ದಾವಣಗೆರೆ: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ಉಲ್ಲಂಘಿಸುವರ ವಿರುದ್ಧ ಅತ್ಯಂತ ಕಠಿಣ, ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ಮತ್ತೂಮ್ಮೆ ಎಚ್ಚರಿಸಿದ್ದಾರೆ.
ಶಬ್ಬ್ ಎ ಬರಾತ್ ಮತ್ತು ಗುಡ್ ಫ್ತೈಡೆ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ಇಲಾಖೆ ಸಭಾಂಗಣದಲ್ಲಿ ಏರ್ಪಡಿಸಿದ್ದ ನಾಗರಿಕ ಸೌಹಾರ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇನ್ನು ಮುಂದೆ ಲಾಕ್‌ಡೌನ್ ಉಲ್ಲಂಘಿಸುವರು ಯಾರಿಗೇ ಆಗಲಿ ಏನು ಕ್ರಮ ತೆಗೆದುಕೊಳ್ಳಬೇಕು ಆ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಎಲ್ಲಿಗೆ ಕಳಿಸಬೇಕೋ ಅಲ್ಲಿಗೇ ಕಳಿಸಲಾಗುವುದು ಎಂದು ಮಾರ್ಮಿಕವಾಗಿ ಎಚ್ಚರಿಸಿದರು. ಸ್ವತಃ ಮುಖ್ಯಮಂತ್ರಿಯವರೇ ಲಾಕ್ ಡೌನ್ ಉಲ್ಲಂಘಿಸುವರ ವಿರುದ್ಧ ಎಲ್ಲಾ ರೀತಿಯ ಕ್ರಮಕ್ಕೆ ಪೊಲೀಸ್ ಇಲಾಖೆಗೆ ಮುಕ್ತ ಅವಕಾಶ ನೀಡಿದ್ದಾರೆ. ಹಾಗಾಗಿ ಯಾರೂ ಸಹ ಉಲ್ಲಂಘನೆ ಮಾಡಬಾರದು. ಈವರೆಗೆ ಮನವಿ ಮಾಡಿದ್ದು, ಆರತಿ ಮಾಡಿ ತಿಳಿವಳಿಕೆ ಹೇಳಿದ್ದು ಆಯಿತು. ಆದರೂ, ಕೆಲವರು ಏನು ಮಾಡುತ್ತಾರೋ ನೋಡೋಣ ಎಂದು ಗುಂಪು ಗುಂಪಾಗಿ ಸೇರುವುದು, ಓಡಾಡುವುದು ಮಾಡುತ್ತಿದ್ದಾರೆ. ಇನ್ನು ಮುಂದೆ ಅಂತಹ ಧೋರಣೆ ನಡೆಯುವುದೇ ಇಲ್ಲ. ಅತಿ ಕಠಿಣ ಮತ್ತು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಯಾರೇ ಆಗಲಿ ಎಲ್ಲರೂ ಕಾನೂನು ಮುಂದೆ ಸಮಾನರು ಎಂಬುದನ್ನ
ನೆನೆಪಿನಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಇಂತಹ ಸಂದರ್ಭದಲ್ಲಿ ಲಾಭ ಮಾಡುವ ಅಗತ್ಯ ಯಾರಿಗೂ ಇಲ್ಲ. ಎಲ್ಲರೂ ಮನೆಯಲ್ಲಿ ಇರುವುದೇ ಸಮಾಜಕ್ಕೆ ನೀಡುವಂತಹ ದೊಡ್ಡ ಸೇವೆ. ಮನೆಯಲ್ಲಿ ಹೊರ ಬರುವುದಕ್ಕೆ ಇಲ್ಲಸಲ್ಲದ ಕಾರಣ ಹುಡುಕಬೇಡಿ. ಮನೆಯಲ್ಲಿ ಇರುವುದಕ್ಕೆ ಕಾರಣ ಹುಡುಕಿ. ಕೊರೊನಾದಂತಹ ಸಂದರ್ಭದಲ್ಲಿ ಜಾತಿ, ಧರ್ಮ, ವರ್ಗ ಎಲ್ಲವನ್ನೂ ಬದಿಗೊತ್ತಿ, ಮನುಷ್ಯರಾಗಿ ಕೆಲಸ ಮಾಡೋಣ. ಸಂಕುಚಿತ ಭಾವನೆ ದೂರ ಮಾಡೋಣ. ಸರ್ಕಾರ ಸವಲತ್ತು ತಲುಪಿಸಲು ಮತ್ತು ಲಾಕ್‌ಡೌನ್ ಯಶಸ್ವಿಯಾಗಿ ಪಾಲನೆಯಾಗಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಮಾತನಾಡಿ, ಕೊರೊನಾ ವೈರಸ್ ಹರಡದಂತೆ ಮತ್ತು ಎಲ್ಲರೂ ಆರೋಗ್ಯವಾಗಿ ಇರಬೇಕು ಎನ್ನುವ ಉದ್ದೇಶದಿಂದ ಲಾಕ್‌ಡೌನ್ ಜಾರಿಯಲ್ಲಿದೆ. ಎಲ್ಲರೂ ಮನೆಯಲ್ಲಿ ಇರುವುದೇ ಈಗ ಮಾಡಬೇಕಾಗಿರುವ ಕೆಲಸ. ಎಲ್ಲಾ ಕಡೆ ನಾಕಾಬಂಧಿ ಮಾಡಿದ್ದರೂ ಏನೋ ನೆಪ ಹೇಳಿಕೊಂಡು ಹೊರಗೆ ಓಡಾಡುವುದ ನಿಲ್ಲಿಸಬೇಕು. ಸರ್ಕಾರದ ನಿಯಮವನ್ನ ಎಲ್ಲರೂ ಪಾಲಿಸಬೇಕು. ಶಬ್ಬ್ ಎ ಬರಾತ್ ದಿನ ಎಲ್ಲಾ ಖಬರ್ ಸ್ಥಾನಗಳಿಗೆ ಗೇಟ್ ಹಾಕಿ. ಪೊಲೀಸ್ ಬಂದೋಬಸ್ತ್ ಮಾಡಲಾಗುವುದು. ಮನೆಯಲ್ಲೇ ತಮ್ಮ ಹಿರಿಯರಿಗೆ ಗೌರವಾದರ ಸಲ್ಲಿಸಿ ಎಂದು ಮನವಿ ಮಾಡಿದರು.
ವಿವಿಧ ಮುಖಂಡರು, ಸರಳವಾಗಿ, ಮನೆಯಲ್ಲೇ ಅತ್ಯಂತ ಸರಳವಾಗಿ ಶಬ್ಬ್ ಎ ಬರಾತ್ ಮತ್ತು ಗುಡ್ ಫ್ತೈಡೆ ಆಚರಣೆಗೆ ಮನವಿ ಮಾಡಿದರು.