Advertisement

ಪ್ರತಿಯೊಬ್ಬರೂ ಸಂವಿಧಾನ ಓದಿ

10:10 AM Jul 20, 2019 | Naveen |

ದಾವಣಗೆರೆ: ದೇಶದ ಬಹುತ್ವ ರಕ್ಷಿಸಿಕೊಂಡು ಬರುತ್ತಿರುವ ನಮ್ಮ ಸಂವಿಧಾನವನ್ನು ಪ್ರತಿಯೊಬ್ಬರೂ ಓದಿ, ಅರ್ಥೈಸಿಕೊಂಡು ಅದರಂತೆ ನಡೆಯಬೇಕಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್‌. ನಾಗಮೋಹನ ದಾಸ್‌ ಸಲಹೆ ನೀಡಿದ್ದಾರೆ.

Advertisement

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್‌, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಹಯಾನ ಮತ್ತು ಸಮುದಾಯ ಕರ್ನಾಟಕ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಂವಿಧಾನ ಓದು ಕಾರ್ಯಗಾರ ಉದ್ಘಾಟಿಸಿ, ಮಾತನಾಡಿದ ಅವರು, ಕಾನೂನು ಮಾಡುವುದು ಶಾಸಕಾಂಗ, ಅದನ್ನು ಜಾರಿಗೆ ತರುವುದು ಕಾರ್ಯಾಂಗ ಮತ್ತು ಈ ಕಾನೂನುಗಳನ್ನು ಉಲ್ಲಂಘನೆ ಮಾಡಿದರೆ ಶಿಕ್ಷಿಸುವುದು ನ್ಯಾಯಾಂಗ. ಈ ಅಂಗಗಳ ಕಾರ್ಯವೈಖರಿ ನಿಯಂತ್ರಿಸುವುದು ಸಂವಿಧಾನ. ಹಿಂದೆ ರಾಜರುಗಳ ಕೈಯಲ್ಲಿ ಈ ಎಲ್ಲ ಅಧಿಕಾರಗಳಿದ್ದವು. ಕ್ರಮೇಣ ಪ್ರಜಾಪ್ರಭುತ್ವ ವ್ಯವಸ್ಥೆ ಬಂತು ಎಂದರು.

ಸಂವಿಧಾನ ಓದಿ, ಅರ್ಥೈಸಿಕೊಂಡು, ಅದರಂತೆ ನಡೆಯಬೇಕು. ಈ ನಿಟ್ಟಿನಲ್ಲಿ ಕಳೆದ 10 ವರ್ಷಗಳಲ್ಲಿ ಪಠ್ಯದಲ್ಲಿ ಅಳವಡಿಸಿರುವ ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳು ಕೇವಲ 35 ಅಂಕ ಪಡೆಯುವ ಉದ್ದೇಶದಿಂದ ಓದುತ್ತಿದ್ದಾರೆ. ಹೀಗಾದರೆ ಇದನ್ನು ಅರ್ಥೈಸಿಕೊಂಡು ಅದರ ಆಶಯ ಮೈಗೂಡಿಸಿಕೊಳ್ಳಲು ಹೇಗೆ ಸಾಧ್ಯ. ಸಂವಿಧಾನವನ್ನು ಎಲ್ಲರೂ ತಿಳಿಯಬೇಕೆಂಬ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂವಿಧಾನ ಓದು ಅಭಿಯಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಭಾರತ 1950ರಲ್ಲಿ ವಿಶ್ವದಲ್ಲೇ ಅತಿದೊಡ್ಡ ಮತ್ತು ಮಹತ್ತರವಾದ ಸಂವಿಧಾನ ರಚಿಸಿತು. ಸಂವಿಧಾನ ಜಾರಿಯಾದ ಈ 70 ವರ್ಷಗಳಲ್ಲಿ ನಾವು ಸಾಧಿಸಿದ್ದೇನು? ಎಂಬ ಪ್ರಶ್ನೆಗೆ ಉತ್ತರ ಹಿಂದೆ ಸುಮಾರು 600 ರಾಜರು ನಮ್ಮನ್ನು ಆಳುತ್ತಿದ್ದರು. ಅದು ಬದಲಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದು, ದೇಶಕ್ಕೆ ಗಡಿ ನಿಗದಿಯಾಗಿ, ಸಂವಿಧಾನ ರಚನೆ ನಂತರ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಕಟ್ಟಲಾಯಿತು. ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ ಹೀಗೆ ಅನೇಕ ವಲಯಗಳಲ್ಲಿ ಉತ್ತಮ ಬದಲಾವಣೆ ಕಂಡಿದ್ದೇವೆ. ಬಡತನ ಕಡಿಮೆಯಾಗಿದೆ, ಶಿಕ್ಷಣ ಮಟ್ಟ ಹೆಚ್ಚಿದೆ, ಮಹಿಳೆ, ದಲಿತರು, ಬುಡಕಟ್ಟು ಜನಾಂಗ, ಅಲ್ಪಸಂಖ್ಯಾತರು ಅಭಿವೃದ್ಧಿ ಹೊಂದುತ್ತಿದ್ದಾರೆ. ಇಂದು ಎಲ್ಲ ಕ್ಷೇತ್ರದಲ್ಲಿ ಮಹಿಳೆ ಸಾಧನೆಗೈದಿದ್ದಾಳೆ. ಹಿಂದುಳಿದ, ಕೆಳಸ್ತರದವರು ಉನ್ನತ ಸ್ಥಾನಲ್ಲಿದ್ದಾರೆ ಎಂದರೆ ಇದಕ್ಕೆ ಸಂವಿಧಾನ ಕೊಟ್ಟ ಅವಕಾಶಗಳೇ ಕಾರಣ ಎಂದು ತಿಳಿಸಿದರು.

ಸಮಾನತೆ, ಧರ್ಮ, ಅಹಿಂಸೆ, ಸಾಮಾಜಿಕ ನ್ಯಾಯ ನಮ್ಮ ಸಂವಿಧಾನದ ಆಧಾರವಾಗಿದ್ದು, ಸಂವಿಧಾನ ಜಾರಿ ನಂತರ ಉತ್ತಮ ಬದಲಾವಣೆ ಆಗಿವೆ. ಆದರೂ ನಮ್ಮ ಮುಂದೆ ಇಂದಿಗೂ ಅನೇಕ ಸವಾಲುಗಳು ಮತ್ತು ಸಮಸ್ಯೆಗಳಿವೆ. ಅನೇಕರು ಸಂವಿಧಾನವನ್ನೇ ದೂಷಿಸುತ್ತಿದ್ದಾರೆ. ದೋಷ ಇರುವುದು ಸಂವಿಧಾನದಲ್ಲಲ್ಲ. ಬದಲಾಗಿ ಅದನ್ನು ಅನುಷ್ಠಾನಗೊಳಿಸುವವರಲ್ಲಿದೆ. ಎಲ್ಲರೂ ಸಂವಿಧಾನ ಅರ್ಥೈಸಿಕೊಂಡು ಅದರಂತೆ ನಡೆಯುವಲ್ಲಿ ಹೆಜ್ಜೆ ಇಡಬೇಕಿದೆ. ಸಂವಿಧಾನವನ್ನು ಉಳಿಸಿಕೊಂಡರೆ ಮಾತ್ರ ಸವಾಲು ಮತ್ತು ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದೆಂದರು.

Advertisement

ಅಧ್ಯಕ್ಷತೆ ವಹಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕುಲಕರ್ಣಿ ಅಂಬಾದಾಸ್‌ ಜಿ. ಮಾತನಾಡಿ, ದೇಶದಲ್ಲಿ ಪ್ರತಿ ಧರ್ಮಕ್ಕೆ ಇರುವ ಪವಿತ್ರ ಗ್ರಂಥದಂತೆ ಇಡೀ ಭಾರತ ದೇಶಕ್ಕೆ ಸಂವಿಧಾನ ಒಂದು ಪವಿತ್ರ ಗ್ರಂಥವಾಗಿದೆ. ಅದನ್ನು ಪ್ರತಿಯೊಬ್ಬರೂ ಓದಿ, ಅರ್ಥೈಸಿಕೊಂಡು ಮತ್ತೂಬ್ಬರಿಗೆ ಓದುವ ಹಾಗೆ ಉತ್ತೇಜಿಸಬೇಕು. ಸಂವಿಧಾನವನ್ನು ಓದಿ ತಿಳಿದುಕೊಂಡಲ್ಲಿ ಅಪರಾಧಗಳು ಕಡಿಮೆಯಾಗುತ್ತವೆ ಎಂದರು.

ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ಮಾತನಾಡಿ, ಇಂದು ಸಂವಿಧಾನ ಓದು ಅಭಿಯಾನ ಕೈಗೊಳ್ಳುವ ಮೂಲಕ ಸಾಮಾನ್ಯರ ಕೈಗೆ ಸಂವಿಧಾನ ಓದು ಪುಸ್ತಕ ದೊರಕುವಂತೆ ಮಾಡಿರುವ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ರವರ ಕಾರ್ಯ ಶ್ಲಾಘನೀಯ. ಅವರು ನಮ್ಮ ಸಂವಿಧಾನ ಕುರಿತು ಅತ್ಯಂತ ಸರಳವಾಗಿ ಬರೆದು ಎಲ್ಲರಿಗೂ ದೊರಕುವಂತೆ ಮಾಡಿದ್ದಾರೆ. ಈ ಪುಸ್ತಕ ಭಾರತದ ಇತಿಹಾಸದೊಂದಿಗೆ ತುಲನಾತ್ಮಕವಾಗಿ ರಚಿತವಾಗಿದ್ದು ಇಂತಹ ಪುಸ್ತಕಗಳು ಎಲ್ಲಾ ಶಾಲಾ ಮಕ್ಕಳ ಕೈಯಲ್ಲಿದ್ದರೆ ಮಕ್ಕಳಿಗೆ ಪ್ರಾರಂಭದಿಂದಲೇ ಸಂವಿಧಾನದ ಕುರಿತು ಪ್ರಜ್ಞೆ ಬೆಳೆಯುತ್ತದೆ ಎಂದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್.ಅರುಣಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಪಂ ಸಿಇಓ ಎಚ್.ಬಸವರಾಜೇಂದ್ರ, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭು.ಎನ್‌.ಬಡೀಗೇರ್‌, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್‌.ಟಿ. ಮಂಜುನಾಥ್‌, ಹಿರಿಯ ಸಿವಿಲ್ ನ್ಯಾಯಾಧೀಶ ಕೆಂಗಬಾಲಯ್ಯ, ಸರ್ಕಾರಿ ಅಭಿಯೋಜಕ ವಿ.ಎಸ್‌.ಪಾಟೀಲ್, ಇತರರು ಕಾರ್ಯಕ್ರಮದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next