Advertisement

ಸ್ವ ಪಕ್ಷೀಯರಿಗೇ ಶಾಕ್‌ ನೀಡಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ!

12:44 PM Nov 02, 2019 | Team Udayavani |

„ರಾ.ರವಿಬಾಬು
ದಾವಣಗೆರೆ:
ಬಿಜೆಪಿಯವರು ಕಾಂಗ್ರೆಸ್‌ ನವರಿಗೆ ಚಿನ್ನದ ತಟ್ಟೆಯಲ್ಲಿ ಕಾರ್ಪೋರೇಷನ್‌ ಎಲೆಕ್ಷನ್‌ನಲ್ಲಿ ಗೆಲುವನ್ನು ಇಟ್ಟುಕೊಟ್ಟಿದ್ದಾರೆ… ಎನ್ನುವ ಮಾತು ದಾವಣಗೆರೆಯಲ್ಲಿ ಈಗ ಎಲ್ಲೆಡೆ ಸಾಮಾನ್ಯ ಕೇಳಿಬರುತ್ತಿರುವುದಕ್ಕೆ ಕಾರಣ ಬಿಜೆಪಿ ಟಿಕೆಟ್‌ ಹಂಚಿಕೆ!.

Advertisement

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾವ ಮಾನದಂಡದ ಆಧಾರದಲ್ಲಿ ಟಿಕೆಟ್‌ ನೀಡಲಾಗಿದೆ ಎಂಬುದು ಆಕಾಂಕ್ಷಿಗಳಿಗೆ ಇರಲಿ ಖಟ್ಟರ್‌… ಬಿಜೆಪಿಯವರಿಗೇ ಅರ್ಥವಾಗುತ್ತಿಲ್ಲ. ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಘೋಷಿಸಿರುವ 45 ವಾರ್ಡ್‌ಗಳ ಅಭ್ಯರ್ಥಿಗಳ ಪಟ್ಟಿಯನ್ನು ನೋಡಿದರೆ ಕೆಲವೇ ಕೆಲವು ಹೆಸರು ಪರಿಚಯದ್ದಾಗಿವೆ. ಕೆಲವು ಅಭ್ಯರ್ಥಿಗಳು ಪಕ್ಷದವರಿಗೇ ಅಕ್ಷರಶಃ ಅನಾಮಿಕರು. ಕೆಲ ದಶಕಗಳ ಹಿಂದೆಯಷ್ಟೇ ಬಿಜೆಪಿ ಎಂದರೆ ಕೈ ಬೆರಳಣಿಕೆಯಷ್ಟು ನಾಯಕರು, ಕಾರ್ಯಕರ್ತರು ಇದ್ದರು. ಅನೇಕ ಸಂದರ್ಭದಲ್ಲಿ ರಾಜ್ಯದ ಮುಖಂಡರೇ ಬಂದರೂ ನೆರೆಯುತ್ತಿದ್ದ ಮುಖಂಡರು, ಕಾರ್ಯಕರ್ತರ ಸಂಖ್ಯೆ ನೂರು ದಾಟುವುದೂ ಕಷ್ಟವಾಗಿತ್ತು. ಅಂತಹ ಸ್ಥಿತಿಯಲ್ಲಿದ್ದ ಪಕ್ಷ ಈಗ ಬೆಳೆದಿರುವ ರೀತಿ ನೋಡಿದರೆ ನಿಬ್ಬೆರಗಾಗುತ್ತದೆ.

ಅದಕ್ಕೆ ಮೂಲ ಕಾರಣ ಅಭೇದ್ಯ, ಬಲಿಷ್ಠ ಕಾರ್ಯಕರ್ತರ ಪಡೆ. ಮನೆ, ವ್ಯಾಪಾರ- ವಹಿವಾಟು ಬದಿಗೊತ್ತಿ ಪಕ್ಷದ ಕೆಲಸಕ್ಕೆ ದೌಡಾಯಿಸಿ ಬರುತ್ತಿದ್ದ ಅನೇಕರಿಗೆ ಪಕ್ಷದ ಮುಖಂಡರು ನೇರವಾಗಿಯೇ ನಗರಪಾಲಿಕೆಯ ಟಿಕೆಟ್‌ ನಿರಾಕರಿಸುವ ಮೂಲಕ ಕನಸು ಮನಸಿನಲ್ಲೂ ಊಹಿಸದಂತಹ ಶಾಕ್‌… ನೀಡಿದ್ದಾರೆ.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮಹಿಳಾ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರು, ಮಾಜಿ ಮೇಯರ್‌ಗಳು, ಉಪ ಮೇಯರ್‌ಗಳು, ಸದಸ್ಯರು, ವಿವಿಧ ಪ್ರಮುಖ ಹುದ್ದೆಯಲ್ಲಿದ್ದವರಿಗೆ ಟಿಕೆಟ್‌ ನಿರಾಕರಿಸಲಾಗಿದೆ.

ಕಾರಣ ಮಾತ್ರ ನಿಗೂಢ. ಟಿಕೆಟ್‌ ಕೊಡದಿರುವುದು ಒತ್ತಟ್ಟಿಗಿರಲಿ. ಇಂತಹ ಕಾರಣಕ್ಕೆ ಟಿಕೆಟ್‌ ಕೊಡಲಾಗುತ್ತಿಲ್ಲ ಎಂದೂ ಹೇಳಲಿಲ್ಲ ಎಂದು ಕೆಲ ಆಕಾಂಕ್ಷಿಗಳು ಬೇಸರದಿಂದ ಹೇಳುತ್ತಾರೆ.

Advertisement

ಕಳೆದ ವಿಧಾನ ಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿತ್ತು. ದಾವಣಗೆರೆ ಉತ್ತರ ಕ್ಷೇತ್ರದಲ್ಲಂತೂ ಸ್ವತಃ ಬಿಜೆಪಿಯವರಿಗೆ ಅಚ್ಚರಿ ಉಂಟು ಮಾಡುವಂತಹ ಫಲಿತಾಂಶ ಲಭಿಸಿತ್ತು.

ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿಗೆ ಲೀಡ್‌ ಬಂದಿದ್ದನ್ನು ಮರೆಯಲಿಕ್ಕಾಗದು. ಆ ಭಾಗದಲ್ಲಿ ಲೀಡ್‌ ಬರುತ್ತದೆ ಎಂದು ಊಹೆಯೂ ಮಾಡುವಂತೆಯೇ ಇರಲಿಲ್ಲ. ಅಂತಹ ಕಡೆಯಲ್ಲೂ ಲೀಡ್‌ ಬರುವಂತಾಗಿದ್ದು ಮುಖಂಡರು, ಕಾರ್ಯಕರ್ತರ ಪಡೆಯ ಪರಿಶ್ರಮ ಎನ್ನುವುದು ಅತಿಶಯೋಕ್ತಿ ಏನಲ್ಲ. ಈ ಎಲ್ಲಾ ಕಾರಣದ ಜೊತೆಗೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುವುದು ಪ್ಲಸ್  ಪಾಯಿಂಟ್‌ ಆಗಿತ್ತು. 2013ರ ನಗರಪಾಲಿಕೆ ಚುನಾವಣೆಯಲ್ಲಿ ಅನುಭವಿಸಿದ್ದ ದಯನೀಯ ಸೋಲು ನೆನಪಿಗೂ ಬರದಂತೆ ಗೆಲುವಿನ ಲೆಕ್ಕಾಚಾರದೊಂದಿಗೆ ಮುಖಂಡರು, ಕಾರ್ಯಕರ್ತರ ಪಡೆ ಕಾರ್ಪೋರೇಷನ್‌ ಎಲೆಕ್ಷನ್‌ಗಾಗಿಯೇ ಕೆಲಸ ಮಾಡಿತ್ತು.

ಟಿಕೆಟ್‌ ದೊರಕುವ ಬಗ್ಗೆ ಎಳ್ಳಷ್ಟು ಅನುಮಾನ ಇಲ್ಲ ಎನ್ನುವಂತಿದ್ದವರಿಗೆ ಕೊನೆ ಕ್ಷಣದಲ್ಲಿ ಕೆಲ ಮುಖಂಡರ ಕೈಗೊಂಡಿರುವ ನಿರ್ಧಾರ ಅರಗಿಸಿಕೊಳ್ಳಲಿಕ್ಕೂ ಆಗುತ್ತಿಲ್ಲ. ಕೆಲವರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕೆ ಧುಮುಕಿದ್ದಾರೆ. ಕಾಂಗ್ರೆಸ್‌ ಕೆಲವಾರು ವಾರ್ಡ್‌ಗಳಲ್ಲಿ ಬಲಿಷ್ಠವಾಗಿದೆ. ಅಂತಹ ಕಡೆ ಗೆದ್ದಾಗಿದೆ ಎಂಬ ಲೆಕ್ಕಾಚಾರವೂ ಇದೆ. ಇನ್ನು ಕೆಲವಾರು ವಾರ್ಡ್‌ಗಳಲ್ಲಿ ಸ್ವತಃ ಕಾಂಗ್ರೆಸ್‌ನವರು ಭಾರೀ ಪೈಪೋಟಿ ನಿರೀಕ್ಷೆ ಮಾಡಿದ್ದರು. ಕೆಲವು ವಾರ್ಡ್‌ಗಳು ಕಬ್ಬಿಣದ ಕಡಲೆ… ಆಗಬಲ್ಲವು ಎಂಬ ಲೆಕ್ಕಾಚಾರವೂ ನಡೆದಿತ್ತು.

ಆದರೆ, ಬಿಜೆಪಿ ಈಗ ಟಿಕೆಟ್‌ ನೀಡಿರುವುದನ್ನು ನೋಡಿದರೆ ಕಾಂಗ್ರೆಸ್‌ಗೆ ಅನೇಕ ವಾರ್ಡ್‌ಗಳು ಸುಲಭದ ತುತ್ತಾಗಲಿವೆ ಎಂಬ ಲೆಕ್ಕಾಚಾರ ಹರಿದಾಡುತ್ತಿದೆ. ಏಕೆಂದರೆ ಕೆಲವಾರು ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ತೀರಾ ತೀರಾ ಅಪರಿಚಿತರು. ಕೆಲವು ಕಡೆ ಮುಖಂಡರು, ಕಾರ್ಯಕರ್ತರು ಒಲ್ಲದ ಮನಸ್ಸಿನಿಂದಲೇ ಕೆಲಸ ಮಾಡುವಂತಾಗಿದೆ.

ಸದ್ಯದ ಮಟ್ಟಿಗೆ ಅಭ್ಯರ್ಥಿಗಳ ಪಟ್ಟಿ ನೋಡಿದರೆ ಬಿಜೆಪಿಯವರು ಕಾಂಗ್ರೆಸ್‌ನವರಿಗೆ ಕಾರ್ಪೋರೇಷನ್‌ ಎಲೆಕ್ಷನ್‌ನಲ್ಲಿ ಗೆಲುವನ್ನು ಚಿನ್ನದ ತಟ್ಟೆಯಲ್ಲಿ ಇಟ್ಟುಕೊಟ್ಟಿದ್ದಾರೆ… ಎಂಬ ಮಾತು ನಿಜ ಅನಿಸದೇ ಇರದು.

ಆದರೂ, ರಾಜಕೀಯದಲ್ಲಿ ಏನಾದರೂ ಆಗಬಹುದು ಎಂಬ ಮಾತು ಇದೆ. ಏನೆಲ್ಲಾ ಆದೀತು ಎಂಬುದಕ್ಕೆ ನ.14ರಂದು ಫಲಿತಾಂಶ ಹೊರ ಬರುವರೆಗೆ ಕಾಯಲೇಬೇಕು.

Advertisement

Udayavani is now on Telegram. Click here to join our channel and stay updated with the latest news.

Next