ಶಿವಮೊಗ್ಗ: ದಾವಣಗೆರೆಯಲ್ಲಿ ಮಗು, ಮಹಿಳೆ ಮೇಲೆ ಸಾವಿಗೆ ಕಾರಣವಾಗಿದ್ದ ಹಾಗೂ ವನ್ಯಜೀವಿ ವೈದ್ಯ ಡಾ.ವಿನಯ್ ಮೇಲೆ ದಾಳಿ ಮಾಡಿದ್ದ ಪುಂಡಾನೆಯನ್ನು (ಅಭಿಮನ್ಯು) ಪಳಗಿಸುವಲ್ಲಿ ಸಕ್ರೆಬೈಲು ಆನೆಬಿಡಾರದ ಮಾವುತರು ಯಶಸ್ವಿಯಾಗಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ದಾವಣಗೆರೆಯ ಚನ್ನಗಿರಿ, ಹೊನ್ನಾಳಿ ಭಾಗದಲ್ಲಿ ಜನರಿಗೆ ನಡುಕ ಉಂಟು ಮಾಡಿದ್ದ ಈ ಆನೆಯನ್ನು ಸೆರೆ ಹಿಡಿಯುವುದು ಸವಾಲಾಗಿತ್ತು. ವನ್ಯಜೀವಿ ವೈದ್ಯ ಡಾ.ವಿನಯ್ ಯಶಸ್ವಿಯಾಗಿ ಡಾರ್ಟಿಂಗ್ ಮಾಡಿದ್ದರೂ ಮುಂದೆ ಹೋಗಬೇಕಿದ್ದ ಆನೆ ವಾಪಾಸ್ ತಿರುಗಿದ ಬಂದ ಪರಿಣಾಮ ಆನೆ ದಾಳಿಗೆ ಒಳಗಾಗಿದ್ದರು. ಅಲ್ಲಿಂದ ಆನೆಯನ್ನು ಸಕ್ರೆಬೈಲು ಆನೆಬಿಡಾರಕ್ಕೆ ತಂದು ಕ್ರಾಲ್‌ನಲ್ಲಿ ಇಡಲಾಗಿತ್ತು.
ಏ.11ರಿಂದ ಕ್ರಾಲ್‌ನಲ್ಲಿ ಬಂಧಿಯಾಗಿದ್ದ ಆನೆಗೆ ಸೋಮವಾರ ಹೊರ ತರಲಾಯಿತು. ಉಗ್ರ ಸ್ವರೂಪಿಯಾಗಿದ್ದ ಆನೆಯನ್ನು ಸತತ ಪ್ರಯತ್ನದ ಮೂಲಕ ಶಾಂತ ಸ್ವರೂಪಕ್ಕೆ ತರುವಲ್ಲಿ ಜಮೇದಾರ್ ಕುದ್ರತ್ ಪಾಷಾ ಹಾಗೂ ಮಂಜು ಅವರ ತಂಡ ಯಶಸ್ವಿಯಾಗಿದೆ.
ಸೋಮವಾರ ಪೂಜೆ ನೆರವೇರಿಸುವ ಮೂಲಕ ಆನೆಯನ್ನು ಕ್ರಾಲ್‌ನಿಂದ ಹೊರ ತರಲಾಯಿತು. ಈ ವೇಳೆ ಕುಮ್ಕಿ ಆನೆಗಳು ಜತೆಯಲ್ಲಿ ಇದ್ದವು. ಕೆಲದಿನಗಳವರೆಗೂ ಕ್ರಾಲ್ ಸುತ್ತಮುತ್ತವೇ ಅದಕ್ಕೆ ಇತರೆ ಆನೆಗಳು, ಜನರ ಸಂಪರ್ಕಕ್ಕೆ ಹೊಂದಿಕೊಳ್ಳುವಂತೆ ನೋಡಿಕೊಳ್ಳುವುದು. ಇದರಲ್ಲಿ ಯಾವುದೇ ತೊಂದರೆ ಕಂಡುಬರದಿದ್ದರೆ ಕೆಲವೇ ದಿನಗಳಲ್ಲಿ ಆನೆ ಬಿಡಾರದ ಕ್ಯಾಂಪಿನಲ್ಲಿ ಸಾರ್ವಜನಿಕರ ದರ್ಶನಕ್ಕೆ ಸಿಗಲಿದೆ ಎನ್ನುತ್ತಾರೆ ವನ್ಯಜೀವಿ ವಲಯ ಡಿಎಫ್‌ಒ ಪ್ರಸನ್ನ ಕೃಷ್ಣ.
ಕೆಲ ದಿನಗಳ ಹಿಂದೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಇದಕ್ಕೆ ಅಭಿಮನ್ಯು ಎಂದು ನಾಮಕರಣ ಮಾಡಿದ್ದರು. ಆನೆ ದಾಳಿಗೆ ಒಳಗಾಗಿದ್ದ ಡಾ.ವಿನಯ್ ಹಲವು ಚಿಕಿತ್ಸೆಗಳ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ… ರೌಡಿಶೀಟರ್ ಕಾಲಿಗೆ ಗುಂಡೇಟು…