Advertisement

ಕಾಂಗ್ರೆಸ್‌ ಮುಕ್ತ ದಾವಣಗೆರೆಯನ್ನಾಗಿಸಿ

12:34 PM Feb 16, 2020 | Naveen |

ದಾವಣಗೆರೆ: ಮುಂದೆ ಎದುರಾಗಲಿರುವ ಎಲ್ಲಾ ಚುನಾವಣೆಗಳಲ್ಲೂ ಯಶಸ್ಸು ಗಳಿಸುವುದರೊಂದಿಗೆ ದಾವಣಗೆರೆ ಜಿಲ್ಲೆಯನ್ನ ಕಾಂಗ್ರೆಸ್‌ ಮುಕ್ತವನ್ನಾಗಿಸಲು ಬಿಜೆಪಿ ನೂತನ ಜಿಲ್ಲಾಧ್ಯಕ್ಷರು ಕಾರ್ಯೋನ್ಮುಖರಾಗಬೇಕು ಎಂದು ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ್‌ ಕಟೀಲು ತಿಳಿಸಿದ್ದಾರೆ.

Advertisement

ಶನಿವಾರ ನಗರದ ಹೊರವಲಯದಲ್ಲಿರುವ ಶಾಮನೂರು ಜಯದೇವಪ್ಪ ಕಲ್ಯಾಣ ಮಂಟಪದಲ್ಲಿ ಬಿಜೆಪಿ ನೂತನ ಅಧ್ಯಕ್ಷ ಎಸ್‌.ಎಂ.ವೀರೇಶ್‌ ಹನಗವಾಡಿ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದ ಅಧ್ಯಕ್ಷ ಎಂಬುದು ಸ್ಥಾನವಲ್ಲ. ಅದು ಜವಾಬ್ದಾರಿ. ಮುಂದಿನ ತಮ್ಮ ಮೂರು ವರ್ಷಗಳ ಅವಧಿಯಲ್ಲಿ ಬರಲಿರುವ ಸ್ಥಳೀಯ ಸಂಸ್ಥೆಗಳ ಎಲ್ಲಾ ಚುನಾವಣೆಗಳು, ಮುಖ್ಯವಾಗಿ ದಾವಣಗೆರೆ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯಶಾಲಿಗಳಾಗುವ ನಿಟ್ಟಿನಲ್ಲಿ ಪಕ್ಷ ಸಂಘಟಿಸಬೇಕು ಎಂದು ತಾಕೀತು ಮಾಡಿದರು.

ನಿಕಟಪೂರ್ವ ಅಧ್ಯಕ್ಷ ಯಶವಂತರಾವ್‌ ಜಾಧವ್‌ ತಮ್ಮ ಭಾಷಣದಲ್ಲಿ ನತದೃಷ್ಟ ಎಂಬುದಾಗಿ ಹೇಳಿದ್ದನ್ನು ಉಲ್ಲೇಖೀಸಿದ ಕಟೀಲು, ನಿಮ್ಮ ಅವಧಿಯಲ್ಲಿ ಜಿಲ್ಲೆಯಲ್ಲಿ ಪಕ್ಷದ 6 ಮಂದಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿನಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದಿದೆ.ಪಕ್ಷವನ್ನು ಉತ್ತಮವಾಗಿ ಸಂಘಟಿಸಿದ್ದೀರಿ. ಹಾಗಾಗಿ ನೀವು ನತದೃಷ್ಟರಲ್ಲ ವಿಜಯಿ ಅಧ್ಯಕ್ಷ ಎಂದು ಬಣ್ಣಿಸಿದರು.

ಪಕ್ಷದ ನೂತನ ಅಧ್ಯಕ್ಷರು ಎಂಬಿಬಿಎಸ್‌ ನಂತೆ ಕೆಲಸ ಮಾಡಬೇಕು. ಅಂದರೆ, ಮನೆ
ಬಿಟ್ಟು ಬೀದಿ ಸುತ್ತಾಡುವುದು. ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಒಗ್ಗಟ್ಟಾಗಿ ಆ ನಿಟ್ಟಿನಲ್ಲಿ ಹೊಣೆಗಾರಿಕೆಯಿಂದ ಕೆಲಸ ಮಾಡಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ. ಪಕ್ಷದ ಅಧ್ಯಕ್ಷ ಎಂಬುದು ತಲೆಯಲ್ಲಿದ್ದರೆ ಅಹಂಕಾರ ಬರಲಿದೆ. ಅದು ಹೃದಯಲ್ಲಿದ್ದರೆ ಜವಾಬ್ದಾರಿ ಇರಲಿದೆ. ಹಾಗಾಗಿ ಪಕ್ಷದ ಸಿದ್ಧಾಂತ, ವಿಚಾರಗಳನ್ನು
ಜನರಿಗೆ ತಿಳಿಸುವ ಮೂಲಕ ಹಿಂದಿನ ಅಧ್ಯಕ್ಷ ಜಾಧವ್‌ರಂತೆಯೇ ಉತ್ತಮ ರೀತಿ ಸಂಘಟಿಸಿ ಎಂದು ಅವರು ಕಿವಿಮಾತು ಹೇಳಿದರು.

ಹಲವು ಹಿರಿಯರು, ನಿಷ್ಠಾವಂತ ಕಾರ್ಯಕರ್ತರ ತಪಸ್ಸಿನ ಫಲವಾಗಿ ನಮಗೆ ಈ ಸ್ಥಾನಮಾನ ಸಿಕ್ಕಿದೆ. ಅದರ ಅರಿವು ನಮಗಿರಬೇಕಿದೆ. ಹಾಗಾಗಿ ಬಹಳ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಮುಂದಿನ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯ ಎಲ್ಲಾ ವಿಧಾನ ಸಭಾ
ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವಂತೆ ಮಾಡುವ ನಿಟ್ಟಿನಲ್ಲಿ ಪಕ್ಷ ಸದೃಢಗೊಳಿಸಬೇಕು. ಎಲ್ಲಾ ಕಾರ್ಯಕರ್ತರಲ್ಲೂ ತಾವರೆ ಇರುವಂತಾಗಬೇಕು ಎಂದರು.

Advertisement

ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಅಧ್ಯಕ್ಷತೆ ವಹಿಸಿದ್ದರು. ಸಂಸದ ಜಿ.ಎಂ.ಸಿದ್ದೇಶ್ವರ್‌, ಬಿಜೆಪಿ ರಾಜ್ಯ ಕಾರ್ಯದರ್ಶಿ ಮಹೇಶ್‌ ತೆಂಗಿನಕಾಯಿ, ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಎಸ್‌.ಎಂ.ವೀರೇಶ್‌ ಹನಗವಾಡಿ, ಶಾಸಕರಾದ ಎಸ್‌.ಎ.ರವೀಂದ್ರನಾಥ್‌, ಎಸ್‌.ವಿ.ರಾಮಚಂದ್ರ, ಪ್ರೊ.ಎನ್‌. ಲಿಂಗಣ್ಣ, ವಿಭಾಗೀಯ ಉಸ್ತುವಾರಿ ಜಿ.ಎಂ. ಸುರೇಶ್‌, ಜಿಲ್ಲಾ ಚುನಾವಣಾ ಪ್ರಮುಖ್‌ ದತ್ತಾತ್ರಿ, ಸಹ ಪ್ರಮುಖ್‌ ಅಣಬೇರು ಜೀವನಮೂರ್ತಿ, ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್‌. ಶಿವಯೋಗಿಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋದಮ್ಮ ಮರುಳಪ್ಪ, ಎಚ್‌. ಆನಂದಪ್ಪ, ಇತರರು ಉಪಸ್ಥಿತರಿದ್ದರು.

ಹರಿಹರ ಮಾಜಿ ಶಾಸಕ ಬಿ.ಪಿ.ಹರೀಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ದೂಡ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌ ಸ್ವಾಗತಿಸಿದರು. ರಮೇಶ ನಾಯ್ಕ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next