Advertisement

ದಾವಿವಿಯಲ್ಲಿ ಬಸವ ಅಧ್ಯಯನ ಪೀಠ ಸ್ಥಾಪನೆ

05:07 PM Apr 27, 2020 | Naveen |

ದಾವಣಗೆರೆ: ಮುಂದಿನ ಶೈಕ್ಷಣಿಕ ವರ್ಷದಿಂದ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬಸವೇಶ್ವರ, ಗಾಂಧಿ, ಅಂಬೇಡ್ಕರ್‌ ಅಧ್ಯಯನ ಪೀಠಗಳನ್ನು ಸ್ಥಾಪಿಸಲಾಗುವುದು ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದ್ದಾರೆ.

Advertisement

ಭಾನುವಾರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಬಸವ ಜಯಂತಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಾಬು ಜಗಜೀವನರಾಂ ಅಧ್ಯಯನ ಪೀಠ ಕಾರ್ಯ ನಿರ್ವಹಿಸುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಬಸವೇಶ್ವರ, ಗಾಂಧಿ, ಅಂಬೇಡ್ಕರ್‌, ಮಹಿಳಾ ಮತ್ತು ಡಾ.ಡಿ.ಎಂ. ನಂಜುಂಡಪ್ಪ ಅಧ್ಯಯನ ಪೀಠ ಸ್ಥಾಪನೆಗೆ ಗಮನ ನೀಡಲಾಗಿದೆ. ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವ ಸಲ್ಲಿಸಿದ್ದು, ಲಾಕೌಡೌನ್‌ ಹಿನ್ನೆಲೆಯಲ್ಲಿ ವಿಳಂಬವಾಗಿದೆ ಎಂದರು.

ಕೋವಿಡ್‌-19ರಿಂದಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಸಾಕಷ್ಟು ತೊಂದರೆಯಾಗಿದೆ. ವಿದ್ಯಾರ್ಥಿಗಳಲ್ಲಿ ಆತಂಕ ಕಾಡುತ್ತಿದೆ. ಆದರೆ, ಯಾವುದೇ ವಿದ್ಯಾರ್ಥಿಯೂ ಗೊಂದಲಕ್ಕೀಡಾಗಬಾರದು. ಸರ್ಕಾರದ ಆದೇಶದಂತೆ ಲಾಕ್‌ಡೌನ್‌ ನಂತರ ಎಲ್ಲ ತರಗತಿಗಳು ನಡೆಯಲಿವೆ. ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ಪರಿಹಾರಕ್ಕೆ ಗಮನ ನೀಡಲಾಗುತ್ತಿದೆ. ಆನ್‌ಲೈನ್‌ನಲ್ಲಿಯೇ ಪಾಠ ಪ್ರವಚನಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ಕಾಪಾಡಲಾಗುತ್ತಿದೆ. ಮಹಾನ್‌ ದಾರ್ಶನಿಕ ಬಸವಣ್ಣನವರ ತತ್ವ, ಆದರ್ಶ ಸಮ ಸಮಾಜದ ನಿರ್ಮಾಣಕ್ಕೆ ಸಹಕಾರಿ ಎಂದು ಹೇಳಿದರು.

ಕುಲಸಚಿವ ಪ್ರೊ. ಬಸವರಾಜ ಬಣಕಾರ ಮಾತನಾಡಿ, ಬಸವಣ್ಣನವರು ಇಡೀ ಮನುಕುಲದ ಉದ್ಧಾರಕ್ಕೆ ಹುಟ್ಟಿದ ಮಹಾನ್‌ ಚೇತನ ಎಂದರು. ದಾವಿವಿ ಸಿಂಡಿಕೇಟ್‌ ಮಾಜಿ ಸದಸ್ಯ ಡಾ| ಎಚ್‌. ವಿಶ್ವನಾಥ್‌, ಪ್ರೊ. ಎಂ. ಗೋಪಿನಾಥ, ಡಾ| ಶಿವಕುಮಾರ ಕಣಸೋಗಿ, ಡಾ| ಕೆ.ಎಂ. ಈಶ್ವರಪ್ಪ, ಉಪಅ ಧೀಕ್ಷಕ ಮಲ್ಲಿಕಾರ್ಜುನ, ದೇವರಾಜ, ಮಯೂರಗೌಡ, ಮಂಜುನಾಥ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next