Advertisement
ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆ, ಜಿಲ್ಲಾ ವಕೀಲರ ಸಂಘ ಹಾಗೂ ಕಟ್ಟಡ ಕಾರ್ಮಿಕರ ಸಂಘದ ಸಂಯುಕ್ತಾಶ್ರಯದಲ್ಲಿ ಬುಧವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಕೇವಲ ಅಧಿಕಾರಿಗಳಿಂದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರ ಬೇಕು. ಎಲ್ಲಿಯವರೆಗೆ ಸಾರ್ವಜನಿಕರು ಪ್ರಬುದ್ಧರಾಗುವುದಿಲ್ಲವೋ ಅಲ್ಲಿಯವರೆಗೆ ಈ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲವೆಂದರು.
Related Articles
Advertisement
ಬಾಲ ಕಾರ್ಮಿಕ ಪದ್ಧತಿ ವಿರುದ್ಧದ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಎಲ್.ಎಚ್.ಅರುಣ್‌ಕುಮಾರ್, ಇಂದಿಗೂ ನಾವು ಭಿಕ್ಷೆ ಬೇಡುವ ಮಕ್ಕಳನ್ನು ಕಾಣುತ್ತಿರುವುದು ಶೋಚನೀಯ. ಉತ್ಪಾದನಾ ವೆಚ್ಚ ಕಡಿತಗೊಳಿಸಲು ಮಕ್ಕಳನ್ನು ಉದ್ಯಮದಲ್ಲಿ ದುಡಿಯಲು ಬಳಸಿಕೊಳ್ಳಲಾಗುತ್ತಿದೆ. ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ನಾವೆಲ್ಲಾ ಶ್ರಮಿಸಬೇಕಿದೆ ಎಂದರು.
ಸಹಾಯಕ ಕಾರ್ಮಿಕ ಆಯುಕ್ತ ಮೊಹಮ್ಮದ್ ಜಹೀರ್ ಬಾಷಾ ಪ್ರಾಸ್ತಾವಿಕವಾಗಿ ಮಾತನಾಡಿ, ಬಾಲಕಾರ್ಮಿಕ ಪದ್ದತಿ ವಿರೋಧದ ಕುರಿತ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಒಡಂಬಡಿಕೆಯನ್ವಯ ಬಾಲಕಾರ್ಮಿಕ ವಿರೋಧಿ ದಿನ ಆಚರಿಸಲಾಗುತ್ತಿದೆ. ಬಾಲಕಾರ್ಮಿಕ ಪದ್ಧತಿ ಕುರಿತಾದ ಕಾಯ್ದೆ 1986ರಲ್ಲಿ ಜಾರಿಗೆ ಬಂದಿದ್ದು, 2016ರಲ್ಲಿ ತಿದ್ದುಪಡಿಯಾಗಿದೆ. ಕಾರ್ಮಿಕ ಇಲಾಖೆ ಸೇರಿ ಇತರೆ 11 ಇಲಾಖೆಗಳ ಅಧಿಕಾರಿಗಳು ಈ ಪಿಡುಗು ನಿರ್ಮೂಲನೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲಿಗೆ ಹೋಲಿಸಿದರೆ ಈಗ ಈ ಪಿಡುಗು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದರೆ, ಸಂಪೂರ್ಣ ನಿರ್ಮೂಲನೆ ಆಗಿಲ್ಲ. ಯುನಿಸೆಫ್ ದಾವಣಗೆರೆಯಲ್ಲಿಯೂ ಈ ಪಿಡುಗಿನ ನಿರ್ಮೂಲನೆಗೆ ಕೆಲಸ ಮಾಡಿದೆ. ಜಿಲ್ಲೆಯಲ್ಲಿ 5 ಬಾಲಕಾರ್ಮಿಕರ ಶಾಲೆಗಳನ್ನು ತೆರೆಯಲಾಗಿದ್ದು 989 ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ಮಾತನಾಡಿ, 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸುವುದು ಪೋಷಕರು ಸೇರಿದಂತೆ ನಮ್ಮೆಲ್ಲರ ಹೊಣೆಯಾಗಿದೆ. ಶಿಕ್ಷಣದಿಂದ ಮಾತ್ರ ಬಾಲಕಾರ್ಮಿಕತೆಗೆ ಮುಕ್ತಿ ಹಾಡಬಹುದಾಗಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್ ಮಾತನಾಡಿ, ದೇಶ ಅಭಿವೃದ್ಧಿ ಹೊಂದಬೇಕಾದರೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಬಹು ಮುಖ್ಯ. ಹಾಗಾಗಿ ಮಕ್ಕಳ ಹಕ್ಕುಗಳ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಪ್ರಭಾರ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಡಿಎಚ್ಓ ಡಾ| ತ್ರಿಪುಲಾಂಬ, ಜಿಲ್ಲಾ ವಿಕಲಚೇತನರು ಹಾಗು ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣ ಅಧಿಕಾರಿ ಶಶಿಧರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ಕಾರ್ಯಕ್ರಮದಲ್ಲಿದ್ದರು.