ದಾವಣಗೆರೆ: ಮೌಲ್ಯಾಧಾರಿತ ಜೀವನದಿಂದ ಬದುಕಿಗೆ ನೆಲೆ, ಬೆಲೆ ಪ್ರಾಪ್ತವಾಗಲಿದ್ದು, ಸತ್ಯ ಸಂಸ್ಕೃತಿಯ ಉಳಿವು-ಬೆಳವಣಿಗೆ ಎಲ್ಲರ ಗುರಿಯಾಗಬೇಕಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಶನಿವಾರ ಸಂಜೆ ನಗರದ ಅಭಿನವ ರೇಣುಕ ಮಂದಿರದಲ್ಲಿ ಶ್ರೀ ಮದ್ವೀರಶೈವ ಸದ್ಭೋಧನಾ ಸಂಸ್ಥೆಯ ಜಿಲ್ಲಾ ಘಟಕ ಸಹಯೋಗದಲ್ಲಿ ಏರ್ಪಡಿಸಿದ್ದ 24ನೇ ವರ್ಷದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಸಂಗಮ ಸಮಾರಂಭದ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದ ಅವರು, ಪ್ರಸ್ತುತ ಸ್ವಾರ್ಥಕ್ಕಾಗಿ ಆದರ್ಶಗಳನ್ನು ನಾಶ ಮಾಡುವ ಜನ ಹೆಚ್ಚಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಧರ್ಮ, ಸಂಸ್ಕೃತಿ, ಪರಂಪರೆ ಕಟ್ಟಿ ಬೆಳೆಸುವುದು ಬಲು ಕಷ್ಟದ ಕೆಲಸ. ಆದರೆ, ಅವುಗಳನ್ನು ನಾಶ ಮಾಡಲು ಬಹಳ ಶ್ರಮಪಡಬೇಕಾಗಿಲ್ಲ. ಸತ್ಯ ಸಂಸ್ಕೃತಿಯ ರಕ್ಷಾಕವಚ ನಾಶಗೊಂಡರೆ ಏನೊಂದು ಉಳಿಯದು. ಅರಿವಿನ ಸತ್ಪಥದಲ್ಲಿ ಮೌಲ್ಯಾಧಾರಿತ ಜೀವನ ನಮ್ಮದಾದರೆ ಬದುಕಿನಲ್ಲಿ ಸುಖ ಶಾಂತಿ ದೊರಕಲು ಸಾಧ್ಯ ಎಂದು ಪ್ರತಿಪಾದಿಸಿದರು.
ಕಲ್ಲು, ಮುಳ್ಳುಗಳಿಂದ ತುಂಬಿದ ಜೀವನ ಮಾರ್ಗದಲ್ಲಿ ಹೂ ಗಿಡಗಳನ್ನು ನೆಟ್ಟು ಸುಗಂಧ ಪರಿಮಳ ಬೀರುವಂತೆ ಮಾಡುವುದೇ ಗುರುವಿನ ಧರ್ಮವಾಗಿದೆ. ವೀರಶೈವ ಧರ್ಮ ಸಕಲ ಜೀವಾತ್ಮರಿಗೂ ಸದಾ ಒಳಿತನ್ನೇ ಬಯಸಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಶ್ವ ಬಂಧುತ್ವದ ಆದರ್ಶ ಚಿಂತನಗಳನ್ನು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಬೋಧಿಸಿದ್ದಾರೆ. ಪೂರ್ವಜರು ತೋರಿದ ಧರ್ಮ ದಾರಿಯಲ್ಲಿ ನಡೆಯುವುದೇ ನಮ್ಮೆಲ್ಲರ ಗುರಿಯಾಗಬೇಕಿದೆ ಎಂದು ತಿಳಿಸಿದರು. ಮೊದಲ ದಿನದ ಧರ್ಮ ಸಂಗಮ ಸಮಾರಂಭ ಉದ್ಘಾಟಿಸಿದ ಅಖೀಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಘಟಕದ ಉಪಾಧ್ಯಕ್ಷ ಅಥಣಿ ವೀರಣ್ಣ, ವೀರಶೈವ ಧರ್ಮದ ಅರಿವು ಮತ್ತು ಪರಿಪಾಲನೆ ಬಹು ಮುಖ್ಯ. ಬಹು ಸಂಖ್ಯಾತರಾದ ವೀರಶೈವರು ಸಾಮರಸ್ಯದಿಂದ ಬಾಳಿ ಬದುಕಿದರೆ ಅದ್ಭುತ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದರು.
ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ. ಶೆಟ್ಟಿ, ದಾವಣಗೆರೆ-ಹರಿಹರ ಅರ್ಬನ್ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್, ವಿನಾಯಕ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿ ಎನ್.ಕೆ. ವೀರಣ್ಣ, ಮಕ್ಕಳ ತಜ್ಞ ಡಾ| ಎನ್.ಕೆ. ಕಾಳಪ್ಪನವರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಗಣ್ಯರು ಮತ್ತು ದಾನಿಗಳಿಗೆ ಇದೇ ಸಂದರ್ಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆಯಿತ್ತು ಶುಭ ಹಾರೈಸಿದರು.ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಧರ್ಮ ಸಂಸ್ಕೃತಿ ಸಂವರ್ಧನೆ ಕುರಿತು ಉಪದೇಶಾಮೃತವ್ನಿತ್ತರು. ಗದುಗಿನ ಗಾನಭೂಷಣ ವೀರೇಶ ಕಿತ್ತೂರರಿಂದ ಸಂಗೀತ ಸೌರಭ ಜರುಗಿತು.
ಶ್ರೀ ಮದ್ವೀರಶೈವ ಸದ್ಭೋಧನಾ ಸಂಸ್ಥೆಯ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನೆ ಶಿವಕುಮಾರ ಸ್ವಾಗತಿಸಿದರು. ಶಿಕ್ಷಕ ಕೆ.ಎಂ.ಶಿವಯೋಗಿ ನಿರೂಪಿಸಿದರು.
ಇಷ್ಟಲಿಂಗ ಪೂಜಾ: ಬೆಳಗ್ಗೆ ಶ್ರೀಮದ್ ರೇಣುಕ ಅಭಿನವ ಮಂದಿರದಲ್ಲಿ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಆಷಾಢ ಮಾಸದ ಇಷ್ಟಲಿಂಗ ಪೂಜಾ ಕಾರ್ಯ ನೆರವೇರಿತು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಈ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು, ಶ್ರೀಗಳ ಆಶೀರ್ವಾದ ಪಡೆದರು.