Advertisement
ನಗರದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಬುಧವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 4ನೇ ದಿನದ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದ ಅವರು, ಕಾಲಿಗೆ ಆದ ಗಾಯ ಹೇಗೆ ನಡೆಯಬೇಕೆಂದು ಕಲಿಸುತ್ತದೆ. ಮನಸ್ಸಿಗೆ ಆದ ಗಾಯ ಹೇಗೆ ಬದುಕಬೇಕೆಂದು ಕಲಿಸುತ್ತದೆ. ಶ್ವಾಸ ಇಲ್ಲದಿದ್ದರೆ ಜೀವನ, ವಿಶ್ವಾಸ ಇಲ್ಲದಿದ್ದರೆ ಸಂಬಂಧಗಳು ಮುಗಿಯುತ್ತವೆ ಎಂದರು. ಸಹನೆ ಸಾಧನೆಗೆ ಮೆಟ್ಟಿಲು. ಕಷ್ಟದ ಜೀವನ ಶಿಸ್ತನ್ನು ಕಲಿಸುವ ಪಾಠಶಾಲೆ ಎಂಬುದನ್ನು ಅರಿತಾಗ ಬದುಕು ಉನ್ನತಿಯಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಸತ್ಯ ಶುದ್ಧ ಜೀವನದಿಂದ ಮಹಾತ್ಮಾ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕೆ ಮಾದರಿಯಾದವರು.
Related Articles
Advertisement
ಭಕ್ತರಿದ್ದಲ್ಲಿಗೆ ಪೀಠಗಳೇ ಬಂದು ಮಾನವ ಧರ್ಮ ಜಾಗೃತಿಗೊಳಿಸುವ ಕಾರ್ಯ ನಿರಂತರವಾಗಿ ನಡೆದುಕೊಂಡು ಬಂದಿದೆ. ವೀರಶೈವ -ಲಿಂಗಾಯತ ಎರಡೂ ಒಂದೇ ಎಂಬುದನ್ನು ಅರಿತು ಒಂದಾಗಿ ಬಾಳುವ ಸಂಕಲ್ಪ ನಮ್ಮೆಲ್ಲರದಾಗಬೇಕಿದೆ. ಧರ್ಮ ಉಳಿದರೆ ನಾಡು ಉಳಿದೀತು. ಈ ನಿಟ್ಟಿನಲ್ಲಿ ರಂಭಾಪುರಿ ಜಗದ್ಗುರುಗಳವರು ನಾಡಿನ ಮೂಲೆ ಮೂಲೆಗೂ ಸಂಚರಿಸಿ ಧರ್ಮ, ಸಂಸ್ಕೃತಿ, ಸಂಸ್ಕಾರ ಉಳಿಸಿ-ಬೆಳೆಸುವ ಕಾರ್ಯ ಸ್ಫೂರ್ತಿ ಮತ್ತು ಆದರ್ಶದಾಯಕವಾದುದು ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಸಾಧನ ಸಿರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದೊಡ್ಡಬಾತಿ ತಪೋವನ ಆಸ್ಪತ್ರೆ ಚೇರ್ಮನ್ ಡಾ| ಶಶಿಕುಮಾರ್ ವಿ. ಮೆಹರವಾಡೆ, ರಂಭಾಪುರಿ ಪೀಠದಿಂದ ಪ್ರಶಸ್ತಿ ನೀಡಿರುವುದು ತಮಗೆ ಇನ್ನೂ ಹೆಚ್ಚಿನ ಕಾರ್ಯ ಮಾಡಲು ಪ್ರೇರಣೆ ದೊರೆತಂತಾಗಿದೆ. ಬರುವ ದಿನಗಳಲ್ಲಿ ಸಾಮಾಜಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಜವಾಬ್ದಾರಿ ಹೆಚ್ಚಿಸಿದೆ ಎಂದರು.
ಅಖೀಲ ಭಾರತ ವೀರಶೈವ ಮಹಾಸಭಾ ಉಪಾಧ್ಯಕ್ಷ ಅಣಬೇರು ರಾಜಣ್ಣ, ಜಿಲ್ಲಾಧಿಕಾರಿಮಹಾಂತೇಶ ಜಿ.ಬೀಳಗಿ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಎನ್.ಜಿ. ಪುಟ್ಟಸ್ವಾಮಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಚಿತ್ರದುರ್ಗದ ಡಾ| ಎಚ್. ಕೆ. ಎಸ್. ಸ್ವಾಮಿ, ಪರಿಸರ ರಕ್ಷಣೆ ಮತ್ತು ಗಾಂಧಿ ವಿಚಾರಧಾರೆ ಕುರಿತು ಉಪನ್ಯಾಸ ನೀಡಿದರು. ಸುಳ್ಳದ ಶಿವಸಿದ್ಧರಾಮೇಶ್ವರ ಶ್ರೀ, ನಂದೀಪುರದ ನಂದೀಶ್ವರ ಶ್ರೀ, ಮಹೇಶ್ವರ ಸ್ವಾಮಿ, ಕ್ಯಾಪ್ಟನ್ ಡಾ| ಜ್ಯೋತಿ ಪ್ರಕಾಶ್ ಸೇರಿಂದತೆ ಹಲವು ಗಣ್ಯರಿಗೆ ಗುರುರಕ್ಷೆಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು. ಹಂಪಸಾಗರ ಹಿರೇಮಠದ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ನುಡಿ ತೋರಣ, ಕುಮಾರಿ ಕೆ. ಆರ್. ಭೂಮಿಕಾ ಇವರಿಂದ ಭರತನಾಟ್ಯ ಜರುಗಿತು. ಸುಳ್ಳದ ಗುರುಸಿದ್ಧಯ್ಯ ಸೌದಿಮಠ ಮತ್ತು ಗುರುನಾಥ ಸುಣಗಾರ ಅವರು ಭಕ್ತಿಗೀತೆ ಪ್ರಸ್ತುತ ಪಡಿಸಿದರು. ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿದ್ದರು. ಶ್ರೀ ಸೌಮ್ಯ ಬಸವರಾಜ್ ಸ್ವಾಗತಿಸಿದರು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು. ಮಹಾತ್ಮಾ ಗಾಂಧೀಜಿ ಮತ್ತು ದಿವಂಗತ ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿಗಳ ಭಾವಚಿತ್ರಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳು ಪುಷ್ಪಾರ್ಚನೆ ಸಲ್ಲಿಸಿದರು. ಸಮಾರಂಭದ ನಂತರ ನಜರ್ ಗೌರವ ಸಮರ್ಪಿಸಲಾಯಿತು.