ದಾವಣಗೆರೆ: ಕೇಂದ್ರ ಸರ್ಕಾರದ 2003ರ ಕಾಯ್ದೆಯ ಪ್ರಸ್ತಾಪಿತ ತಿದ್ದುಪಡಿ ವಿರೋಧಿಸಿ ಕೆಪಿಟಿಸಿ ಎಂಪ್ಲಾಯಿಸ್ ಯೂನಿಯನ್, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘಗಳ ನೇತೃತ್ವದಲ್ಲಿಸೋಮವಾರ ಬೆಸ್ಕಾಂ ಅಧೀಕ್ಷಕರ ಕಚೇರಿ ಎದುರು ಬೆಸ್ಕಾಂ ನೌಕರರು, ಅಧಿಕಾರಿಗಳು ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ 2003-ರ ಕಾಯ್ದೆಯ ಪ್ರಸ್ತಾಪಿತ ತಿದ್ದುಪಡಿ ತರಲು ಉದ್ದೇಶಿಸಿದ್ದು ಬೆಸ್ಕಾಂ ಒಳಗೊಂಡಂತೆ ಎಲ್ಲಾ ವಿದ್ಯುತ್ ಪ್ರಸರಣ ಕಂಪನಿಗಳನ್ನು ಖಾಸಗೀಕರಣ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡ ಹೊರಟಿರುವುದು ಎಲ್ಲಾ ವರ್ಗದ ಅಧಿಕಾರಿಗಳು, ನೌಕರರನ್ನು ಸಂಕಷ್ಟಕ್ಕೀಡು ಮಾಡಲಿದೆ. ಖಾಸಗೀಕರಣದಿಂದ ನಲುಗಿ ಹೋಗಿರುವ ಸಾರ್ವಜನಿಕರ ಮೇಲೆಯೂ ಪ್ರಸ್ತಾಪಿತ ತಿದ್ದುಪಡಿ ಭಾರೀ ಕೆಟ್ಟ ಪರಿಣಾಮ ಉಂಟು ಮಾಡಲಿದೆ. ಹಾಗಾಗಿ ಕೇಂದ್ರ ಸರ್ಕಾರ ತಿದ್ದುಪಡಿ ಪ್ರಸ್ತಾಪವನ್ನೇ ಕೈ ಬಿಡಬೇಕು. ಈಗಿರುವ ವ್ಯವಸ್ಥೆಯನ್ನೇ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸುಧಾರಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಎಲ್ಲಾ ವಿದ್ಯುತ್ ಪ್ರಸರಣ ಕಂಪನಿಗಳನ್ನು ಖಾಸಗೀಕರಣ ಮಾಡುವುದರಿಂದ ಗ್ರಾಹಕರಿಗೆ ಇನ್ನಿಲ್ಲದ ಸಮಸ್ಯೆ ಅನುಭವಿಸಲೇಬೇಕಾಗುತ್ತದೆ. ಹಲವಾರು ಸೌಲಭ್ಯಗಳು ದೊರೆಯದಂತಾಗುತ್ತದೆ. ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ನಿರಂತರ ಜ್ಯೋತಿ ಇತರೆ ಸೌಲಭ್ಯಗಳು ಅಕ್ಷರಶಃಮರೀಚಿಕೆ ಆಗಲಿವೆ. ಖಾಸಗೀಕರಣದಿಂದ ಕಂಪನಿಯವರು ಹೇಳಿದಂತೆ ನಡೆಯಬೇಕಾಗುತ್ತದೆ ಎಂದು ದೂರಿದರು.
ಎಲ್ಲಾ ವಿದ್ಯುತ್ ಪ್ರಸರಣ ಕಂಪನಿಗಳನ್ನು ಖಾಸಗೀಕರಣ ಮುಖ್ಯವಾಗಿ ರೈತಾಪಿ ವರ್ಗದ ಮೇಲೆ ಭಾರೀ ಪರಿಣಾಮ ಉಂಟು ಮಾಡಲಿದೆ. ರೈತರಿಗೆ ದೊರೆಯುತ್ತಿರುವ ಎಲ್ಲಾ ರೀತಿಯ ಸೌಲಭ್ಯ, ಯೋಜನೆಗಳು ಕೈ ತಪ್ಪಿ ಹೋಗಲಿವೆ. ಆಹಾರದ ಉತ್ಪಾದನಾ ಕ್ಷೇತ್ರದ ಮೇಲೆಯೂ ಕೇಂದ್ರ ಸರ್ಕಾರದ ನೀತಿ ಹೊಡೆತ ನೀಡಲಿದೆ. ರೈತರು, ಜನಸಾಮಾನ್ಯರ ವಿರೋಧಿ ನೀತಿ ಕೈ ಬಿಡಬೇಕು ಎಂದು ಒತ್ತಾಯಿಸಿದರು. ಎಲ್ಲಾ ವಿದ್ಯುತ್ ಪ್ರಸರಣ ಕಂಪನಿಗಳನ್ನು ಖಾಸಗೀಕರಣ ಪ್ರಸ್ತಾಪದ ವಿರುದ್ಧ ಸಾಂಕೇತಿಕ ಹೋರಾಟ ನಡೆಸಲಾಗಿದೆ. ಸರ್ಕಾರ ತನ್ನ ನಿರ್ಧಾರ ಕೈ ಬಿಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಹಂತ ಹಂತದ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಅಧೀಕ್ಷಕ ಇಂಜಿನಿಯರ್ ಸುಭಾಶ್ಚಂದ್ರ, ಎಸ್.ಕೆ. ಪಾಟೀಲ್, ಎಸ್.ಜೆ. ಮುಕುಂದ್, ಡಿ.ಸಿ. ಕೊಟ್ರೇಶ್, ನಟರಾಜ್ ಹತ್ತಿಕಾಳು, ಎನ್.ಎಚ್. ಸುರೇಶ್, ಎನ್.ಎ. ರಾಘವೇಂದ್ರ, ಹನುಮಂತರಾಜ್ ಇತರರು ಇದ್ದರು.