ದಾವಣಗೆರೆ: ಕೊರೊನಾದಿಂದಾಗಿ ಲಾಕ್‌ಡೌನ್ ಇರುವ ಹಿನ್ನೆಲೆಯಲ್ಲಿ ಎಪಿಎಂಸಿಗಳಲ್ಲಿನ ಪರಿಸ್ಥಿತಿ ಅರಿಯಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಕೈಗೊಂಡಿರುವುದಾಗಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಕೃಷಿ ಉತ್ಪನ್ನವನ್ನು ಮಾರಾಟಕ್ಕೆ ಕೊಂಡೊಯ್ಯಲು ಯಾವುದೇ ಅಡ್ಡಿ ಆಗದಂತೆ ಸರ್ಕಾರ ಕ್ರಮ ಕೈಗೊಂಡಿದೆ. ಯಾವುದೇ ಕೃಷಿ ಉತ್ಪನ್ನವನ್ನು ರೈತರು ನೇರವಾಗಿ ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಗ್ರೀನ್ ಪಾಸ್ ಇದ್ದರೂ ಕೆಲವು ಚೆಕ್‌ಪೋಸ್ಟ್‌ಗಳಲ್ಲಿ ಹಾಗೂ ಪೊಲೀಸರಿಂದ ತೊಂದರೆ ಉಂಟಾಗುತ್ತಿದೆ ಎಂಬ ದೂರಿನ ಮೇರೆಗೆ ರೈತರಿಗೆ ಯಾವುದೇ ರೀತಿ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ರೈತರು ತಾವು ಬೆಳೆದ ಬೆಳೆಯನ್ನು ಎಪಿಎಂಸಿಗೆ ಮಾರಾಟಕ್ಕೆ ತರುವಲ್ಲಿ ಯಾವುದೇ ರೀತಿಯ ಅಡಚಣೆಯಾಗಬಾರದು. ಈ ನಿಟ್ಟಿನಲ್ಲಿ ಪೊಲೀಸರು ಸೂಕ್ತ ಕ್ರಮ ಜರುಗಿಸಬೇಕು. ಚೆಕ್‌ಪೋಸ್ಟ್‌ಗಳಲ್ಲಿ ರೈತರ ವಾಹನಗಳಿಗೆ ಯಾವುದೇ ರೀತಿಯ ನಿರ್ಬಂಧ ಹಾಕಬಾರದು. ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವಂತಹ ವಾಹನಗಳನ್ನು ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸಿ, ವಾಹನ ಸೇರಿದಂತೆ ಚಾಲಕರು ಹಾಗೂ ಕ್ಲೀನರ್‌ಗಳಿಗೆ ಸ್ಪ್ರೇ ಮಾಡಬೇಕು. ಮೇಲಾಗಿ ಏ. 20ರ ನಂತರ ಕೆಲವು ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಗೊಳಿಸುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿ ಸುಧಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಜಿ.ಎಂ. ಸಿದ್ದೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಎಸ್.ವಿ. ರಾಮಚಂದ್ರ, ಎಸ್.ಎ. ರವೀಂದ್ರನಾಥ್, ಮೇಯರ್ ಬಿ.ಜಿ. ಅಜಯ್ ಕುಮಾರ್, ಎಪಿಎಂಸಿ ಅಧ್ಯಕ್ಷ ಶಾಂತರಾಜ, ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, ಉಪಾಧ್ಯಕ್ಷ ಎಸ್.ಕೆ. ಚಂದ್ರಶೇಖರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಉಪವಿಭಾಗಾ ಧಿಕಾರಿ ಮಮತಾ ಹೊಸಗೌಡರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ತಹಶೀಲ್ದಾರ್ ಬಿ.ಎನ್. ಗಿರೀಶ್, ಎಪಿಎಂಸಿ ಕಾರ್ಯದರ್ಶಿ ಪ್ರಭು, ಎಪಿಎಂಸಿ ಸಹಾಯಕ ನಿರ್ದೇಶಕ ಸೋಮಶೇಖರ್ ಮತ್ತಿತರರಿದ್ದರು.