Advertisement

ಮನಸ್ಸು ಹತೋಟಿಯಿಂದ ಏಡ್ಸ್‌ ತಡೆ

11:32 AM Dec 04, 2019 | Naveen |

ದಾವಣಗೆರೆ: ಆರೋಗ್ಯವೇ ಭಾಗ್ಯ. ಅದನ್ನು ಖರೀದಿಸಲು ಮತ್ತು ಯಾರಿಂದಲೂ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಯೌವನಾವಸ್ಥೆಯಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಏಡ್ಸ್‌ ಎಂಬ ಮಾರಕ ಕಾಯಿಲೆಯಿಂದ ದೂರವಿರಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು.ಎನ್‌.ಬಡಿಗೇರ್‌ ಕಿವಿಮಾತು ಹೇಳಿದ್ದಾರೆ.

Advertisement

ಮಂಗಳವಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದಾವಣಗೆರೆ, ಜಿಲ್ಲಾ ಏಡ್ಸ್‌ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ದುರ್ಗಾಶಕ್ತಿ ಏಡ್ಸ್‌ ತಡೆಗಟ್ಟುವ ಮಹಿಳಾ ಸಂಘ, ಅಭಯ ಸ್ಪಂದನ ಸ್ವಯಂ ಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಏಡ್ಸ್‌ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಏಡ್ಸ್‌ ಹೋರದೇಶದಿಂದ ಬಂದಿದ್ದು, ಈ ಕಾಯಿಲೆ ಕುರಿತು ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ರೋಗಬಂದ ನಂತರ ಪರಿತಪಿಸುವ ಬದಲು ಅದು ಬಾರದಂತೆ ಮುನ್ನೆಚರಿಕೆ ವಹಿಸಬೇಕು. ಎಚ್‌.ಐ.ವಿ. ಸೋಂಕು ಪತ್ತೆಯಾದ ನಂತರ ಕುಗ್ಗಿ ಹೋಗದೇ ಅದಕ್ಕೆ ಪರಿಹಾರ ಕಂಡುಕೊಂಡು ಬದುಕಬೇಕು ಎಂದು ಹೇಳಿದರು.

ಜಿಲ್ಲಾ ಏಡ್ಸ್‌ ಪ್ರತಿಬಂಧಕ ಮತ್ತು ನಿಯಂತ್ರಣಾಧಿಕಾರಿ ಡಾ|ಕೆ.ಎಚ್‌.ಗಂಗಾಧರ್‌ ಪ್ರಾಸ್ತಾವಿಕವಾಗಿ ಮಾತನಾಡಿ, 1984ರಲ್ಲಿ ಏಡ್ಸ್‌ ರೋಗವು ಮೊದಲ ಬಾರಿಗೆ ಬೆಳಕಿಗೆ ಬಂದಿದ್ದು, ಏಡ್ಸ್‌ ಕುರಿತು ವಿಶ್ವದಾದ್ಯಂತ ಅರಿವು ಮೂಡಿಸುವ ಉದ್ದೇಶದಿಂದ 1988ರಿಂದ ವಿಶ್ವ ಏಡ್ಸ್‌ ದಿನ ಆಚರಿಸಲಾಗುತ್ತಿದೆ. ಈ ಮಾರಣಾಂತಿಕ ಕಾಯಿಲೆ ಬಾರದಂತೆ ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕೆಂಬುದನ್ನು ದಿನಾಚರಣೆಯಲ್ಲಿ ತಿಳಿಸಲಾಗುತ್ತದೆ ಎಂದರು.

2023ಕ್ಕೆ ಎಚ್‌.ಐ.ವಿ.ಮುಕ್ತ ಸಮಾಜ ನಿರ್ಮಿಸಲು ಅನೇಕ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಡಬ್ಲ್ಯೂಎಚ್‌ಓ ಮತ್ತು ಯುಎನ್‌ಎ ಜೊತೆಯಾಗಿ ಏಡ್ಸ್‌ ವಿರುದ್ಧ ಹೋರಾಡುತ್ತಿದ್ದು, ಎಲ್ಲಾ ಎ.ಆರ್‌.ಟಿ. ಗಳಲ್ಲಿ ಚಿಕಿತ್ಸೆ ಪಡೆಯಬೇಕು. ಶೇ.90 ಜನತೆ ಎಚ್‌.ಐ.ವಿ. ಪರೀಕ್ಷೆ ಮಾಡಿಸಿಕೊಂಡಿರಬೇಕು ಎಂಬ ಉದ್ದೇಶ ಮತ್ತು ಪರಿಕಲ್ಪನೆ ಹೊಂದಲಾಗಿದೆ. ಏಡ್ಸ್‌ಮುಕ್ತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಅತಿ ಮುಖ್ಯವಾಗಿದೆ ಎಂದು ತಿಳಿಸಿದರು.

Advertisement

ರಾಜ್ಯ ಕಾನೂನು ಸೇವಾ ಪ್ರಾ ಧಿಕಾರದ ಸದಸ್ಯ ಎಲ್‌.ಎಚ್‌.ಅರುಣಕುಮಾರ್‌ ಮಾತನಾಡಿ, ಏಡ್ಸ್‌ ಎಂಬ ಮಾರಣಾಂತಿಕ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಈ ದಿನ ಆಚರಿಸಲಾಗುತ್ತಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು “ಸಮುದಾಯಗಳು ಬದಲಾವಣೆಗಳನ್ನು ಉಂಟುಮಾಡುತ್ತವೆ’ ಎಂಬ ಘೋಷವಾಕ್ಯವು ಉಪಯುಕ್ತವಾಗಿದೆ. ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯವನ್ನು ಸಮುದಾಯಗಳು ಮಾಡಬೇಕಿದೆ ಎಂದು ತಿಳಿಸಿದರು.

ವಕೀಲ ಆಂಜನೇಯ ಗುರೂಜಿ ಮಾತನಾಡಿ, ಮದುವೆ ನೋಂದಣಿ ಮಾಡಿಸಲು ಎಚ್‌.ಐ.ವಿ ಪರೀಕ್ಷೆಯ ಪ್ರಮಾಣ ಪತ್ರ ಸಲ್ಲಿಸಬೇಕೆಂಬ ಕಾನೂನು ಜಾರಿಗೆ ಬರುವಂತಾಗಬೇಕು ಎಂದರು ಚಿಗಟೇರಿ ಜಿಲ್ಲಾ ಆಸ್ಪತ್ರೆ ಅ ಧೀಕ್ಷಕ ಡಾ| ಎಲ್‌. ನಾಗರಾಜ್‌ ಮಾತನಾಡಿ, ಭಾರತವು ಏಡ್ಸ್‌ ಕಾಯಿಲೆ ಹೊಂದಿರುವ ರಾಷ್ಟ್ರಗಳ ಪೈಕಿ 3ನೇ ಸ್ಥಾನದಲ್ಲಿದೆ. ಈ ಸ್ಥಾನ ಹೀಗೆ ಇದ್ದಲ್ಲಿ ಅಪಾಯವಿದೆ. ಏಡ್ಸ್‌ ರೋಗವು ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಗುಣಾತ್ಮಕ ಜೀವನ ಮಟ್ಟವನ್ನು ಕಡಿಮೆ ಮಾಡುತ್ತದೆ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಗೆ ಏಡ್ಸ್‌ ಸೋಂಕು ಕಂಡು ಬಂದರೆ ಆ ಕುಟುಂಬದ ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನ ಕೆಳ ಮಟ್ಟಕ್ಕೆ ಕುಸಿಯುತ್ತದೆ.

ಆದ್ದರಿಂದ ಸಾರ್ವಜನಿಕರು ಮತ್ತು ಎನ್‌ಜಿಒ ಗಳು ಒಟ್ಟಾಗಿ ಜನರಲ್ಲಿ ಏಡ್ಸ್‌ನ ಕುರಿತು ತಿಳಿವಳಿಕೆ ಮೂಡಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ| ಎಚ್‌.ಎಸ್‌. ರಾಘವೇಂದ್ರಸ್ವಾಮಿ ಮಾತನಾಡಿ, ಆರೋಗ್ಯಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ಯಾವುದೇ ಸಂಕೋಚವಿಲ್ಲದೇ ಸಾರ್ವಜನಿಕರು ಪಡೆಯಬೇಕು. ಏಡ್ಸ್‌ ಕಾಯಿಲೆಯು ಯಾವ ರೀತಿ ಬರುತ್ತದೆ ಎಂಬುದನ್ನು ಸಾರ್ವಜನಿಕರು ತಿಳಿಯಬೇಕು. ಒಂದು ವೇಳೆ ಇಂತಹ ಕಾಯಿಲೆಗಳು ಬಂದರೆ ಎದುರಿಸಲು ಮಾನಸಿಕವಾಗಿ ಸಿದ್ಧರಾಗಬೇಕು. ಅಸುರಕ್ಷಿತ ಲೈಂಗಿಕತೆ ಮತ್ತು ಸಿರೀಂಜ್‌ ಬಳಕೆಯ ಸಂದರ್ಭದಲ್ಲಿ ಜನತೆ ಜಾಗೃತರಾಗಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭದ್ರಾವತಿ ತಾಲೂಕಿನ ಹನುಮಂತಾಪುರ ಗ್ರಾಮದ ಶ್ರೀ ವೀರಭದ್ರೇಶ್ವರ ವೀರಗಾಸೆ ತಂಡದವರು ಏಡ್ಸ್‌ ಕುರಿತು ಜಾಗೃತಿ ಮೂಡಿಸುವ ಕಲಾ ಪ್ರದರ್ಶನ ನಡೆಸಿಕೊಟ್ಟರು. ಐಸಿಟಿಸಿ ಕೇಂದ್ರ ಮತ್ತು ಸಿ.ಬಿ.ಒ (ಕಮ್ಯುನಿಟಿ ಬೇಸ್ಡ್ಆ ರ್ಗನೈಸೇಷನ್‌)ದ ಸಹಭಾಗಿತ್ವದಲ್ಲಿ ಮಲ್ಲಿಕಾರ್ಜುನ, ರವಿಕುಮಾರ್‌ ಮತ್ತು ಸಂಗಡಿಗರು ಸಮುದಾಯವೇ ಶಕ್ತಿ ಎಂಬ ಶೀರ್ಷಿಕೆಯಡಿ ಏಡ್ಸ್‌ ಜಾಗೃತಿ ನಾಟಕ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next