ದಾವಣಗೆರೆ: ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಕೋವಿಡ್-19 ಪರಿಹಾರಕ್ಕೆ ಒತ್ತಾಯಿಸಿ ಜೂ. 30 ರಂದು ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್ ತಿಳಿಸಿದ್ದಾರೆ.
ಕೋವಿಡ್ ವೈರಸ್ ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಮಾ. 22 ರಿಂದ ಏಕಾಏಕಿ ಲಾಕ್‌ಡೌನ್‌ನಿಂದ ಸಂಘಟಿತ ಮತ್ತು ಅಸಂಘಟಿತ ವಲಯದ ಲಕ್ಷಾಂತರ ಕಾರ್ಮಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಸರ್ಕಾರ ಎಲ್ಲರಿಗೂ ಕೋವಿಡ್-19 ಪರಿಹಾರ ನೀಡಬೇಕು. ಕೋವಿಡ್ ನಿಯಂತ್ರಣ, ಚಿಕಿತ್ಸೆಗೆ ಸಂಬಂಧಿಸಿದಂತೆ ನೀಡಿರುವ ಅನುದಾನ ಮತ್ತು ವೆಚ್ಚದ ರಾಜ್ಯ ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕೇಂದ್ರ, ರಾಜ್ಯ ಸರ್ಕಾರ ಯಾವುದೇ ಪೂರ್ವಸಿದ್ಧತೆ, ಮುನ್ನೆಚ್ಚರಿಕ ಕ್ರಮ ಇಲ್ಲದೆ ಏಕಾಏಕಿ ಲಾಕ್‌ಡೌನ್ ಮಾಡಿರುವ ಪರಿಣಾಮ 8 ಕೋಟಿಯಷ್ಟು ನಿರ್ಮಾಣ ವಲಯ ಕಾರ್ಮಿಕರು ಒಳಗೊಂಡಂತೆ 15 ಕೋಟಿ ಅಂದರೆ ಯುರೋಪಿನ ಕೆಲ ದೇಶಗಳ ಜನಸಂಖ್ಯೆಯಷ್ಟು ಜನರು ನಿರುದ್ಯೋಗಿಗಳಾಗಿದ್ದಾರೆ. ಕರ್ನಾಟಕದ ಮೂವರು ಸೇರಿದಂತೆ 627 ಜನರ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರ ತೊಂದರೆಯಲ್ಲಿರುವ ಕಾರ್ಮಿಕರಿಗೆ ಪರಿಹಾರ ಮಾತ್ರವಲ್ಲ ಪರ್ಯಾಯ ಉದ್ಯೋಗವಕಾಶವನ್ನೂ ಮಾಡಿಲ್ಲ ಎಂದು ದೂರಿದರು.
ಕೋವಿಡ್-19 ಪರಿಹಾರ ಎಂದು 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಎನ್ನುವುದು ದೇಶಕ್ಕೆ ಮಾಡಿರುವ ಮಹಾಮೋಸ. ಜನರ, ಕಾರ್ಮಿಕರ ಹಣವನ್ನೇ ಅವರಿಗೆ ನೀಡಲಾಗುತ್ತಿದೆ. ಈಗಲಾದರೂ ಕೇಂದ್ರ, ರಾಜ್ಯ ಸರ್ಕಾರ ತಮ್ಮ ಸ್ವಂತ ಅನುದಾನವನ್ನು ಕೋವಿಡ್ ನಿಯಂತ್ರಣ, ಚಿಕಿತ್ಸೆಗೆ ನೀಡಬೇಕು ಎಂದರು.
ಕೋವಿಡ್ ನಿಯಂತ್ರಣ, ಚಿಕಿತ್ಸೆಗೆ ಅಮೆರಿಕಾ ಜಿಡಿಪಿಯಲ್ಲಿ ಶೇ.14, ಜಪಾನ್ ಶೇ.21, ಜರ್ಮನಿ ಶೇ. 10, ಫ್ರಾನ್ಸ್ ಶೇ.11 ಮೀಸಲಿಟ್ಟಿವೆ. ಜಿಡಿಪಿಯ ಶೇ.10 ರಷ್ಟು ಭಾಗವನ್ನು ಕೊರೊನಾ ನಿಯಂತ್ರಣ, ಚಿಕಿತ್ಸೆಗೆ ಮೀಸಲಿಡಲಾಗಿದೆ ಎನ್ನುವ ಕೇಂದ್ರದ ಸರ್ಕಾರದ ಮಾತು ಬರೀ ಸುಳ್ಳು. ಶೇ.1ಕ್ಕಿಂತಲೂ ಕಡಿಮೆ ಹಣ ಖರ್ಚು ಮಾಡಲಾಗುತ್ತಿದೆ. ರಾಜ್ಯ ಸರ್ಕಾರವೂ ಸಹ ಕೋವಿಡ್ ನಿಯಂತ್ರಣ, ಚಿಕಿತ್ಸೆಗೆ ಹಣ ಬಿಡುಗಡೆ ಮಾಡಿಯೇ ಇಲ್ಲ. ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಕೋವಿಡ್-19 ಪರಿಹಾರಕ್ಕೆ ಒತ್ತಾಯಿಸಿ ಜು. 3 ರಂದು ಜೆಸಿಟಿಯು ನೇತೃತ್ವದಲ್ಲಿ ರಾಜ್ಯದ್ಯಾಂತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಸಿಐಟಿಯುನ ಕೆ.ಎಚ್. ಆನಂದರಾಜ್, ಶ್ರೀನಿವಾಸಮೂರ್ತಿ, ಹೊನ್ನೂರು ತಿಮ್ಮಣ್ಣ, ಎ. ಗುಡ್ಡಪ್ಪ, ಎ.ಎಂ. ರುದ್ರಸ್ವಾಮಿ, ಹನುಮಂತ ನಾಯ್ಕ ಇತರರು ಸುದ್ದಿಗೋಷ್ಠಿಯಲ್ಲಿದ್ದರು.