Advertisement

ಹೋಳಿ ಮೇಲೂ ಕೊರೊನಾ ಕರಿಛಾಯೆ

11:39 AM Mar 09, 2020 | Naveen |

ದಾವಣಗೆರೆ: ಕೊರೊನಾ ಹಿನ್ನೆಲೆಯಲ್ಲಿ ಹೋಳಿ ರಾಸಾಯನಿಕ ಬಣ್ಣಗಳಿಂದ ದೂರ ಉಳಿಯುವುದು ಉತ್ತಮ ಎಂದು ಮೇಯರ್‌ ಬಿ.ಜೆ. ಅಜಯ್‌ಕುಮಾರ್‌ ಸಲಹೆ ನೀಡಿದ್ದಾರೆ.

Advertisement

ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಭಾನುವಾರ ನಡೆದ ನಾಗರಿಕ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ಕಡೆ ಕೊರೊನಾ ವೈರಸ್‌ ಬಗ್ಗೆ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ರಾಸಾಯನಿಕ ಬಣ್ಣ, ಮಿಶ್ರಣಗಳ ಬದಲಿಗೆ ಅರಿಸಿನ, ಕುಂಕುಮ ಬಳಕೆ ಮಾಡಬೇಕು. ಕೊರೊನಾ ಹಿನ್ನೆಲೆಯಲ್ಲಿ ಹೋಳಿ ಆಡಲೇಬಾರದು ಎಂಬ ನಿರ್ಧಾರ ಮಾಡುವುದು ಇನ್ನೂ ಒಳಿತು. ಶಾಂತಿಯುತವಾಗಿ ಹೋಳಿ ಆಚರಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಮಾತನಾಡಿ, ಹೋಳಿ ಹಬ್ಬದ ಸಂದರ್ಭದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಕಾಮದಹನವನ್ನು ಸೋಮವಾರ ರಾತ್ರಿ 10.30 ರ ಒಳಗೆ, ಹೋಳಿಯನ್ನ ಮಂಗಳವಾರ ಮಧ್ಯಾಹ್ನ 1ರ ಒಳಗೆ ಮುಗಿಸಬೇಕು ಎಂದರು.

ಈಚೆಗೆ ಕೇಳಿ ಬರುತ್ತಿರುವ ಕೊರೊನಾ, ಪಿಯು ಇತರೆ ಪರೀಕ್ಷೆ ಹಾಗೂ ಕೆರೆಗಳ ಸಂರಕ್ಷಣೆ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೊಂದರೆ ಆಗದ ರೀತಿ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದರು.

ಹೋಳಿ ಹಬ್ಬದ ನೆಪದಲ್ಲಿ ದಾವಣಗೆರೆ ನಗರದ ಕುಡಿಯುವ ನೀರಿನ ಮೂಲಗಳಾದ ಟಿವಿ ಸ್ಟೇಷನ್‌, ಕುಂದುವಾಡ ಕೆರೆಗಳ ನೀರು ಬಳಸಬಾರದು. ಕೆರೆ ನೀರು ಮಲಿನಗೊಳಿಸುವುದ ತಡೆಗಟ್ಟಲಿಕ್ಕೆ 25 ವಿಶೇಷ ವಾಹನ, ಪ್ರತಿ ಪೊಲೀಸ್‌ ಠಾಣೆಗೆ 13 ಗಸ್ತು ವಾಹನ, 2 ಇಂಟರ್‌ ಸೆಪ್ಟರ್‌, 10 ಹೈವೇ ಪೆಟ್ರೋಲಿಂಗ್‌ ವಾಹನ ನಿಯೋಜಿಸಲಾಗುವುದು ಎಂದು ತಿಳಿಸಿದರು.

Advertisement

ಅತೀ ವೇಗ, ಕರ್ಕಶವಾಗಿ ಬೈಕ್‌ ಓಡಿಸುವುದು, ರ್ಯಾಲಿ ನಡೆಸುವುದು ಕಂಡು ಬಂದರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಕೊರೊನಾದಿಂದ ಜಗತ್ತಿನ ಬೇರೆ ದೇಶಗಳಲ್ಲಿ 3 ಸಾವಿರ ಜನರು ಸಾವನ್ನಪ್ಪಿದ್ದಾರೆ. ಹೆಲ್ಮೆಟ್‌ ಬಳಸದೆ ಜಿಲ್ಲೆಯಲ್ಲಿ ಪ್ರತಿ ವರ್ಷ 300
ಜನರು, ದೇಶದಲ್ಲಿ ಪ್ರತಿ ವರ್ಷ 13 ಲಕ್ಷ ಜನರು ಸಾಯುತ್ತಿದ್ದಾರೆ. ರೋಗ ತಡೆಗಟ್ಟಲು ಮಾಸ್ಕ್ ಧರಿಸುತ್ತಾರೆ. ರೋಗದ ಬಗ್ಗೆ ಇರುವ ಜಾಗೃತಿ ಹೆಲ್ಮೆಟ್‌ ಧರಿಸಲು ಕಂಡು ಬರುತ್ತಿಲ್ಲ ಎಂದರು.

ಹಂದಿ, ಬೀದಿನಾಯಿ ಹಾವಳಿ ತಡೆಗಟ್ಟುವ ಮತ್ತು ಸುಗಮ ಸಂಚಾರ ವ್ಯವಸ್ಥೆಗಾಗಿ ತ್ತೈಮಾಸಿಕ ಸಭೆ ನಡೆಸಲಾಗುವುದು. ದಾವಣಗೆರೆ ಸ್ಮಾರ್ಟ್‌ಸಿಟಿ ಆಗಿರುವುದರಿಂದ ಸ್ಮಾರ್ಟ್‌ಸಿಟಿ ಅಧಿಕಾರಿಗಳು, ಜಿಲ್ಲಾಧಿಕಾರಿ, ಆಯುಕ್ತರೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು. ಸಾರ್ವಜನಿಕರ ಸಲಹೆಗಳನ್ನು ಸಹ ಅಳವಡಿಸಲಾಗುವುದು ಎಂದು ತಿಳಿಸಿದರು.

ಮಹಾರಾಷ್ಟ್ರ ಇತರೆಡೆ ಡಿಜೆಯನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಡಿಜೆ ಬಳಕೆಯಿಂದ ಗಂಭೀರ ಸಮಸ್ಯೆಗಳು ಉಂಟಾಗುವ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲೂ ಬದಲಾವಣೆ ಆಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಮಹಾನಗರ ಪಾಲಿಕೆ ಸದಸ್ಯರಾದ ಎ. ನಾಗರಾಜ್‌, ಸೋಗಿ ಶಾಂತಕುಮಾರ್‌, ಮಾಜಿ ಸದಸ್ಯ ಕೋಳಿ ಇಬ್ರಾಹಿಂ, ಸಾದಿಕ್‌ ಪೈಲ್ವಾನ್‌, ವೈ. ಮಲ್ಲೇಶ್‌, ಆವರಗೆರೆ ವಾಸು, ಹೆಚ್ಚುವರಿ ಅಧೀಕ್ಷಕ ಎಂ. ರಾಜೀವ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next