Advertisement

16ರಂದು ದಾವಣಗೆರೆಗೆ ಕಟೀಲ್‌

11:55 AM Dec 13, 2019 | |

ದಾವಣಗೆರೆ: ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಡಿ.16 ರಂದು ದಾವಣಗೆರೆಗೆ ಆಗಮಿಸುವರು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ತಿಳಿಸಿದ್ದಾರೆ.

Advertisement

ನಳೀನ್‌ ಕುಮಾರ್‌ ಕಟೀಲ್‌ ಪಕ್ಷದ ರಾಜ್ಯ ಅಧ್ಯಕ್ಷರಾದ ನಂತರ ಪ್ರಥಮ ಬಾರಿಗೆ ದಾವಣಗೆರೆ ಭೇಟಿ ನೀಡುತ್ತಿದ್ದಾರೆ. ಜಿಲ್ಲಾ ಘಟಕದಿಂದ ಅದ್ದೂರಿ ಸ್ವಾಗತ, ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೋಮವಾರ ಮಧ್ಯಾಹ್ನ 12ಕ್ಕೆ ಹದಡಿ ರಸ್ತೆಯ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ನಳೀನ್‌ ಕುಮಾರ್‌ ಕಟೀಲ್‌ ಅವರ ಸನ್ಮಾನ ಸಮಾರಂಭ ನಡೆಯಲಿದೆ. ಸಂಸದ ಜಿ.ಎಂ. ಸಿದ್ದೇಶ್ವರ್‌, ಮುಖ್ಯಮಂತ್ರಿ ಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಎಸ್‌.ವಿ. ರಾಮಚಂದ್ರ, ಪ್ರೊ| ಎನ್‌. ಲಿಂಗಣ್ಣ, ಮಾಡಾಳ್‌ ವಿರುಪಾಕ್ಷಪ್ಪ ಇತರೆ ಮುಖಂಡರು ಭಾಗವಹಿಸುವರು.

ನಳೀನ್‌ಕುಮಾರ್‌ ಕಟೀಲ್‌ ನಗರಪಾಲಿಕೆ ಸದಸ್ಯರೊಂದಿಗೆ ಸಂವಾದ ನಡೆಸುವರು ಎಂದು ತಿಳಿಸಿದರು. ದಾವಣಗೆರೆ ಜಿಲ್ಲೆಯಲ್ಲಿನ ಶಾಸಕರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂಬ ಒತ್ತಾಯ ಮಾಡುತ್ತೇವೆ. ಇವರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದಿಲ್ಲ. ಆದರೆ, ಯಾರಿಗಾದರೂ ಸರಿಯೇ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಕೊಡಬೇಕು ಎಂಬುದು ನಮ್ಮ ಒತ್ತಾಯ ಎಂದು ತಿಳಿಸಿದರು.

ಕಳೆದ ಚುನಾವಣೆಯಲ್ಲಿ ಬಿಜೆಪಿಗೆ 104 ಸ್ಥಾನ ಬಂದರೂ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಪಟ್ಟ ತಪ್ಪಿಸಬೇಕು ಎಂಬ ಏಕೈಕ ಕಾರಣಕ್ಕೆ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತು. 17 ಶಾಸಕರು ರಾಜೀನಾಮೆ ನೀಡಿದ್ದರು. ಈಚೆಗೆ ನಡೆದ 15 ಕ್ಷೇತ್ರದ ಉಪ ಚುನಾವಣೆಯಲ್ಲಿ 12 ಜನರು ಗೆದ್ದಿದ್ದಾರೆ. ಅವರಿಗೂ ಸ್ಥಾನಮಾನ ನೀಡಬೇಕಾಗುತ್ತದೆ. ಈಗ ಸರ್ಕಾರಕ್ಕೆ ಸ್ಪಷ್ಟ ಬಹುಮತ ಇದೆ. ಹಾಗಾಗಿ ಜಿಲ್ಲೆಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಒತ್ತಾಯಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್‌ನ ಯಾವ ಶಾಸಕರು, ಪ್ರಾಬಲ್ಯ ಇರದೇ ಇದ್ದರೂ ಜೆಡಿಎಸ್‌ ನವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಲಾಗಿತ್ತು. ನಮ್ಮ ಜಿಲ್ಲೆಯ ಇಬ್ಬರು ಕಾಂಗ್ರೆಸ್‌ ಶಾಕಸರಿದ್ದರು. ಶಾಮನೂರು ಶಿವಶಂಕರಪ್ಪ, ಎಸ್‌.ರಾಮಪ್ಪ ಇಬ್ಬರಲ್ಲಿ ಒಬ್ಬರನ್ನು ಉಸ್ತುವಾರಿ ಸಚಿವ ಮಾಡಬಹುದಿತ್ತು. ಕೆ.ಎಸ್‌.ಈಶ್ವರಪ್ಪ ಉಪ ಮುಖ್ಯಮಂತ್ರಿ, ರಾಜ್ಯ ಅಧ್ಯಕ್ಷರಾಗಿದ್ದವರು. ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ
ಮಾಡಿರುವುದಕ್ಕೆ ಯಾವುದೇ ಮುಜುಗರ ಇಲ್ಲ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಪ್ರವಾಹ ತಲೆದೋರಿತು. ನಂತರ ಉಪ ಚುನಾವಣೆ ನಡೆಯಿತು. ಮುಖ್ಯಮಂತ್ರಿ ದಾವಣಗೆರೆ ಮಹಾನಗರ ಪಾಲಿಕೆಗೆ 120 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿವೆ ಎಂದು ತಿಳಿಸಿದರು.

ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ಆಗಬೇಕು ಎಂಬ ಒತ್ತಾಯ ಸದಾ ಇದೆ. ವಿಮಾನ ನಿಲ್ದಾಣಕ್ಕೆ ಅಗತ್ಯವಾದ 1 ಸಾವಿರ ಎಕರೆ ಜಾಗಕ್ಕೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗುತ್ತಿದೆ. ಮೂವರು ಜಿಲ್ಲಾಧಿಕಾರಿಗಳು ನೀಡಲೇ ಇಲ್ಲ. ದಾವಣಗೆರೆ ವಿಮಾನ ನಿಲ್ದಾಣ ಆಗಬೇಕು. ಅದಕ್ಕಾಗಿ ಎಲ್ಲಾ ರೀತಿಯ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯರಾದ ಎಲ್‌ .ಡಿ. ಗೋಣೆಪ್ಪ, ಸೋಗಿ ಶಾಂತಕುಮಾರ್‌, ಕೆ. ಪ್ರಸನ್ನಕುಮಾರ್‌, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್‌, ಬಿ.ಜಿ. ಸಂಗಜ್ಜಗೌಡ್ರು, ಧನಂಜಯ ಕಡ್ಲೇಬಾಳು, ಎಚ್‌.ಎನ್‌. ಶಿವಕುಮಾರ್‌, ರಾಜನಹಳ್ಳಿ ಶಿವಕುಮಾರ್‌, ರಮೇಶ್‌ನಾಯ್ಕ, ಆನಂದಕುಮಾರ್‌ ಶಿಂಧೆ, ಶಿವನಗೌಡ ಪಾಟೀಲ್‌, ಬೇತೂರು ಬಸವರಾಜ್‌, ಧನುಶ್‌ ರೆಡ್ಡಿ, ಟಿಂಕರ್‌ ಮಂಜಣ್ಣ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next