Advertisement

ದಾವಣಗೆರೆ: ಸೇವೆ ಪೂರೈಸಿ ಬಂದ ಯೋಧರಿಬ್ಬರಿಗೆ ಭವ್ಯ ಸ್ವಾಗತ

08:08 PM Jan 05, 2022 | Team Udayavani |

ದಾವಣಗೆರೆ: ಗಡಿ ಭದ್ರತಾ ಪಡೆಯಲ್ಲಿ 27 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ  ಬುಧವಾರ ದಾವಣಗೆರೆಗೆ ಆಗಮಿಸಿದ ನಾಗರಾಜಶೆಟ್ಟಿ ಮತ್ತು ರಾಘವೇಂದ್ರ ಅವರಿಗೆ ಮೇಯರ್ ಎಸ್.ಟಿ. ವೀರೇಶ್ ಒಳಗೊಂಡಂತೆ ಅನೇಕರು ಭವ್ಯ ಸ್ವಾಗತ ಕೋರಿದರು.

Advertisement

ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ವೀರ ಯೋಧರ ಸ್ವಾಗತಕ್ಕಾಗಿ ಅನೇಕರು ನೆರೆದಿದ್ದರು. ಇಬ್ಬರು ಯೋಧರು ಆಗಮಿಸುತ್ತಿದ್ದಂತೆ ನಾಗರಾಜಶೆಟ್ಟಿ, ರಾಘವೇಂದ್ರ ಅವರಿಗೆ ಜಯವಾಗಲಿ, ಭಾರತ್ ಮಾತಾ ಕೀ ಜೈ..ಎಂಬ ಘೋಷಣೆ ಮೊಳಗಿದವು. ದಾವಣಗೆರೆಯ ವೀರಪುತ್ರರಿಗೆ ಹೂಮಾಲೆಯಿಂದಿಗೆ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಎಸ್.ಟಿ. ವೀರೇಶ್, ಕೋಟ್ಯಾಂತರ ಭಾರತೀಯರ ನೆಮ್ಮದಿಯ ಜೀವನಕ್ಕೆ ಕಾರಣವಾಗಿರುವ ವೀರಯೋಧರ ಕರ್ತವ್ಯ ಎನ್ನುವುದು ಅವರ ಮರಣದವರೆಗೂ ಇರುತ್ತದೆ. ಸೈನಿಕರು ತಮ್ಮ ಕುಟುಂಬದಿಂದ ಸಾವಿರಾರು ಕಿಲೋಮೀಟರ್ ದೂರವಿದ್ದು,ವೈಯಕ್ತಿಕ, ಕುಟುಂಬದ ಆಸೆಗಳನ್ನು ಬದಿಗೊತ್ತಿ, ಭಾರತಮಾತೆಯ ರಕ್ಷಣೆಗೋಸ್ಕರ ಗಡಿ ಭಾಗದಲ್ಲಿ ಕಾವಲು ಕಾಯುತ್ತಿರುತ್ತಾರೆ. ಅವರ ಸೇವೆ ಸದಾ ಸ್ಮರಣೀಯ ಎಂದರು.

ನೆರೆಯ ಪಾಪಿ ಪಾಕಿಸ್ತಾನ ಹಾಗೂ ಚೀನಾ ಪದೆ ಪದೇ ಕುತಂತ್ರ ಮಾಡುತ್ತಲೇ ಬರುತ್ತಿವೆ. ನಮ್ಮ ಭಾರತೀಯ ವೀರ ಯೋಧರು ತಕ್ಕ ಉತ್ತರ ನೀಡುತ್ತಾ ಬಂದಿದ್ದಾರೆ. ಅಂತಹ ಯೋಧರನ್ನು ಗೌರವಿಸುತ್ತಿರುವುದು ಹೆಮ್ಮೆಯ ವಿಚಾರ. ಗಡಿ ಭದ್ರತಾ ಪಡೆಯಲ್ಲಿ ೨೭ ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ನಂತರ ದಾವಣಗೆರೆಗೆ ಆಗಮಿಸಿರುವ ನಾಗರಾಜ ಶೆಟ್ಟಿ, ರಾಘವೇಂದ್ರ ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.

ಇಬ್ಬರು ಯೋಧರು, ತಮ್ಮೂರಿನ ಜನರು ಕೋರಿದ ಸ್ವಾಗತಕ್ಕೆ ಸಂತಸ ವ್ಯಕ್ತಪಡಿಸಿದರು. ಯುವ ಜನಾಂಗ ಸೇನೆಗೆ ಸೇರುವ ಮೂಲಕ ಭಾರತ ಮಾತೆಯ ಸೇವೆ ಮಾಡಬೇಕು ಎಂದು ತಿಳಿಸಿದರು.

Advertisement

ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸತ್ಯಪ್ರಕಾಶ್, ಮಂಜುನಾಥನಾಯ್ಕ, ನಗರ ಪೊಲೀಸ್ ಉಪಾಽಕ್ಷಕ ನರಸಿಂಹ ತಾಮ್ರಧ್ವಜ್, ಮಂಜುನಾಥ್, ಬಿ.ಎಸ್. ಬಸವರಾಜ್, ಎಂ. ನಾರಾಯಣಸ್ವಾಮಿ, ನಾಗರಾಜ್, ನೀಲಮ್ಮನ ತೋಟದ ಚಾಮುಂಡೇಶ್ವರಿ ಕಬಡ್ಡಿ ಕ್ರೀಡಾ ಸಮಿತಿ, ವಂದೇ ಮಾತರಂ ಕ್ರೀಡಾ ಸಮಿತಿ, ದಾವಣಗೆರೆ ಜಿಲ್ಲಾ ಸರ್ಕಾರಿ ನೌಕರರ ಕಬಡ್ಡಿ ಕ್ರೀಡಾ ಸಮಿತಿ, ಜಿಲ್ಲಾ ಪ್ಯಾರಾ ಮಿಲಿಟರಿ ಯೋಧರ ಸಂಘ, ದಾವಣಗೆರೆ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಪದಾಧಿಕಾರಿಗಳು, ಇತರೆ ಸಂಘ-ಸಂಸ್ಥೆಗಳ ಕಾರ್‍ಯಕರ್ತರು, ಕುಟುಂಬ ಸದಸ್ಯರು ಇದ್ದರು. ತೆರೆದ ಜೀಪಿನಲ್ಲಿ ಇಬ್ಬರು ಯೋಧರ ಮೆರವಣಿಗೆ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next