Advertisement

ಯುಗಾದಿ ಉತ್ಸಾಹ, ಜನರ ನಿರುತ್ಸಾಹ

12:57 PM Apr 06, 2019 | Naveen |

ದಾವಣಗೆರೆ: ದಾವಣಗೆರೆ ಜನರು ಎಂದೆಂದೂ ಅನುಭವಿಸದೇ ಇರುವಂತಹ, ಬಸವಳಿಯುವಂತೆ ಮಾಡುತ್ತಿರುವ ಕಡು ಬೇಸಿಗೆಯ ಧಗೆ…, ಹೊಸ ವರ್ಷದ ವಿಶೇಷ ಅಭ್ಯಂಜನ ಸ್ನಾನಕ್ಕಿರಲಿ, ಕುಡಿಯುವುದಕ್ಕೂ ಬೆಂಬಿಡದೆ ಕಾಡುತ್ತಿರುವ ನೀರಿನ ಸಮಸ್ಯೆ…, ಜೇಬು ಸುಡುವಂತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ…, ಜೊತೆಗೆ ಚುನಾವಣಾ ಬಿಸಿಯ ನಡುವೆಯೇ ಯುಗಾದಿ ಬಂದಿದೆ.

Advertisement

ಯುಗ ಎಂದರೆ ಸಂವತ್ಸರ, ಆದಿ ಎಂದರೆ ಪ್ರಾರಂಭದ ಸಮ್ಮಿಳಿತ
ಯುಗಾದಿ.. ಹಿಂದೂ ಸಂವತ್ಸವರದ ಹೊಸ ವರ್ಷ. ಬೇಸಿಗೆ, ಬೆಲೆ ಏರಿಕೆ, ಕುಡಿಯುವ ನೀರಿನ ಸಮಸ್ಯೆ… ಹೀಗೆ ಹತ್ತಾರು ಸಮಸ್ಯೆಗಳ ಮಧ್ಯೆಯೂ ಜನರು ಹೊಸ ವರ್ಷವ ಹೊತ್ತು ತರುವ ಯುಗಾದಿಗೆ ಎಲ್ಲಾ ರೀತಿಯಲ್ಲಿ ಸಿದ್ಧವಾಗಿದ್ದಾರೆ.

ಚೈತ್ರ ಮಾಸದಲ್ಲಿ ಬರುವ ಯುಗಾದಿಯನ್ನು ಸ್ವಾಗತಿಸಲು ಪ್ರಕೃತಿಯೂ ಸಜ್ಜಾಗಿದೆ. ಹಳೆಯ ಎಲೆ ಉದುರಿ, ಹೊಸ ಎಲೆ, ಹೂವುಗಳಿಂದ ಪ್ರಕೃತಿಯೂ ನಳನಳಿಸುತ್ತಿದೆ.

ಆದರೆ, ಯುಗಾದಿ ಸಂಭ್ರಮ ಅಷ್ಟಾಗಿ ಕಂಡು ಬರುತ್ತಿಲ್ಲ. ಕಾರಣ ಎಂದೆಂದೂ ಕಾಣರಿಯದ ಬೇಸಿಗೆಯ ಬಿಸಿಲು ಜನರ ಉತ್ಸಾಹವನ್ನೇ ಬಸಿದು ಹಾಕುತ್ತಿದೆ. ಬಿರು ಬಿಸಿಲಿನ ಪರಿಣಾಮ ಜನರು ಮನೆಯಿಂದ ಹೊರ ಬರಲು ಯೋಚಿಸುವಂತಾಗಿದೆ. ಹಾಗಾಗಿ ಯುಗಾದಿ ಹಿಂದಿನ ದಿನ ಶುಕ್ರವಾರ ಮಧ್ಯಾಹ್ನದ ವೇಳೆ ಮಾರುಕಟ್ಟೆ ಭಣಗುಡುತಿತ್ತು. ಕಿಕ್ಕಿರದ ಜನಸಂದಣಿಯಿಂದ ಕೂಡಿರಬೇಕಾಗಿದ್ದ ಮಾರುಕಟ್ಟೆ ಖಾಲಿ ಖಾಲಿ ಕಂಡು ಬಂದಿತು.

ಇಂತಾ ಬಿಸಿಲ್ನಾಗೆ.. ಜನ ಮನೆ ಬಿಟ್ಟು ಬರೋದೇ ಇಲ್ಲ. ಹಂಗಾಗಿ
ವ್ಯಾಪಾರನೇ ಇಲ್ಲ. ಎಲ್ಲಾ ಡಲ್‌ ಆಗಿದೆ. ಸಾಯಂಕಾಲ ಏನೋ ಒಂದಿಷ್ಟು ವ್ಯಾಪಾರ ಆಗಬಹುದು ಎಂಬ ನಿರೀಕ್ಷೆ ವ್ಯಾಪಾರದ್ದಾಗಿದೆ.

Advertisement

ಎಲ್ಲಾ ಹಬ್ಬಗಳಂತೆ ಈ ಯುಗಾದಿಯಲ್ಲೂ ಅಗತ್ಯ ವಸ್ತುಗಳ ಬೆಲೆ ಕಡು ಬೇಸಿಗೆಯ ಧಗೆಗಿಂತಲೂ ಹೆಚ್ಚು ಸುಡುವಂತಿವೆ. ಕೆಜಿ ಅಕ್ಕಿ ಬೆಲೆ 40, 45 ರಿಂದ 60 ರೂಪಾಯಿಯವರೆಗೆ ಇದೆ. ಬೆಲ್ಲ 40-45, ಸಕ್ಕರೆ 40, ಕಡ್ಲೆ 80, ತೊಗರಿ ಬೇಳೆ 80, ಕೊಬ್ಬರಿ 200, ಮೈದಾ, ರವೆ, ಅವಲಕ್ಕಿ 40, ಮೈದಾಹಿಟ್ಟು 40, ಗೋಧಿಹಿಟ್ಟು 30-35, ಶೇಂಗಾ 90, ಉದ್ದಿನ ಬೇಳೆ 80 ವರೆಗೆ ಇದೆ. ಅಗತ್ಯ ವಸ್ತುಗಳಂತೆ ತರಕಾರಿಯ ಬೆಲೆಯೂ ಹೆಚ್ಚಾಗಿದೆ. ಟೊಮೆಟೋ 15-20, ಬದನೆಕಾಯಿ 20 ರೂಪಾಯಿ ಮಾತ್ರ ಸಸ್ತಾ. ಇನ್ನುಳಿದಂತೆ ಕ್ಯಾರೆಟ್‌, ಹುರುಳಿ, ಬೀನ್ಸ್‌, ಹಸಿ ಮೆಣಸಿನಕಾಯಿ, ಬೆಂಡೆಕಾಯಿ ಎಲ್ಲದರ ಬೆಲೆ 50 ರಿಂದ 60 ರೂಪಾಯಿ ಆಸುಪಾಸು. ಒಂದು ಕಟ್ಟು ಸೊಪ್ಪು 6-8 ರೂಪಾಯಿ. ಈ ಬೆಲೆಗಳು ಏರಿಯಾದಿಂದ ಏರಿಯಾಕ್ಕೆ ಬೇರೆ ಬೇರೆಯದ್ದೇ ಆಗಿರುತ್ತವೆ. ಹಾಗಾಗಿ ಬೆಲೆ ಏರಿಕೆಯೂ ಜನರಲ್ಲಿನ ಹಬ್ಬದ ಆಚರಣೆಯ ಉತ್ಸಾಹವನ್ನು ಕೊಂಚ ಕಡಿಮೆ ಮಾಡುವಂತಿವೆ.

ಯುಗಾದಿ ಹಬ್ಬದ ಸಂಭ್ರಮದ ಜೊತೆಗೆ 2019ರ ಚುನಾವಣಾ ಕಾವು
ಸಹ ನಿಧಾನವಾಗಿ ರಂಗೇರುತ್ತಿದೆ. ಅಭ್ಯರ್ಥಿಗಳು ಗೆಲುವಿನ ಚಂದ್ರ
ದರ್ಶನಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಯಾರಿಗೆ ಗೆಲುವಿನ ಸಿಹಿ, ಯಾರಿಗೆ ಸೋಲಿನ ಕಹಿ… ಎಂಬ ಲೆಕ್ಕಾಚಾರ ಬಲು ಜೋರಾಗಿಯೇ ನಡೆಯುತ್ತಿದೆ.

ಕನ್ನಡದ ವರಕವಿ ದ.ರಾ. ಬೇಂದ್ರೆಯವರು ಹೇಳುವಂತೆ, ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ… ಎನ್ನುವಂತೆ ಯುಗಾದಿ ಎಂದಿನಂತೆ ಮತ್ತೆ ಬಂದಿದೆ. ಜನರು ಸಹ ಸಮಸ್ಯೆ ಏನೇ ಇರಲಿ ಹೊಸ ವರ್ಷ ಸ್ವಾಗತಿಸುವ ಜೋಶ್‌ನಲ್ಲಿದ್ದಾರೆ.

ಶ್ಯಾವಿಗೆ ಡಿಮ್ಯಾಂಡ್‌ ಕುಸಿತ…
ಯುಗಾದಿ ಹಬ್ಬದ ವಿಶೇಷ ಖಾದ್ಯ ಎಂದರೆ ಶ್ಯಾವಿಗೆ ಪಾಯಸ. ಬೇವು-ಬೆಲ್ಲದ ಜೊತೆಗೆ ಶ್ಯಾವಿಗೆ ಪಾಯಸ ಸವಿಯುವುದು
ದಾವಣಗೆರೆ ಭಾಗದಲ್ಲಿನ ಸಂಪ್ರದಾಯ. ಯುಗಾದಿ ಬಂದಿತೆಂದರೆ ದಾವಣಗೆರೆಯಲ್ಲಿನ ನೂರಾರು ಶ್ಯಾವಿಗೆ ತಯಾರಿಕಾ
ಕೇಂದ್ರಗಳು ಫುಲ್‌ ಬ್ಯುಸಿ. ಆದರೆ, ಈಚೆಗೆ ಅಂತಹ ವಾತಾವರಣ ನಿಧಾನವಾಗಿ ಕಾಣೆಯಾಗುತ್ತಿದೆ. ಹಬ್ಬಕ್ಕಾಗಿಯೇ ಶ್ಯಾವಿಗೆ
ಮಾಡಿಸಿಡುವುದು ಕಡಿಮೆ ಆಗುತ್ತಿದೆ. ಎಲ್ಲವೂ ಇನ್‌ಸ್ಟಂಟ್‌ ಆಗುತ್ತಿರುವ ಕಾರಣಕ್ಕೆ ಶ್ಯಾವಿಗೆಗೆ ಡಿಮ್ಯಾಂಡ್‌ ಕಡಿಮೆ ಆಗುತ್ತಿದೆ.

ಯುಗಾದಿ…ತಗಾದಿ…
ಯುಗಾದಿ ಯಾವಾಗಲೂ ತಗಾದಿ ಎಂಬ ಮಾತಿದೆ. ಅಂದರೆ ಯುಗಾದಿ ಬಹು ಮುಖ್ಯವಾದ ಚಂದ್ರ ದರ್ಶನ ಯಾವಾಗ
ಎನ್ನುವುದೇ ಆನೇಕರಲ್ಲಿ ಗೊಂದಲಕ್ಕೆ ಕಾರಣವಾಗುತ್ತಿದೆ. ಕೆಲವರು ಬೇವು-ಬೆಲ್ಲ, ಚಂದ್ರ ದರ್ಶನ ಪ್ರತ್ಯೇಕವಾಗಿ ಮಾಡಿದರೆ.
ಇನ್ನು ಕೆಲವರು ಒಂದೇ ದಿನ ಎರಡನ್ನೂ ಮಾಡುತ್ತಾರೆ. ಈ ಬಾರಿಯೂ ಅದೇ ಆಗಿದೆ. ಕೆಲವರು ಶುಕ್ರವಾರವೇ ಬೇವು-ಬೆಲ್ಲ ಮಾಡಿ, ಶನಿವಾರ ಚಂದ್ರ ದರ್ಶನಕ್ಕೆ ಸಜ್ಜಾಗಿದ್ದರೆ, ಕೆಲವರು
ಭಾನುವಾರವೇ ಚಂದ್ರ ಕಾಣೋದು ಎಂಬ ಲೆಕ್ಕಾಚಾರದಲ್ಲೇ ಹಬ್ಬಕ್ಕೆ ಸಜ್ಜಾಗಿದ್ದಾರೆ.

ರಾ.ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next