Advertisement

ಪಾಲಿಕೆಯಲ್ಲಿ ಮತ್ತೆ ಅರಳಿದ ಕಮಲ

11:20 AM Feb 20, 2020 | |

ದಾವಣಗೆರೆ: ಕಾಂಗ್ರೆಸ್‌ ಸದಸ್ಯರ ಸಭಾತ್ಯಾಗ, ಮೂವರು ಸದಸ್ಯರ ಗೈರು, ಬಿಜೆಪಿ ಸದಸ್ಯರ ರಣೋತ್ಸಾಹದ ನಡುವೆ ಬುಧವಾರ ನಡೆದ ಚುನಾವಣೆಯಲ್ಲಿ ನೂತನ ಮೇಯರ್‌ ಆಗಿ ಬಿಜೆಪಿಯ 17ನೇ ವಾರ್ಡ್‌ ಸದಸ್ಯ ಬಿ.ಜೆ. ಅಜಯ್‌ ಕುಮಾರ್‌, ಉಪ ಮೇಯರ್‌ ಆಗಿ 13ನೇ ವಾರ್ಡ್‌ನ ಸೌಮ್ಯ ನರೇಂದ್ರಕುಮಾರ್‌ ಆಯ್ಕೆಯಾದರು.

Advertisement

ಸಾಕಷ್ಟು ಜಿದ್ದಾಜಿದ್ದಿ, ತೀವ್ರ ಪೈಪೋಟಿ ಮತ್ತು ಸಮಬಲದ ಕಾಳಗಕ್ಕೆ, ರಣರೋಚಕ ಕುತೂಹಲಕ್ಕೆ ಕಾರಣವಾಗಿದ್ದ ಮೇಯರ್‌, ಉಪ ಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನ 28ನೇ ವಾರ್ಡ್‌ ಸದಸ್ಯ ಜೆ.ಎನ್‌. ಶ್ರೀನಿವಾಸ್‌, 20ನೇ ವಾರ್ಡ್‌ನ ಯಶೋಧ ಉಮೇಶ್‌, 37ನೇ ವಾರ್ಡ್ ನ ಶ್ವೇತಾ ಜೆ.ಎನ್‌. ಶ್ರೀನಿವಾಸ್‌ ಗೈರು ಹಾಜರಿ ಬಿಜೆಪಿಯ ಗೆಲುವಿನ ಮಾರ್ಗವನ್ನು ಸುಲಭವಾಗಿಸಿತು. ಒಂದೊಮ್ಮೆ ಕಾಂಗ್ರೆಸ್‌ನ ಮೂವರು ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಲ್ಲಿ ಬಿಜೆಪಿ ಗೆಲುವು ಅಷ್ಟೊಂದು ಸುಲಭವಾಗಿರಲಿಲ್ಲ, ಜೆಡಿಎಸ್‌ ಸದಸ್ಯೆ ನೂರ್‌ಜಹಾನ್‌ ಹಾಗೂ 45ನೇ ವಾರ್ಡ್‌ನ ಪಕ್ಷೇತರ ಸದಸ್ಯ ಎಚ್‌.ಬಿ. ಉದಯ್‌ಕುಮಾರ್‌ ಕಾಂಗ್ರೆಸ್‌ ಪಾಳಯದಲ್ಲಿ ಗುರುತಿಸಿಕೊಂಡಿದ್ದರು. ಜೆಡಿಎಸ್‌ ಸದಸ್ಯೆ ನೂರ್‌ಜಹಾನ್‌ ಉಪ ಮೇಯರ್‌ ಸ್ಥಾನಕ್ಕೆ ನಾಮಪತ್ರ ಸಹ ಸಲ್ಲಿಸಿದ್ದರು. ಆದರೆ ಮೂವರು “ಕೆ’ç ಸದಸ್ಯರ ಗೈರು ಹಾಜರಿ ಬಿಜೆಪಿಗೆ ಪಾಲಿಕೆಯಲ್ಲಿ ಮತ್ತೂಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಪರೋಕ್ಷವಾಗಿ ಸಹಕಾರಿಯಾಯಿತು.

ಚುನಾವಣಾ ಪ್ರಕ್ರಿಯೆಯಲ್ಲಿ ಒಟ್ಟು 59ಸದಸ್ಯರು ಹಾಜರಾಗಿದ್ದರು. ಮಧ್ಯದಲ್ಲಿ ಕಾಂಗ್ರೆಸ್‌ ಸದಸ್ಯರು, ಶಾಸಕರು, ವಿಧಾನ ಪರಿಷತ್ತು ಸದಸ್ಯರು, ಅಧಿಕಾರಿಗಳು ಸರ್ಕಾರದ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಭಾತ್ಯಾಗ ಮಾಡಿದ್ದರಿಂದ ಸಭೆಯಲ್ಲಿ ಹಾಜರಿದ್ದ 31 ಮಂದಿ ಮೇಯರ್‌, ಉಪ ಮೇಯರ್‌, ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಮತದಾನ ಮಾಡಿದರು.

ಬೆಳಗ್ಗೆ 8.30 ರಿಂದ 10.30ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಮೇಯರ್‌ ಸ್ಥಾನಕ್ಕೆ ಬಿಜೆಪಿಯಿಂದ ಬಿ.ಜೆ.ಅಜಯ್‌ಕುಮಾರ್‌ ಒಂದು ಜೊತೆ ನಾಮಪತ್ರ ಸಲ್ಲಿಸಿದರು. ಕೆ. ಪ್ರಸನ್ನಕುಮಾರ್‌ ಸೂಚಕರಾಗಿದ್ದರೆ, ರಾಕೇಶ್‌ ಜಾಧವ್‌ ಅನುಮೋದಕರಾಗಿದ್ದರು. ಕಾಂಗ್ರೆಸ್‌ನಿಂದ ಮೇಯರ್‌ ಸ್ಥಾನಕ್ಕೆ 22ನೇ ವಾರ್ಡ್‌ ಸದಸ್ಯ ದೇವರಮನೆ ಶಿವಕುಮಾರ್‌ 2 ಜೊತೆ ನಾಮಪತ್ರ ಸಲ್ಲಿಸಿದ್ದರು. ಗಡಿಗುಡಾಳ್‌ ಮಂಜುನಾಥ್‌ ಸೂಚಕ, ಕೆ. ಚಮನ್‌ಸಾಬ್‌ ಅನುಮೋದಕರಾಗಿದ್ದರು.

ಉಪ ಮೇಯರ್‌ ಸ್ಥಾನಕ್ಕೆ 13ನೇ ವಾರ್ಡ್‌ನ ಬಿಜೆಪಿ ಸದಸ್ಯೆ ಸೌಮ್ಯ ನರೇಂದ್ರಕುಮಾರ್‌ ಸಲ್ಲಿಸಿದ ನಾಮಪತ್ರಕ್ಕೆ ಬಿ.ಎ. ಯಶೋಧ ಸೂಚಕರಾಗಿದ್ದರೆ, ಗೌರಮ್ಮ ಅನುಮೋದಕರಾಗಿದ್ದರು. ಕಾಂಗ್ರೆಸ್‌ನಿಂದ 15ನೇ ವಾರ್ಡ್‌ ಸದಸ್ಯೆ ಆಶಾ ಉಮೇಶ್‌ 2 ಜೊತೆ ನಾಮಪತ್ರ ಸಲ್ಲಿಸಿದ್ದರು. ಸೈಯದ್‌ ಚಾರ್ಲಿ ಸೂಚಕರಾಗಿದ್ದರು. ಸುಧಾ ಇಟ್ಟಿಗುಡಿ ಮಂಜುನಾಥ್‌ ಅನುಮೋದಕರಾಗಿದ್ದರು. ಜೆಡಿಎಸ್‌ನ ಬಿ. ನೂರ್‌ಜಹಾನ್‌ ಸಲ್ಲಿಸಿದ್ದ ನಾಮಪತ್ರಕ್ಕೆ ಶಿವಲೀಲಾ ಸೂಚಕರು, ಬಿ.ಎಚ್‌. ವಿನಾಯಕ ಪೈಲ್ವಾನ್‌ ಅನುಮೋದಕರಾಗಿದ್ದರು. ಚುನಾವಣಾಧಿಕಾರಿಯಾಗಿದ್ದ ಬೆಂಗಳೂರು ಪ್ರಾದೇಶಿಕ ಆಯುಕ್ತ ವಿ.ಪಿ. ಇಕ್ಕೇರಿ ಚುನಾವಣಾ ಪ್ರಕ್ರಿಯೆ ನಡೆಸಿದರು. ಉಚ್ಚ ನ್ಯಾಯಾಲಯದ ಆದೇಶದನ್ವಯ ಪ್ರತಿಯೊಂದು ಪ್ರಕ್ರಿಯೆಯನ್ನು ವೀಡಿಯೋ ಮಾಡಲಾಯಿತು. ನಾಲ್ಕು ಕಡೆ ಸಿಸಿ ಟಿವಿ ಅಳವಡಿಸಲಾಗಿತ್ತು. ಇಡೀ ಚುನಾವಣೆ ಪ್ರಕ್ರಿಯೆಯಿಂದ ಮಾಧ್ಯಮದವರನ್ನೂ ಹೊರಗಿಡಲಾಗಿತ್ತು.

Advertisement

ಮೇಯರ್‌, ಉಪ ಮೇಯರ್‌, ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಮಾಧ್ಯಮದವರಿಗೆ ಅವಕಾಶ ಮಾಡಿಕೊಡಲಾಯಿತು. ಸ್ಥಳದ ಕೊರತೆ ಕಾರಣಕ್ಕೆ ಮಾಧ್ಯಮದವರಿಗೆ ಅವಕಾಶ ನೀಡಲಾಗಲಿಲ್ಲ ಎಂದು ಚುನಾವಣಾಧಿಕಾರಿ ಸಮಜಾಯಿಷಿ ನೀಡಿದರು. ಮೇಯರ್‌, ಉಪ ಮೇಯರ್‌ ಆಯ್ಕೆ ರಾಜ್ಯ ಉಚ್ಚ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿದ್ದು, ಫೆ. 24 ರ ಉಚ್ಚ ನ್ಯಾಯಾಲಯದ ತೀರ್ಪಿನ ಮೇಲೆ ನೂತನ ಮೇಯರ್‌, ಉಪ ಮೇಯರ್‌ ಅಧಿಕಾರದ ಭವಿಷ್ಯ ನಿರ್ಧಾರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next