ದಾವಣಗೆರೆ: ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುವರೇ ಹೆಚ್ಚು. ಸರ್ಕಾರಿ ಶಾಲೆಯ ಶಿಕ್ಷಕ ಸಮೂಹ ಒಗ್ಗೂಡಿ ಮಕ್ಕಳಿಗೆ ಏನಾದರೂ ಒಳ್ಳೆಯದನ್ನು ಮಾಡಲೇಬೇಕು ಎಂಬ ಬದ್ಧತೆಯಿಂದ ಕಾರ್ಯೋನ್ಮುಖರಾದರೆ ಶಾಲೆಯನ್ನೇ ಜ್ಞಾನ ದೇಗುಲ, ಯೋಗ ಮಂದಿರವಾಗಿಯೂ ಮಾಡಬಹುದು ಎಂಬುದಕ್ಕೆ ಸಾಕ್ಷಿ ನಿಟುವಳ್ಳಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ!.
Advertisement
ಹೌದು, ಹಲವಾರು ವಿಶೇಷತೆಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಾಲೆಯಲ್ಲಿ ಜೂ.3 ರಂದು ಒಟ್ಟಾರೆ 15 ಲಕ್ಷ ಅನುದಾನದ ಯೋಗ ಮಂದಿರದ ಶಂಕುಸ್ಥಾಪನೆ ನೆರವೇರಲಿದೆ. ಇನ್ನು ಮುಂದೆ ಪ್ರತಿ ನಿತ್ಯ ಯೋಗಾಭ್ಯಾಸದೊಂದಿಗೆ ಓಂಕಾರದ ನಿನಾದ… ಸದಾ ಮೊಳಗಲಿದೆ.
Related Articles
Advertisement
ಕಳೆದ ಶೈಕ್ಷಣಿಕ ಸಾಲಿನಲ್ಲಿ ಯೋಗ, ಧ್ಯಾನ, ಪ್ರಾಣಾಯಾಮದ ಕುರಿತು ಒಂದು ಕಾರ್ಯಕ್ರಮ ಏರ್ಪಡಿಸಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಆ ಕಾರ್ಯಕ್ರಮದ ಬಗ್ಗೆ ವಿಶೇಷ ಆಸ್ಥೆ ವಹಿಸಿದ್ದರು. ಆಗ ನಮ್ಮ ಶಾಲೆಯಲ್ಲಿ ಪ್ರತಿ ನಿತ್ಯ ಯೋಗ, ಧ್ಯಾನ, ಪ್ರಾಣಾಯಾಮದ ಹೇಳಿಕೊಟ್ಟರೆ ಹೇಗೆ ಎಂಬ ಆಲೋಚನೆ ಬಂದಿತು. ಎಲ್ಲಾ ಶಿಕ್ಷಕರೊಡನೆ ಚರ್ಚೆ ನಡೆಸಿದಾಗ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಯಿತು. ಅದುವೇ ಯೋಗ ಮಂದಿರಕ್ಕೆ ಮೂಲ ಪ್ರೇರಣೆ ಎಂದು ಯೋಗ ಮಂದಿರ ನಿರ್ಮಾಣದ ಹಿಂದಿನ ಕಥೆಯ ಬಗ್ಗೆ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಕೆ.ಟಿ. ಚಂದ್ರಪ್ಪ ಮಾಹಿತಿ ನೀಡುತ್ತಾರೆ.
ನಾನು ಸಹ ಪ್ರತಿ ನಿತ್ಯ ಶ್ರೀ ಶಿರಡಿ ಸಾಯಿ ಯೋಗ ಮಂದಿರದಲ್ಲಿ ಯೋಗಾಭ್ಯಾಸ ಮಾಡುತ್ತೇನೆ. ಅಲ್ಲಿನ ಸದಸ್ಯರೊಂದಿಗೆ ಯೋಗ ಮಂದಿರದ ಬಗ್ಗೆ ಪ್ರಸ್ತಾಪಿಸಿದಾಗ ಕಣಕುಪ್ಪಿ ಕರಿಬಸಪ್ಪ, ಅಜ್ಜಪ್ಪ ಒಳಗೊಂಡಂತೆ ಇತರರು ಪ್ರತಿ ನಿತ್ಯ ಯೋಗ, ಧ್ಯಾನ, ಪ್ರಾಣಾಯಾಮ ಹೇಳಿಕೊಡುವ ಭರವಸೆ ನೀಡಿದ್ದಾರೆ. ಅಲ್ಲದೆ ಶಿರಡಿ ಸಾಯಿ ಯೋಗ ಮಂದಿರದ ಅನೇಕರು ಜನ್ಮದಿನ, ವಿವಾಹ ವಾರ್ಷಿಕೋತ್ಸವ ಇತರೆ ವಿಶೇಷ ಸಂದರ್ಭದಲ್ಲಿ ಬಳಕೆ ಮಾಡುವ ಹಣದಲ್ಲೇ ಯೋಗಾಭ್ಯಾಸಕ್ಕಾಗಿ ಅನುಕೂಲ ಆಗುವಂತೆ ಮ್ಯಾಟ್‌ಗಳನ್ನು ಕೊಡಿಸುತ್ತಿದ್ದಾರೆ. ಈಗಾಗಲೇ 25ಕ್ಕೂ ಹೆಚ್ಚು ಮ್ಯಾಟ್ ನೀಡಿದ್ದಾರೆ ಎಂದು ತಿಳಿಸಿದರು.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎ. ರವೀಂದ್ರನಾಥ್ ಅವರಲ್ಲಿ ನಮ್ಮ ಶಾಲೆಯಲ್ಲಿ ಯೋಗ ಮಂದಿರ ನಿರ್ಮಾಣದ ಪ್ರಸ್ತಾವನೆ ಮಾಡುತ್ತಿದ್ದಂತೆಯೇ ಒಮ್ಮೆಲೆ ಒಪ್ಪಿಗೆ ಸೂಚಿಸಿದ್ದು ಮಾತ್ರವಲ್ಲ 10 ಲಕ್ಷ ಅನುದಾನ ನೀಡಿದ್ದಾರೆ. ಇನ್ನೂ 5 ಲಕ್ಷ ಅನುದಾನ ಬಿಡುಗಡೆ ಮಾಡುವುದಾಗಿಯೂ ತಿಳಿಸಿದ್ದಾರೆ ಎಂದು ಪ್ರೌಢಶಾಲಾ ಮುಖ್ಯ ಶಿಕ್ಷಕ ಡಿ.ದುರುಗಪ್ಪ ತಿಳಿಸಿದರು.
ನಿಟುವಳ್ಳಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಜೂ.3 ರಂದು ಯೋಗ ಮಂದಿರದ ಶಂಕುಸ್ಥಾಪನೆ ನೆರವೇರಲಿದೆ. ಮುಂದಿನ ದಿನಗಳಲ್ಲಿ ಸುಂದರ, ಸುಸಜ್ಜಿತ ಯೋಗ ಮಂದಿರ ತಲೆ ಎತ್ತಲಿದೆ.
ನಿಜಕ್ಕೂ ಒಳ್ಳೆಯ ಚಿಂತನೆನಮ್ಮ ಶಾಲೆಗೆ ಸಾಕಷ್ಟು ಬಡತನ ಹಿನ್ನೆಲೆಯ ವಿದ್ಯಾರ್ಥಿಗಳೇ ಬರುತ್ತಾರೆ. ಮಕ್ಕಳು ಶಾಂತಿ, ಸಮಾಧಾನ, ನೆಮ್ಮದಿ ಮತ್ತು ಏಕಾಗ್ರತೆಯಿಂದ ಕಲಿಯಬೇಕು ಎನ್ನುವ ಕಾರಣಕ್ಕಾಗಿಯೇ ಯೋಗಮಂದಿರ ಕಟ್ಟುವ ಚಿಂತನೆ ಬಂದಿತು. ಎಲ್ಲಾ ಶಿಕ್ಷಕರು ಈ ಕೆಲಸಕ್ಕೆ ಮುಂದಾಗಿದ್ದಾರೆ. ಶಾಲಾಭಿವೃದ್ಧಿ ಸಮಿತಿಯಿಂದಲೂ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆರ್. ತಿಪ್ಪೇಸ್ವಾಮಿ. ಯೋಗಮಂದಿರ ಒಳ್ಳೆಯದು…
ನಮ್ಮ ಸ್ಕೂಲ್ನಲ್ಲಿ ಯೋಗ ಮಂದಿರ ಕಟ್ಟುತ್ತಿರುವುದು ಬಹಳ ಒಳ್ಳೆಯದು. ದಿನ ಯೋಗ, ಧ್ಯಾನ, ಪ್ರಾಣಾಯಾಮ ಮಾಡುವುದರಿಂದ ಕಾನ್‌ಸೆಂಟ್ರೇಷನ್ ಬರುತ್ತದೆ. ಪಾಠಗಳನ್ನ ಆಸಕ್ತಿಯಿಂದ ಕಲಿಯಲು ಅನುಕೂಲ ಆಗುತ್ತದೆ. ನಮ್ಮ ಆರೋಗ್ಯವನ್ನೂ ಚೆನ್ನಾಗಿ ಕಾಪಾಡಿಕೊಳ್ಳಬಹುದು.
•ಆರ್. ಬಿಂದು
10ನೇ ತರಗತಿ ವಿದ್ಯಾರ್ಥಿನಿ.