Advertisement

ಹಿಮೋಫಿಲಿಯಾ ಪೀಡಿತರಿಗೆ ಬೇಕಿದೆ ನೆರವು

10:02 AM Jun 23, 2019 | Naveen |

ದಾವಣಗೆರೆ: ಹಿಮೋಫಿಲಿಯಾ ಸಮಸ್ಯೆಯಿಂದ ಬಳಲುವವರ ಚಿಕಿತ್ಸೆ ಮತ್ತು ಪುನರ್ವಸತಿ ಸಂಬಂಧ ಸರ್ಕಾರ ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯವಿದೆ ಎಂದು ಚಿತ್ರನಟಿ ಭಾವನಾ ರಾಮಣ್ಣ ಅಭಿಪ್ರಾಯಪಟ್ಟಿದ್ದಾರೆ.

Advertisement

ಶನಿವಾರ, ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯಲ್ಲಿ ವಿಶ್ವ ಹಿಮೋಫಿಲಿಯಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮಾಧ್ಯಮಗಳ ಮೂಲಕ ಹಿಮೋಫಿಲಿಯಾ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸುವ ಜೊತೆಗೆ ರೋಗಿಗಳ ಆರೈಕೆ ಹಾಗೂ ಅವರ ಪುನರ್ವಸತಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಮೂಲಕ ಡಾ|ಸುರೇಶ್‌ ಹನಗವಾಡಿ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಾ ಹಿಮೋಫಿಲಿಯಾದಿಂದ ಬಳಲುವವರ ಬಾಳಿನಲ್ಲಿ ಬೆಳಕಾಗಿದ್ದಾರೆ. ಇದೆಲ್ಲಕ್ಕಿಂತ ಮಿಗಿಲಾಗಿ ಸರ್ಕಾರಗಳು ಕೂಡ ತಮ್ಮ ಜವಾಬ್ದಾರಿ ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬೇಕಿದೆ ಎಂದು ಹೇಳಿದರು.

ಹಿಮೋಫಿಲಿಯಾ ರೋಗಿಗಳ ಬಗ್ಗೆ ಕೆಲಸ ಮಾಡಲು ತಾವೂ ಸಹ ಸಿದ್ಧರಿದ್ದು, ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಚಿಕಿತ್ಸೆ ಸಂಬಂಧ ತಿಳಿವಳಿಕೆ ನೀಡುವ ಸಾಕ್ಷ್ಯಚಿತ್ರ ನಿರ್ಮಿಸುವುದು ಸೂಕ್ತ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು ಸರ್ಕಾರಿ ಆಸ್ಪತ್ರೆಗಳಲ್ಲಿ ಡಾಕ್ಯುಮೆಂಟರಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಬಸವರಾಜೇಂದ್ರ, ಹಿಮೋಫಿಲಿಯಾ ಮತ್ತು ಥೆಲ್ಸೇಮಿಯಾ ರೋಗವನ್ನು ಅಂಗವೈಕಲ್ಯ ಎಂಬುದಾಗಿ ಸರ್ಕಾರ ಪರಿಗಣಿಸಿದೆ. ಸರ್ಕಾರದ ಎಲ್ಲಾ ಇಲಾಖೆ ಕೂಡ ಅಂಗವಿಕಲರ ಅಭ್ಯುದಯಕ್ಕಾಗಿ ವಾರ್ಷಿಕ ಶೇ.5ರಷ್ಟು ಅನುದಾನ ವೆಚ್ಚಮಾಡಬೇಕು. ಈ ಬಗ್ಗೆ ಒಂದೆರಡು ದಿನಗಳಲ್ಲಿ ಜಿಲ್ಲಾ ಪಂಚಾಯತ್‌ ಕ್ರಿಯಾಯೋಜನೆ ಸಿದ್ಧವಾಗಲಿದೆ. ಈ ಸಂದರ್ಭದಲ್ಲಿ ಹಿಮೋಫಿಲಿಯಾ ಮತ್ತು ಥೆಲ್ಸೇಮಿಯಾ ರೋಗಿಗಳ ನಿರ್ದಿಷ್ಟ ಸಂಖ್ಯೆ ಲಭ್ಯವಾದರೆ ಕ್ರಿಯಾ ಯೋಜನೆಯಲ್ಲಿ ಹೆಚ್ಚಿನ ಅವಕಾಶ ದೊರಕಿಸಿಕೊಡಲಾಗುವುದು ಎಂದರು.

Advertisement

ಡಾ| ಸುರೇಶ್‌ ಹನಗವಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಏಪ್ರಿಲ್ 17 ರಂದು ಹಿಮೋಫಿಲಿಯಾ ದಿನ ಆಚರಿಸಬೇಕಿತ್ತು. ಆದರೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ಇಂದು ಆಯೋಜಿಸಲಾಗಿದೆ. 1989ರಲ್ಲಿ ನಗರದಲ್ಲಿ ಹಿಮೋಫಿಲಿಯಾ ಸೊಸೈಟಿ ಸಣ್ಣದಾಗಿ ಆರಂಭಿಸಲಾಯಿತು. ಇದೀಗ ಸಂಸ್ಥೆ ಬೃಹದಾಕಾರವಾಗಿ ಬೆಳೆಯಲು ಹತ್ತಾರು ಜನರ ಪರಿಶ್ರಮವಿದೆ. ಭವಿಷ್ಯದಲ್ಲಿ ಒಂದೇ ಸೂರಿನಡಿ ರೋಗಿಗಳಿಗೆ ಚಿಕಿತ್ಸೆ, ಪುನರ್ವಸತಿ, ತರಬೇತಿ,ಎಲ್ಲ ಅಗತ್ಯ ಸೌಲಭ್ಯ ಕಲ್ಪಿಸುವ ಉದ್ದೇಶವಿದೆ ಎಂದರು.

ಕಲಾವಿದ ಆರ್‌.ಟಿ.ಅರುಣ್‌ಕುಮಾರ್‌ ಮಾತನಾಡಿ, ಹಿಮೋಫಿಲಿಯಾ ಪೀಡಿತ ಮಕ್ಕಳ ಚೇತರಿಕೆಯಲ್ಲಿ ತಾಯಂದಿರ ಪಾತ್ರ ಅತ್ಯಂತ ದೊಡ್ಡದು. ಕುಟಂಬದ ಎಲ್ಲ ಸದಸ್ಯರೂ ಹಿಮೋಫಿಲಿಯಾ ಪೀಡಿತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದು ಮನವಿ ಮಾಡಿದರು.

ಕಿರುವಾಡಿ ಗಿರಿಜಮ್ಮ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಎಎಸ್‌ಪಿ ರವಿ ನಾರಾಯಣ, ಡಾ| ಪಿ.ವಿ.ಭಂಡಾರಿ, ಸುರೇಂದ್ರಬಾಬು, ಡಾ| ಮೀರಾ ಹನಗವಾಡಿ, ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳು ಮತ್ತು ಅವರ ಪೋಷಕರಿಗೆ ನಿತ್ಯ ಊಟ ನೀಡುವ ಸಂತೃಪ್ತಿ ಯೋಜನೆಯ ಜವಾಬ್ದಾರಿ ಹೊತ್ತಿರುವ ಸೂರ್ಯಪ್ರಕಾಶ್‌ ದಂಪತಿಯನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next