Advertisement

ಯಮ -ಕಿಂಕರ, ಚಿತ್ರಗುಪ್ತ ಸಂಚಾರ ಪಾಠ!

11:36 AM Jan 18, 2020 | Naveen |

ದಾವಣಗೆರೆ: ಸ್ವತಃ ಯಮಧರ್ಮ ಮಹಾರಾಜ, ಯಮಕಿಂಕರ ಹಾಗೂ ಚಿತ್ರಗುಪ್ತರು ಶುಕ್ರವಾರ ದಾವಣಗೆರೆಯ ವಿವಿಧ ಭಾಗದಲ್ಲಿ ಸಂಚಾರಿ ನಿಯಮ, ಪಾಲನೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು!.

Advertisement

ಹೆಲ್ಮೆಟ್‌ ಇಲ್ಲದೆಯೇ ಅತೀ ವೇಗವಾಗಿ ಸಾಗುತ್ತಿದ್ದ ದ್ವಿಚಕ್ರ ವಾಹನ ಸವಾರನನ್ನು ತಡೆದು, ಡಿಎಲ್‌, ಆರ್‌ಸಿ ಕೇಳಿದರು. ಹೆಲ್ಮೆಟ್‌ ಹಾಕದೇ ಇರುವುದರ ಜೊತೆಗೆ ವೇಗದ ಚಾಲನೆಗೆ ಆಕ್ರೋಶ ವ್ಯಕ್ತಪಡಿಸಿದರು.

ಚಿತ್ರಗುಪ್ತನಿಂದ ವಾಹನ ಸವಾರನ ಸಮಗ್ರ ಮಾಹಿತಿ ಪಡೆದುಕೊಂಡ ಯಮಧರ್ಮ, ಮಾಡಿರುವ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು. ಹಾಗಾಗಿ ತಮ್ಮೊಟ್ಟಿಗೆ ಯಮಪುರಿ..ಗೆ ಕರೆದೊಯ್ಯುವುದಾಗಿ ಹೇಳಿ ಕೊರಳಿಗೆ ಹಗ್ಗ ಹಾಕಿ ಗುಡುಗುತ್ತಿದ್ದಂತೆಯೇ ಕಿಂಕರ ಸಹ ಚಾಲಕನನ್ನು ಕರೆದೊಯ್ಯಲು ಸಜ್ಜಾದರು.

ಕೂಡಲೇ ಮಧ್ಯಪ್ರವೇಶಿದ ಚಿತ್ರಗುಪ್ತ, ಮಹಾಪ್ರಭು ಮಾಡಿರುವ ತಪ್ಪನ್ನು ಒಮ್ಮೆ ಮನ್ನಿಸಿ. ಇನ್ನೊಮ್ಮೆ ಎಂದೆಂದಿಗೂ ತಪ್ಪು ಮಾಡದಂತೆ, ಸಂಚಾರಿ ನಿಯಮಗಳ ಪಾಲನೆ ಮಾಡದೇ ಹೋದರೆ ನಿನ್ನ ಹಿಂದೆಯೇ ಇರುತ್ತೇನೆ… ಎಂದು ಎಚ್ಚರಿಸಿ ಬಿಟ್ಟು ಬಿಡಿ ಎಂಬ ಮನವಿಯಂತೆ ಯಮಧರ್ಮ ಆ ಚಾಲಕನಿಗೆ ತಿಳವಳಿಕೆ ಹೇಳಿ, ಗುಲಾಬಿ ಕೊಟ್ಟು ವಾಪಸ್‌ ಕಳಿಸಿದರು.

ಖಾಸಗಿ ನಗರ ಸಂಚಾರ ಬಸ್‌ ವಾಹನ ತಡೆದ ಯಮಧರ್ಮ, ಪ್ರತಿ ದಿನ ನೂರಾರು ಪ್ರಯಾಣಿಕರು ನಿನ್ನನ್ನೇ ನಂಬಿಕೊಂಡು ಸಂಚಾರ ಮಾಡುತ್ತಾ ಇರುತ್ತಾರೆ. ಪ್ರಯಾಣಿಕರು ಮಾತ್ರವಲ್ಲ. ಅವರ ಕುಟುಂಬದವರ ಪ್ರಾಣ, ಜೀವನ ನಿನ್ನ ಕೈಯಲ್ಲೇ ಇರುತ್ತದೆ. ಸರಿಯಾಗಿ ಸಂಚಾರಿ ನಿಯಮ ಪಾಲನೆ ಮಾಡುತ್ತಿದ್ದೀಯಾ ಇಲ್ಲವೇ ಎಂದು ಪ್ರಶ್ನಿಸಿದರು.

Advertisement

ಬಸ್‌ ಚಾಲಕನ ಬಗ್ಗೆ ಚಿತ್ರಗುಪ್ತನಿಂದ ವಿವರ ಕೇಳಿದಾಗ, ಡಿಎಲ್‌, ಆರ್‌ಸಿ ಬುಕ್‌, ಎಲ್ಲಾ ಡಾಕ್ಯುಮೆಂಟ್‌ ಸರಿಯಾಗಿ ಇವೆ. ಸಂಚಾರಿ ನಿಯಮ ಪಾಲನೆ ಮಾಡುತ್ತದ್ದಾನೆ. ಆದರೆ, ಕೊಂಚ ರಸಿಕತೆ ಜಾಸ್ತಿ. ಹಾಗಾಗಿ ಸೈಡ್‌ ಮಿರರ್‌ ನೋಡಿಕೊಂಡು ಕೊಂಚ ಕೇರ್‌ಲೆಸ್‌ ಆಗಿ ಗಾಡಿ ಚಲಾಯಿಸುತ್ತಾನೆ ಎಂದು ಹೇಳುತ್ತಿದ್ದಂತೆ ಕೋಪಗೊಂಡ ಯಮಧರ್ಮ, ಅಷ್ಟೊಂದು ರಸಿಕನೇ?, ವಾಹನ ಚಲಾಯಿಸುವಾಗ ಪ್ರಯಾಣಿಕರ ಜೀವ ನಿನ್ನ ಕೈಯಲ್ಲೇ ಇರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳದೆ ವಾಹನ ಚಲಾಯಿಸುವ ಅಕ್ಷಮ್ಯ ಅಪರಾಧ ಸಹಿಸಲಿಕ್ಕೆ ಆಗುವುದೇ ಇಲ್ಲ. ನಡೆ ಯಮಪುರಿಯ ಕಡೆಗೆ… ಎಂದು ಚಾಲಕನ ಕುತ್ತಿಗೆಗೆ ಪಾಶಾಣ… ಹಾಕಿ, ಬಸ್‌ನಿಂದ ಇಳಿಸಿಕೊಂಡೇ ಬಿಟ್ಟದ್ದನ್ನು ಕಂಡು ಪ್ರಯಾಣಿಕರು ಹೌಹಾರಿದರು.

ಕೊನೆಗೆ ಚಿತ್ರಗುಪ್ತನ ಸಲಹೆಯಂತೆ, ಆ ಚಾಲಕನಿಗೆ ಎಚ್ಚರಿಕೆ ನೀಡಿ, ವಾಪಸ್‌ ಕಳಿಸಲಾಯಿತು…. ಇಂತಹ ರೋಚಕ ಸನ್ನಿವೇಶಗಳ ಮೂಲಕ ಸಂಚಾರಿ ನಿಯಮಗಳ ಬಗ್ಗೆ ಸಾರ್ವಜನಿಕರು, ಚಾಲಕರಲ್ಲಿ ಜಾಗೃತಿ ಮೂಡಿಸಿದ್ದು ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್‌ ಠಾಣೆಯ ಪೇದೆಗಳಾದ ರಾಮಾಂಜನೇಯ, ಹರೀಶ್‌ ನಾಯ್ಕ ಮತ್ತು ಮಂಜುನಾಥ್‌.
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಸಂಚಾರಿ ನಿಯಮಗಳ ಬಗ್ಗೆ ವಿಶೇಷವಾಗಿ ಜಾಗೃತಿ ಮೂಡಿಸಲು ಪಿಎಸ್‌ಐ ಅರ್ಜುನ ಮಂಜುನಾಥ್‌ ಲಿಂಗಾರೆಡ್ಡಿ, ಜಯಶೀಲ ಇಂತಹ ರೂಪಕದ ಪರಿಕಲ್ಪನೆ ಮಾಡಿ, ತಾವೇ ನಿರ್ದೇಶಿಸಿದ್ದು ವಿಶೇಷ.

ಸಾರ್ವಜನಿಕರು ಸಹ ಸಂಚಾರಿ ಪೊಲೀಸರ ವಿಭಿನ್ನ ಪ್ರಯತ್ನಕ್ಕೆ ಸಂತೋಷ ವ್ಯಕ್ತಪಡಿಸಿದರು. ಸಂಚಾರಿ ನಿಯಮಗಳ ಪಾಲನೆ ಮಾಡದೇ ಇದ್ದಲ್ಲಿ ಯಮ… ಹಿಂದೆಯೇ ಇರುತ್ತಾನೆ ಎಂಬುದ ತಿಳಿದುಕೊಂಡರು. ಡೆಂಟಲ್‌ ಕಾಲೇಜು ರಸ್ತೆ ಇತರೆ ಭಾಗದಲ್ಲಿ ಜಾಗೃತಿ ಕಾರ್ಯಕ್ರಮ ಮುಂದುವರೆಯಿತು.

Advertisement

Udayavani is now on Telegram. Click here to join our channel and stay updated with the latest news.

Next