ದಾವಣಗೆರೆ: ಬಹುತೇಕ ಸುಶಿಕ್ಷಿರಲ್ಲೇ ತಂಬಾಕು ಉತ್ಪನ್ನಗಳ ಬಳಕೆ ಹೆಚ್ಚಾಗಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಶೈಲಜಾ ಬಸವರಾಜ್ ಆತಂಕ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ತಂಬಾಕು ನಿಯಂತ್ರಣ ಕೋಶ, ಸಿ.ಜಿ. ಸ್ಕೂಲ್ ಆಫ್ ನರ್ಸಿಂಗ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರಗಳು ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸದಿದ್ದರೂ ಒಂದು ವಾರದ ಮಟ್ಟಿಗಾದರು ನಿಷೇಧಿಸಿದರೆ ತಂಬಾಕು ಉತ್ಪನ್ನಗಳ ಬಳಕೆ ಕಡಿಮೆ ಆಗಬಹುದು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್. ಬಡಿಗೇರ, ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್. ತ್ರಿಪುಲಾಂಭ, ಜಿಲ್ಲಾ ಆಯುಷ್ ಅಧಿಕಾರಿ ಡಾ| ಯು. ಸಿದ್ದೇಶ್, ಡಾ| ರಾಜೇಶ್ವರಿ ಅಣ್ಣಿಗೇರಿ, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಡಾ| ಕೆ.ಎಚ್. ಗಂಗಾಧರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಚ್. ಉಮಾಪತಿ, ಡಾ| ತಿಪ್ಪೇಸ್ವಾಮಿ, ಡಾ| ಜಿ.ಡಿ. ರಾಘವನ್, ಡಾ| ಮಾಜೆಗೌಡ್ರು ಇತರರು ಇದ್ದರು. ತಂಬಾಕು ಉತ್ಪನ್ನಗಳಿಗೆ ಇಂದೇ ವಿದಾಯ ಹೇಳಿ.. ತಂಬಾಕು ತಿನ್ನುವುದು ನಿನ್ನ ಚಟ, ಮಾಡುವುದು ಬಾಳನ್ನು ಹರಿದ ಪುಟ.. ತಂಬಾಕು ರಹಿತ ಜೀವನ… ಆರೋಗ್ಯಕ್ಕೆ ಸೋಪಾನ.. ಸೇದಬೇಡಿ ಸೇದಬೇಡಿ… ಬೀಡಿ ಸಿಗರೇಟ್ ಸೇದಬೇಡಿ.. ಬನ್ನಿ ಬನ್ನಿ ತಂಬಾಕು ಮುಕ್ತ ಸಮಾಜ ನಿರ್ಮಿಸೋಣ ಬನ್ನಿ.. ಎಂಬ ಘೋಷಣೆಗಳೊಂದಿಗೆ ಜಾಥಾ ನಡೆಸಲಾಯಿತು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಒಂದು ವರ್ಷದೊಳಗಾಗಿ ತಂಬಾಕು ಮುಕ್ತ ದಾವಣಗೆರೆ ಜಿಲ್ಲೆಯನ್ನಾಗಿಸುವ ಪರಿಕಲ್ಪನೆಯೊಂದಿಗೆ ಸಿದ್ಧಡಿಸಲಾದ ಯೋಜನಾ ಪುಸ್ತಕವನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಶೈಲಜಾ ಬಸವರಾಜ್ ಬಿಡುಗಡೆ ಮಾಡಿದರು.