ದಾವಣಗೆರೆ: ಕೃಷಿ ಪರಿಕರ ಮಾರಾಟಗಾರರಿಗೆ ಯಾವುದೇ ಆತಂಕ ಬೇಡ. ಜಿಲ್ಲಾಡಳಿತದ ಸಂಪೂರ್ಣ ಬೆಂಬಲ ಸದಾ ಇರಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ರೈತರಿಗೆ ಭರವಸೆ ನೀಡಿದ್ದಾರೆ.
ಭಾನುವಾರ ಜಿಲ್ಲಾಡಳಿತ ಭವನದ ತುಂಗ ಭದ್ರ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೃಷಿ ಪರಿಕರ ಮಾರಾಟಗಾರರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದ್ಯದಲ್ಲೇ ಮುಂಗಾರು ಹಂಗಾಮು ಆರಂಭವಾಗಲಿದೆ. ರೈತರಿಗೆ ಬೇಕಾದ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬ, ಕೀಟನಾಶಕ, ಯಂತ್ರೋಪಕರಣ ಸೇರಿದಂತೆ ಎಲ್ಲವನ್ನೂ ಮೇ 15ರೊಳಗಾಗಿ ದಾಸ್ತಾನು ಮಾಡಿಕೊಳ್ಳುವಂತೆ ತಿಳಿಸಿದರು.
ಕೃಷಿ ಚಟುವಟಿಕೆಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಆದಷ್ಟು ಕಡಿಮೆ ಸಿಬ್ಬಂದಿಯಿಂದ ಕಾರ್ಯ ನಿರ್ವಹಿಸಬೇಕು. ಸಿಬ್ಬಂದಿಗಳಿಗೆ ಸ್ಯಾನಿಟೈಸರ್, ಮಾಸ್ಕ್ ಮುಂತಾದ ಸುರಕ್ಷಾ ಪರಿಕರ ನೀಡಬೇಕು. ಕೃಷಿ ಇಲಾಖೆಯಿಂದ ಅಗತ್ಯವಿರುವ ಪಾಸ್ ನೀಡಲಾಗುವುದು. ಹಮಾಲಿಗಳಿಗೆ ತಮ್ಮ ಅಂಗಡಿ ವತಿಯಿಂದಲೇ ಐಡಿ ಕಾರ್ಡ್ ಅಥವಾ ಅನುಮತಿ ಪತ್ರ ನೀಡಿ. ಈ ಕ್ಷಣದಿಂದ ಯಾವುದೇ ನಿರ್ಬಂಧ ಇರುವುದಿಲ್ಲ. ಕೃಷಿಕರು ಮತ್ತು ಕೃಷಿ ಸಂಬಂ ಧಿತರನ್ನು ಲಾಕ್‌ಡೌನ್ ಕ್ರಮದಿಂದ ಸಡಿಲಗೊಳಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಮಾತನಾಡಿ, ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಗುರುತಿನ ಚೀಟಿ ನೀಡಿರಿ. ಚೆಕ್‌ಪೋಸ್ಟ್‌ಗಳಲ್ಲಿ ತಡೆಯದಂತೆ ಪೊಲೀಸರಿಗೆ ಸೂಚನೆ ನೀಡಲಾಗುವುದು. ಆದರೆ, ಗುರುತಿನ ಚೀಟಿಗಳು ಯಾವುದೇ ಕಾರಣಕ್ಕೂ ದುರುಪಯೋಗವಾಗಬಾರದು. ಕೃಷಿಗೆ ಪೂರಕವಾದ ಟ್ರ್ಯಾಕ್ಟರ್ ರಿಪೇರಿ, ಬಿಡಿ ಭಾಗಗಳ ಮಾರಾಟಕ್ಕೆ ಅನುಮತಿ ಇದ್ದು, ಹಾಗೂ ಕೆಲವೊಂದು ಕೊಯ್ಲು ಯಂತ್ರಗಳನ್ನು ಆಂಧ್ರ ಪ್ರದೇಶದಿಂದ ತರಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಅಲ್ಲಿನ ಜಿಲ್ಲಾ ಧಿಕಾರಿಗಳೊಂದಿಗೆ ಮಾತನಾಡಲಾಗುವುದು ಎಂದು ತಿಳಿಸಿದರು.
ಕೃಷಿ ಪರಿಕರ ವರ್ತಕರ ಸಂಘದ ಅಧ್ಯಕ್ಷ ನಾಗರಾಜು ಮಾತನಾಡಿ, 500 ಸರಬರಾಜುದಾರರಿದ್ದು, ಅವರ ಬಳಿ ಸಹಾಯಕರಾಗಿ ಒಂದಿಬ್ಬರು ಕೆಲಸ ಮಾಡಬೇಕಾಗುತ್ತದೆ. ಅವರಿಗೆ ಪಾಸ್ ವ್ಯವಸ್ಥೆ ಮಾಡಬೇಕು. ಟ್ರಾÂಕ್ಟರ್ ಗ್ಯಾರೇಜ್‌ಗಳನ್ನು ನಿರ್ದಿಷ್ಟ ಅವ ಧಿಯಲ್ಲಿ ಅಥವಾ ದಿನ ಪೂರ್ತಿ ತೆರೆಯುವಂತೆ ನೋಡಿಕೊಳ್ಳಬೇಕು. ಹಮಾಲಿಗಳಿಗೆ ಗುರುತಿನ ಚೀಟಿ ವಿತರಿಸಬೇಕು. ಬಿತ್ತನೆ ಬೀಜ ಹೊರರಾಜ್ಯದಿಂದ ಬರಬೇಕಾಗಿದ್ದು, ಇದಕ್ಕೆ ಅವಕಾಶ ಮಾಡಿಕೊಡಬೇಕು. ಹಮಾಲರಿಗೆ 1 ಸಾವಿರದಷ್ಟು ಆಹಾರದ ಕಿಟ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಕೃಷಿಗೆ ಸಂಬಂಧಿಸಿದ ಯಾವುದೇ ರೀತಿಯ ತೊಂದರೆಗಳಿದ್ದಲ್ಲಿ, ಚೆಕ್‌ಪೋಸ್ಟ್‌ಗಳಲ್ಲಿ ಕೃಷಿಗೆ ಸಂಬಂಧಿ ಸಿದ ಗಾಡಿಗಳನ್ನು ತಡೆದರೆ ಸಹಾಯವಾಣಿ 1077ಗೆ ಕರೆ ಮಾಡಿ ತಿಳಿಸಿದಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಪಂ ಸಿಇಒ ಪದ್ಮಾ ಬಸವಂತಪ್ಪ, ಎಡಿಸಿ ಪೂಜಾರ ವೀರಮಲ್ಲಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಬಿ. ಮುದಗಲ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮಿಕಾಂತ್ ಬೊಮ್ಮನ್ನಾರ್ ಇತರರು ಇದ್ದರು.