತಾವರಣದ ಅನಿವಾರ್ಯತೆಯಿದೆ. ಇದಕ್ಕೆ ರಾಜಕೀಯ ಹಿತಾಸಕ್ತಿ ಬಿಟ್ಟು ದೇಶದ ಭದ್ರತೆ, ಏಕತೆಗೆ ಎಲ್ಲರೂ ಒಗ್ಗೂಡಿ ಕೈ ಜೋಡಿಸಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ದೇಶದ ಅಭಿವೃದ್ಧಿ, ಏಕತೆಗಾಗಿ, ಸಾಮಾಜಿಕ ಮೌಲ್ಯಗಳನ್ನು ಜನಪರ ಹಕ್ಕುಗಳ ಪ್ರತಿಪಾದನೆಗಾಗಿ ಸಂವಿಧಾನ ರಚಿಸಲಾಗಿದೆ. ಆದರೆ ಸಂವಿಧಾನದ ಹಕ್ಕುಗಳ ಉಲ್ಲಂಘನೆ ಅಥವಾ ಉದ್ದೇಶ ದುರುಪಯೋಗ ಮಾಡಿಕೊಳ್ಳುವುದು ಸರಿಯಲ್ಲ. ರಾಜಕೀಯ ಹಿತಾಸಕ್ತಿಗಿಂತ ದೇಶದ ಭದ್ರತೆ ಮುಖ್ಯ ಎಂಬುದನ್ನು ಎಲ್ಲರೂ ಅರಿಯುವುದು ಅಗತ್ಯಎಂದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದರಿಂದ ಅಲ್ಲಿಯ ಅಭಿವೃದ್ಧಿಗೆ ಪೂರಕವಾಗಲಿದೆ. ವಿಶೇಷ ಸ್ಥಾನಮಾನ ರದ್ದು ಮಾಡಿದ ಕ್ರಮದಿಂದ ಸಮಗ್ರ ಭಾರತದಲ್ಲಿ ಏಕರೂಪದ ಸಂವಿಧಾನ ಜಾರಿಯಾದಂತಾಗಿದೆ ಎಂದು ಪ್ರತಿಪಾದಿಸಿದರು. ಕುಲಸಚಿವ ಪ್ರೊ. ಬಸವರಾಜ ಬಣಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವೆ (ಪರೀಕ್ಷಾಂಗ)
ಪ್ರೊ.ಗಾಯತ್ರಿ ದೇವರಾಜ್‌, ಹಣಕಾಸು ಅಧಿಕಾರಿ ಪ್ರೊ.ಗೋಪಾಲ್‌ ಅಡವಿರಾವ್‌, ಸಿಂಡಿಕೇಟ್‌ ಸದಸ್ಯರಾದ ಕೊಂಡಜ್ಜಿ ಜಯಪ್ರಕಾಶ್‌, ಶಶಿಧರ್‌, ಡೀನ್‌ರಾದ ಪ್ರೊ. ಕೆ.ಬಿ.ರಂಗಪ್ಪ, ಪ್ರೊ.ಪಿ.ಲಕ್ಷ್ಮಣ ಇತರರು ಕಾರ್ಯಕ್ರಮದಲ್ಲಿದ್ದರು.

ರಾಜ್ಯಶಾಸ್ತ್ರ ವಿಭಾಗದ ಸಂಯೋಜನಾಧಿಕಾರಿ ಡಾ.ಅಶೋಕಕುಮಾರ ಪಾಳೇದ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಪಿ.ಎಲ್‌. ಪ್ರವೀಣ ವಂದಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಂ. ವಿನಯ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next