ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ 45 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 22 ವಾರ್ಡ್‌ಗಳಲ್ಲಿ ಜಯಗಳಿಸುವ ಮೂಲಕ ಸತತ ಎರಡನೇ ಬಾರಿಗೆ ಅಧಿಕಾರ ಹಿಡಿಯುವ ಪ್ರಯತ್ನದಲ್ಲಿದೆ. ಮಂಗಳವಾರ ನಡೆದ 45 ವಾರ್ಡ್ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ 45 ವಾರ್ಡ್, ಕಾಂಗ್ರೆಸ್ 44(45ನೇ ವಾರ್ಡ್ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡ ಕಾರಣ), ಜೆಡಿಎಸ್ 23, ಸಿಪಿಐ 6, ಬಿಎಸ್ಪಿ 3, ಕೆಪಿಜೆಪಿ 2, ಸೂಸಿ 1 ಹಾಗೂ 84 ಪಕ್ಷೇತರರು ಕಣದಲ್ಲಿದ್ದರು.
ಕಾಂಗ್ರೆಸ್ 22, ಬಿಜೆಪಿ 17, ಜೆಡಿಎಸ್ 1 ಹಾಗೂ 5 ವಾರ್ಡ್‌ಗಳಲ್ಲಿ ಪಕ್ಷೇತರರು ಜಯಗಳಿಸಿದ್ದಾರೆ. ಎರಡನೇ ಬಾರಿಗೆ ಮಹಾನಗರ ಪಾಲಿಕೆಯ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ತೀವ್ರ ಪೈಪೋಟಿ ನಡೆಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಪ್ರಚಾರದ ನೇತೃತ್ವ ವಹಿಸಿದ್ದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾ ಚಾರ್ಯ, ಸಂಸದ ಜಿ.ಎಂ. ಸಿದ್ದೇಶ್ವರ್. ಶಾಸಕರಾದ ರವೀಂದ್ರನಾಥ್, ಎಸ್.ವಿ. ರಾಮಚಂದ್ರ, ಮಾಡಾಳ್ ವಿರುಪಾಕ್ಷಪ್ಪ, ಪ್ರೊ| ಲಿಂಗಣ್ಣ, ನೆಹರು ಚ. ಓಲೇಕಾರ್ ಇತರರು ಪ್ರಚಾರ ಕೈಗೊಂಡಿದ್ದರೂ ಬಿಜೆಪಿ ನಿರೀಕ್ಷಿತ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ. ಕಾರಣ ಟಿಕೆಟ್ ಹಂಚಿಕೆಯಲ್ಲಿನ ಗೊಂದಲ, ಬಂಡಾಯದ ಬಿಸಿ. ಆದರೂ, ಕಳೆದ ಚುನಾವಣೆಯಲ್ಲಿ ಕೇವಲ ಒಂದು ವಾರ್ಡ್‌ನಲ್ಲಿ ಗೆದ್ದಿದ್ದಂತಹ ಬಿಜೆಪಿ 17 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ.
ಜೆಡಿಎಸ್ ಓರ್ವ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಗೆದ್ದ ಐವರು ಪಕ್ಷೇತರರಲ್ಲಿ ಇಬ್ಬರು ಬಿಜೆಪಿ ಬಂಡಾಯ ಅಭ್ಯರ್ಥಿಗಳು ಎಂಬ ಮಾತಿದೆ. ಕಳೆದ ಅವಧಿಯಲ್ಲಿ 36 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಿದ್ದ ಕಾಂಗ್ರೆಸ್ 14 ವಾರ್ಡ್ ಕಳೆದುಕೊಂಡಿದೆ. ಹಿರಿಯ ಕಾಂಗ್ರೆಸ್ಸಿಗ, ಶಾಸಕ ಶಾಮನೂರು ಶಿವಶಂಕಪ್ಪ, ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಟಾರ್, ಜಿಲ್ಲಾ ಅಧ್ಯಕ್ಷ ಎಚ್.ಬಿ. ಮಂಜಪ್ಪ ಪ್ರಚಾರ ನಡೆಸಿದ್ದರು.
ಕೆಲವಾರು ವಾರ್ಡ್‌ಗಳಲ್ಲಿನ ಬಂಡಾಯ ತಣಿಸುವ ಪ್ರಯತ್ನ ನಡೆಯಲಿಲ್ಲ. ಎಲ್ಲಕ್ಕಿಂತಲೂ ಮುಖ್ಯವಾಗಿ ಈಗಲೂ ತಮ್ಮದೇ ಆದ ಛರಿಷ್ಮ… ಹೊಂದಿರುವ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಪ್ರಚಾರದಲ್ಲಿ ಸಕ್ರಿಯವಾಗದೆ ದೂರ ಉಳಿದಿದ್ದು ಕಾಂಗ್ರೆಸ್‌ಗೆ ಬಹು ದೊಡ್ಡ ಹೊಡೆತ. ಕಳೆದ ಅವಧಿಯಲ್ಲಿ ಶೂನ್ಯ ಸಂಪಾದನೆ ಮಾಡಿದ್ದ ಜೆಡಿಎಸ್ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಸಿಪಿಐನ ಆವರಗೆರೆ ಎಚ್.ಜಿ. ಉಮೇಶ್ ಪರಾಭವಗೊಳ್ಳುವ ಮೂಲಕ ಸಿಪಿಐ ಪ್ರತಿನಿಧಿತ್ವ ಇಲ್ಲವಾಗಿದೆ. ಕಳೆದ ಅವಧಿಯಲ್ಲಿ ಮೂವರು ಪಕ್ಷೇತರರು ಆಯ್ಕೆಯಾಗಿದ್ದರು. ಈ ಬಾರಿ ಐವರು ಆಯ್ಕೆಯಾಗಿದ್ದಾರೆ. ಅವರಲ್ಲಿ ಮಾಜಿ ಮೇಯರ್ ಉಮಾ ಪ್ರಕಾಶ್ ಪ್ರಮುಖರು.