Advertisement

ಬೀರೇಶ್ವರ ದೇವಸ್ಥಾನ ಜಾಗ ಕಬಳಿಕೆ ಆರೋಪ ಸುಳ್ಳು

04:39 PM Jul 12, 2019 | Naveen |

ದಾವಣಗೆರೆ: ಹಳೆ ಪಿಬಿ ರಸ್ತೆಗೆ ಹೊಂದಿಕೊಂಡಿರುವ ಶ್ರೀ ಬೀರೇಶ್ವರ ದೇವಸ್ಥಾನದ ಜಾಗವನ್ನು ಮಾಜಿ ಶಾಸಕ ಕೆ. ಮಲ್ಲಪ್ಪ ಕಬಳಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಪೂಜಾರ ವಂಶಸ್ಥರು ಮಾಡಿರುವಂತಹ ಆರೋಪ ಸತ್ಯಕ್ಕೆ ದೂರವಾದ ವಿಚಾರ ಎಂದು ಶ್ರೀ ಬೀರೇಶ್ವರ ದೇವಸ್ಥಾನ ಜಾಗದ ಅಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಕೆಂಗೋ ಹನುಮಂತಪ್ಪ ತಿಳಿಸಿದ್ದಾರೆ.

Advertisement

ಮಾಜಿ ಶಾಸಕ ಕೆ.ಮಲ್ಲಪ್ಪ ಅವರು ಅಭಿವೃದ್ಧಿ ಟ್ರಸ್ಟ್‌ ಮಾಡದೇ ಹೋಗಿದ್ದರೆ ಇಷ್ಟೊತ್ತಿಗೆ ದೇವಸ್ಥಾನದ ಜಾಗ ಯಾರ ಯಾರೋ ಪಾಲಾಗುತ್ತಿತ್ತು. ಅವರು ಟ್ರಸ್ಟ್‌ ಮೂಲಕ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮಳಿಗೆಗಳ ಬಾಡಿಗೆಯನ್ನೂ ಯಾರೂ ಸಹ ದುರುಪಯೋಗಪಡಿಸಿಕೊಂಡಿಲ್ಲ. ಪೂಜಾರ್‌ ವಂಶಸ್ಥರ ಆರೋಪದಲ್ಲಿ ಯಾವುದೇ ಹುರುಳು ಇಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪೂಜಾರ್‌ ವಂಶಸ್ಥರು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿರುವಂತೆ ತಲ ತಲಾಂತರದಿಂದ ಪೂಜಾರಿಕೆ ಮಾಡಿಕೊಂಡು ಬರುತ್ತಿಲ್ಲ. 1958ರ ಈಚೆಗೆ ದೇವಸ್ಥಾನ ಕಟ್ಟಿಸಿದ ಮೇಲೆಯೇ ಮಾಜಿ ಶಾಸಕ ಕೆ. ಮಲ್ಲಪ್ಪ ಅವರೇ ಪೂಜಾರ್‌ ವಂಶಸ್ಥರಿಗೆ ದೇವಸ್ಥಾನದ ಪೂಜೆ, ದೇವಸ್ಥಾನ ಹಿಂಭಾಗದಲ್ಲೇ ಮನೆ ಕಟ್ಟಿಕೊಂಡು ಜೀವನ ಮಾಡಿಕೊಂಡು ಹೋಗುವ ಅವಕಾಶ ಮಾಡಿಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಜಾಗ ಕಬಳಿಸುವ ಯತ್ನ ನಡೆಸಿಲ್ಲ. ಯಾರು ಸಹಾಯ ಮಾಡಿದ್ದಾರೋ ಅವರ ಮೇಲೆಯೇ ಆರೋಪ ಮಾಡುವುದು ಅತ್ಯಂತ ಖಂಡನೀಯ. ಇಡೀ ಸಮಾಜ ಕೆ. ಮಲ್ಲಪ್ಪ ವಿರುದ್ಧ ಮಾಡಿರುವ ಆರೋಪವನ್ನು ಖಂಡಿಸುತ್ತದೆ ಎಂದು ತಿಳಿಸಿದರು.

ಪೂಜಾರ್‌ ವಂಶಸ್ಥರಿಗೆ ದೇವಸ್ಥಾನದ ಪೂಜೆ ಮಾಡಿಕೊಂಡು ಹೋಗಲು ಮಾತ್ರವೇ ಅವಕಾಶ ಇದೆ. ಮೇಲಾಗಿ ಶ್ರೀ ಬೀರೇಶ್ವರ ದೇವಸ್ಥಾನ ಮುಜುರಾಯಿ ಇಲಾಖೆಗೆ ಸೇರಿರುವಾಗ ಜಾಗ ನಮ್ಮದು ಎಂದು ಹೇಳಲಿಕ್ಕೂ ಬರುವುದೇ ಇಲ್ಲ. ಹಾಗೇನಾದರೂ ಇದ್ದರೆ ಕಾನೂನು ಮೂಲಕ ಪಡೆದುಕೊಳ್ಳಲಿಕ್ಕೆ ಯಾರೂ ಬೇಡ ಅನ್ನುವುದಿಲ್ಲ. ಈಗಿರುವ ಪೂಜಾರಿ ಅವರನ್ನ ವಜಾ ಮಾಡಬೇಕು ಎಂದು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ ಅವರಿಗೆ ಮನವಿ ಸಹ ಮಾಡಲಾಗಿದೆ. ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

2012ರಲ್ಲಿ ಶ್ರೀ ಬೀರೇಶ್ವರ ದೇವಸ್ಥಾನದ ಜಾಗ ಉಳಿಸಿಕೊಳ್ಳಲು ಶ್ರೀ ಬೀರೇಶ್ವರ ದೇವಸ್ಥಾನ ಜಾಗದ ಅಭಿವೃದ್ಧಿ ಟ್ರಸ್ಟ್‌ ಮಾಡಿಕೊಂಡು ಹೋರಾಟ ಮಾಡಿದ ಸಂದರ್ಭ ಒಳಗೊಂಡಂತೆ ಒಮ್ಮೆಯೂ ಪೂಜಾರ್‌ ವಂಶಸ್ಥರು ಜಾಗ ನಮ್ಮದು ಎಂದು ಹೇಳಿಲ್ಲ. ಶ್ರೀ ಬೀರೇಶ್ವರ ದೇವಸ್ಥಾನ ಜಾಗದ ಅಭಿವೃದ್ಧಿ ಟ್ರಸ್ಟ್‌ನವರನ್ನೂ ಕೇಳಿಲ್ಲ. ನಾವು ಸಹ ಅವರಿಗೆ ಮನೆ ಬಿಡುವಂತೆಯೂ ಹೇಳಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

ಪೂಜಾರ್‌ ಅಜ್ಜಪ್ಪ ಮಾತನಾಡಿ, ಈಗ ಶ್ರೀ ಬೀರೇಶ್ವರ ದೇವಸ್ಥಾನ ಪೂಜೆ ಮಾಡುತ್ತಿರುವವರು ಹಿಂದಿನಿಂದಲೂ ಪೂಜೆ ಮಾಡಿಕೊಂಡು ಬಂದಿಲ್ಲ. ನಮ್ಮ ಮನೆತನದವರು ದುರ್ಗಾಂಬಿಕಾ ದೇವಸ್ಥಾನದ ಬಳಿ ಇರುವ ಶ್ರೀ ಬೀರೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದೆವು. ಈಗ ಇರುವಂತೆ ಶ್ರೀ ಬೀರೇಶ್ವರ ದೇವಸ್ಥಾನ ಇರಲಿಲ್ಲ. ಮಣ್ಣಿನ ಗುಡ್ಡೆಯಂತೆ ದೇವಸ್ಥಾನ ಇತ್ತು. ದೂರದಿಂದ ಬಂದು ಪೂಜೆ ಮಾಡುವುದು ಆಗುವುದಿಲ್ಲ. ಹಾಗಾಗಿ ನೀವೇ ಪೂಜೆ ಮಾಡಿಕೊಂಡು ಹೋಗಿ ಎಂದು ಅವಕಾಶ ಮಾಡಿಕೊಡಲಾಗಿದೆಯೇ ಹೊರತು ಅವರು ಹೇಳಿಕೊಂಡಿರುವಂತೆ ನೂರಾರು ವರ್ಷಗಳಿಂದ ಪೂಜೆ ಮಾಡಿಕೊಂಡು ಬಂದಿಲ್ಲ. ಈಗ ಪೂಜೆ ಮಾಡುತ್ತಿರುವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಶ್ರೀ ಬೀರೇಶ್ವರ ದೇವಸ್ಥಾನ ಜಾಗದ ಅಭಿವೃದ್ಧಿ ಟ್ರಸ್ಟ್‌ನ ಬಳ್ಳಾರಿ ಷಣ್ಮುಖಪ್ಪ, ಜೆ.ಕೆ. ಕೊಟ್ರಬಸಪ್ಪ, ಪೈಲ್ವಾನ್‌ ಸಂಗಪ್ಪ, ಗೌಡ್ರ ಚನ್ನಬಸಪ್ಪ, ಬಿ.ಎಚ್. ಪರಶುರಾಮಪ್ಪ, ಎಸ್‌.ಎಸ್‌. ಗಿರೀಶ್‌, ಮಾಜಿ ಮೇಯರ್‌ಗಳಾದ ಎಚ್.ಬಿ. ಗೋಣೆಪ್ಪ, ಎಚ್.ಎನ್‌. ಗುರುನಾಥ್‌, ನಗರಸಭೆ ಮಾಜಿ ಸದಸ್ಯ ಎನ್‌.ಜೆ. ನಿಂಗಪ್ಪ, ಕುಂಬಳೂರು ವಿರುಪಾಕ್ಷಪ್ಪ, ಜಮ್ನಳ್ಳಿ ನಾಗರಾಜ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next