Advertisement

ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ

11:20 AM Nov 07, 2019 | Team Udayavani |

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಬುಧವಾರ ಶ್ರೀ ಶಾರದಾಂಬ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ಪೂರ್ಣ ಕಾರ್ಯಕರ್ತರ ಚುನಾವಣೆ. ಎಲ್ಲಾ ಕಾರ್ಯಕರ್ತರ ಸಂಘಟಿತ ಪರಿಶ್ರಮದಿಂದ ಶೇ.100 ರಷ್ಟು ಮಹಾನಗರ ಪಾಲಿಕೆಯಲ್ಲಿ ಪೂರ್ಣ ಬಹುಮತ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದಾವಣಗೆರೆಯ ಬಿಜೆಪಿ ಕಾರ್ಯಕರ್ತರಿಗೆ ಚುನಾವಣೆ ಏನೂ ಹೊಸದಲ್ಲ. ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಗೆಲ್ಲುವ ಹುಮ್ಮಸ್ಸಿದೆ. ಆದರೂ, ಚುನಾವಣೆ ಎಂದರೆ ತಮ್ಮ ಶಕ್ತಿ ಮರೆಯುತ್ತಾರೆ. ಆದರೆ, ದಾವಣಗೆರೆ ಬಿಜೆಪಿ ಸಂಘಟನೆಗೆ ಇಡೀ ರಾಜ್ಯಕ್ಕೆ ಮಾದರಿ. ನಮ್ಮ ಕಾರ್ಯಕರ್ತರು ಹನುಮಂತ ಇದ್ದಂತೆ. ಕೊಂಚ ತಿವಿಯಬೇಕು. ನಮ್ಮ ಕಾರ್ಯಕರ್ತರು ಬೇರೆಯವರ ಶಕ್ತಿ ಬಗ್ಗೆ ಯೋಚನೆ ಮಾಡದೆ ತಮ್ಮ ಶಕ್ತಿ ಉಪಯೋಗಿಸಿ ಚುನಾವಣೆಯಲ್ಲಿ ಗೆಲ್ಲಬೇಕು ಎಂದರು.

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೆಲವಾರು ವಾರ್ಡ್ಗಳಲ್ಲಿ ಇನ್ನೂ ಬೂತ್‌ ಸಮಿತಿಯವರು ಹೊರಗೆ ಹೊರಟಿಲ್ಲ. ಅಂತಹವರನ್ನು ಪ್ರೀತಿಯಿಂದ ಮಾತನಾಡಿಸಿ ಚುನಾವಣಾ ಕೆಲಸದಲ್ಲಿ ತೊಡಗಿಸಿ. ಪೇಜ್‌ ಪ್ರಮುಖ್‌, ಗ್ರೂಪ್‌ ವೋಟರ್ ಮನೆ ಮನೆಗೆ ಹೋಗಿ ಕೇಂದ್ರ, ರಾಜ್ಯ ಸರ್ಕಾರದ ಸಾಧನೆ ತಿಳಿಸಿ, ಮತ ನೀಡುವಂತೆ ಮನವಿ ಮಾಡಿಕೊಳ್ಳಿ, ಬೂತ್‌ ಸಮಿತಿಯವರು ಬೇರೆಯ
ಬೂತ್‌ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಬೂತ್‌ ಬಗ್ಗೆಯಷ್ಟೇ ಗಮನ ಹರಿಸಿ
ಎಂದು ಸಲಹೆ ನೀಡಿದರು.

ಬಿಜೆಪಿ ಅಧಿಕಾರವಧಿಯಲ್ಲಿ ದಾವಣಗೆರೆಗೆ ಸ್ಮಾರ್ಟ್‌ಸಿಟಿ ಯೋಜನೆ ಬಂದಿದೆ. ವರ್ಷಕ್ಕೆ ಬರುವಂತಹ 1 ಸಾವಿರ ಕೋಟಿ ಹಣ ಪೂರ್ಣ ಬಳಕೆಯಾಗಬೇಕು ಮತ್ತು ದಾವಣಗೆರೆ ನಗರದ ಸಮಗ್ರ ಅಭಿವೃದ್ಧಿಗೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪರಿಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು. ಆ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ತಿಳಿಸಿದರು.

Advertisement

ವಿಧಾನ ಪರಿಷತ್ತು ಸದಸ್ಯ ವೈ.ಎ. ನಾರಾಯಣಸ್ವಾಮಿ ಮಾತನಾಡಿ, ತಮಗೆ ದೊರೆತ ಮಾಹಿತಿಯಂತೆ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಗೆಲ್ಲುವ ಶೇ.200 ರಷ್ಟು ವಿಶ್ವಾಸ ಇದೆ. ಕಳೆದ ಬಾರಿ ನಾನಾ ಕಾರಣಕ್ಕೆ ಹಿನ್ನಡೆ ಆಗಿದೆ. ಈ ಬಾರಿ 45 ವಾರ್ಡ್‌ಗಳಲ್ಲಿ 35 ವಾರ್ಡ್ಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆ ಚುನಾವಣೆ ಸಹ ಪ್ರಭಾರಿ ಎಸ್‌. ದತ್ತಾತ್ರಿ ಮಾತನಾಡಿ, ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ. ಪ್ರತಿ 3-4 ವಾರ್ಡ್‌ ಜವಾಬ್ದಾರಿಯನ್ನು ಶಾಸಕರಿಗೆ ನೀಡಲಾಗಿದೆ. ವಾರ್ಡ್‌, ಬೂತ್‌ ಉಸ್ತುವಾರಿ, ಪೇಜ್‌ ಪ್ರಮುಖ್‌ ರನ್ನು ನಿಯೋಜಿಸಲಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಎಸ್‌.ವಿ. ರಾಮಚಂದ್ರ, ಕೆ. ಮಾಡಾಳ್‌ ವಿರುಪಾಕ್ಷಪ್ಪ, ಪ್ರೊ. ಎನ್‌. ಲಿಂಗಣ್ಣ, ಮಾಜಿ ಶಾಸಕ ಎಂ. ಬಸವರಾಜ ನಾಯ್ಕ, ಜಿ.ಎಸ್‌. ಅನಿತ್‌, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಎಚ್‌.ಸಿ. ಜಯಮ್ಮ, ರಾಜನಹಳ್ಳಿ ಶಿವಕುಮಾರ್‌, ಸಂಗಜ್ಜಗೌಡ್ರು ಇತರರು ಇದ್ದರು. ಸವಿತಾ ಮಂಜುನಾಥ್‌ ವಂದೇ ಮಾತರಂ ಹಾಡಿದರು. ಧನಂಜಯ ಕಡ್ಲೇಬಾಳು ಸ್ವಾಗತಿಸಿದರು. ಶಿವಾಜಿ ಪಾಟೀಲ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next