Advertisement

ವೇದಾಗಮದಲ್ಲಿದೆ ಎಲ್ಲ ಜ್ಞಾನ ಸಂಪತ್ತು

09:59 AM Jun 19, 2019 | Naveen |

ದಾವಣಗೆರೆ: ವಿಜ್ಞಾನ, ತಂತ್ರಜ್ಞಾನ ಒಳಗೊಂಡಂತೆ ಎಲ್ಲಾ ಜ್ಞಾನ ಸಂಪತ್ತು ವೇದಾಗಮದಲ್ಲಿದ್ದು, ವಿಜ್ಞಾನದ ಅನೇಕ ಸಂಶೋಧನೆಯ ಮೂಲ ಸೆಲೆಯೇ ವೇದ ಮತ್ತು ಆಗಮ ಎಂದು ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಶ್ರೀ ಜಗದ್ಗುರು ಪಂಚಾಚಾರ್ಯ ಮಂದಿರ (ಶ್ರೀಶೈಲ ಮಠ)ದಲ್ಲಿ ಮಂಗಳವಾರ ಶ್ರೀ ಜಗದ್ಗುರು ಪಂಡಿತಾರಾಧ್ಯ ವೇದಾಗಮ ಸಂಸ್ಕೃತ ಪಾಠಶಾಲೆ ಉದ್ಘಾ ಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವೇದ ಮತ್ತು ಆಗಮದಲ್ಲಿ ಇಲ್ಲದೇ ಇರುವಂತಹ ಜ್ಞಾನ ಯಾವುದೂ ಇಲ್ಲ. ವೇದ ಮತ್ತು ಆಗಮದಲ್ಲಿ ವಿಜ್ಞಾನದ ಹಲವಾರು ಅಂಶಗಳು ಇವೆ. ವೇದ ಮತ್ತು ಆಗಮಗಳು ಜ್ಞಾನದ ಮೂಲ ಸೆಲೆ ಎಂದರು.

ಇಂದಿನ ಆಧುನಿಕ ಕಾಲದಲ್ಲೂ ಸೂರ್ಯೋದಯ, ಸೂರ್ಯಸ್ಥಮಾನ, ಸೂರ್ಯ ಮತ್ತು ಚಂದ್ರಗ್ರಹಣದ ಪ್ರತಿಯೊಂದನ್ನ ಹೇಳುವುದು ಪಂಚಾಂಗ. ನಮ್ಮ ದೇಶದ ಋಷಿ ಮುನಿಗಳು ಯಾವುದೇ ಉಪಕರಣ ಇಲ್ಲದೆ ಸೂರ್ಯ ಮತ್ತು ಚಂದ್ರಗ್ರಹಣದ ಪ್ರತಿಯೊಂದನ್ನ ಅತ್ಯಂತ ನಿಖರವಾಗಿ ಹೇಳುತ್ತಿದ್ದರು. ತಮ್ಮ ಬುದ್ಧಿಶಕ್ತಿ ಮತ್ತು ಗಣಿತಶಾಸ್ತ್ರ ಲೆಕ್ಕಾಚಾರದೊಂದಿಗೆ ಬಾಹ್ಯಕಾಶದಲ್ಲಿನ ಪ್ರತಿಯೊಂದು ಆಗುಹೋಗಿನ ಬಗ್ಗೆ ಹೇಳ ಬಲ್ಲವರಾಗಿದ್ದರು ಎಂಬುದನ್ನ ಅಂತಹ ವೇದ ಮತ್ತು ಆಗಮವನ್ನ ಒಪ್ಪದವರು, ಮೂಢನಂಬಿಕೆ ಎಂದು ತಾತ್ಸಾರ ಮನೋಭಾವ ದಿಂದ ನೋಡುವರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಭಾರತೀಯ ಸಂಸ್ಕೃತದ ಮೂಲ ಸೆಲೆಯಂತಿರುವ ಸಂಸ್ಕೃತ ಭಾಷೆಯನ್ನ ಡೆಡ್‌ ಲಾಂಗ್ವೇಜ್‌ ಅಂದರೆ ಮೃತಭಾಷೆ ಎನ್ನಲಾಗುತ್ತದೆ. ಸಂಸ್ಕೃತ ಡೆಡ್‌ ಲಾಂಗ್ವೇಜ್‌ ಅಲ್ಲವೇ ಅಲ್ಲ. ಅದು ಎಲ್ಲಾ ಭಾಷೆಗಳ ತಂದೆ-ತಾಯಿ. ಅದು ಡ್ಯಾಡಿ ಲಾಂಗ್ವೇಜ್‌. ಸಂಸ್ಕೃತ ಮೃತ ಭಾಷೆ ಖಂಡಿತವಾಗಿಯೂ ಅಲ್ಲ. ಅಮೃತತ್ವವನ್ನು ನೀಡುವಂತಹ ಅಮೃತ ಭಾಷೆ ಎಂದು ತಿಳಿಸಿದರು.

Advertisement

ಇಂಗ್ಲಿಷ್‌ನ ಅನೇಕ ಪದಗಳಿಗೆ ಮೂಲ ಸಂಸ್ಕೃತ ಎಂಬುದನ್ನ ಭಾಷಾಶಾಸ್ತ್ರಜ್ಞರೇ ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ. ಇಂಗ್ಲಿಷ್‌ನಲ್ಲಿ ತಂದೆಗೆ ಫಾದರ್‌ ಎನ್ನುವುದಕ್ಕೆ ಸಂಸ್ಕೃತದ ಪಿತೃ ಪದ ಮೂಲ. ಮದರ್‌, ಬ್ರದರ್‌ ಎನ್ನುವ ಪದಗಳ ಮೂಲ ಸಂಸ್ಕೃತದ ಮಾತೃ, ಭ್ರಾತೃ ಎಂಬುದಾಗಿದೆ. ಹಾಗಾಗಿ ಸಂಸ್ಕೃತ ಡೆಡ್‌ ಅಲ್ಲ ಡ್ಯಾಡಿ ಲಾಂಗ್ವೇಜ್‌ ಎನ್ನುವುದು ಅರ್ಥ ಮಾಡಿಕೊಳ್ಳಬೇಕು ಎಂದು ಸ್ವಾಮೀಜಿ ತಿಳಿಸಿದರು.

ದೇವಭಾಷೆ ಎಂದೇ ಕರೆಯಲ್ಪಡುವ ಸಂಸ್ಕೃತವನ್ನ ಯಾವುದೇ ಜಾತಿ, ಮತ, ಪಂಥ,ಲಿಂಗಭೇಧ ಇಲ್ಲದೆ ಜನ ಸಾಮಾನ್ಯರಿಗೂ ಕಲಿಸಬೇಕು ಎಂಬುದು ಶ್ರೀ ವಾಗೀಶ ಪಂಡಿತಾರಾಧ್ಯರು, ಶ್ರೀ ಉಮಾಪತಿ ಪಂಡಿತಾರಾಧ್ಯರ ಕನಸಾಗಿತ್ತು. ದಾವಣಗೆರೆಯಲ್ಲಿ ಪ್ರಾರಂಭವಾಗಿದ್ದ ವೇದಾಗಮ ಸಂಸ್ಕೃತ ಪಾಠಶಾಲೆ ಕೆಲವಾರು ಕಾರಣದಿಂದ ನಿಂತು ಹೋಗಿತ್ತು. ಈಗ ಪುನಾರಂಭಗೊಂಡಿರುವುದು ಎಲ್ಲಾ ಸ್ವಾಮೀಜಿಯವರಿಗೆ ಸಂತಸ ಉಂಟು ಮಾಡಿದೆ. 25 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾಗಿರುವ ಈ ಶಾಲೆ ಅತಿ ಹೆಚ್ಚಿನ ಕೀರ್ತಿಗೆ ಪಾತ್ರವಾಗಲಿದೆ ಎಂದು ಆಶಿಸಿದರು.

ದಾವಣಗೆರೆಯಲ್ಲಿ ಯಾವುದೇ ಜಾತಿ, ಮತ, ಪಂಥ,ಲಿಂಗಭೇಧ ಇಲ್ಲದೆ ಜನ ಸಾಮಾನ್ಯರಿಗೆ ವೇದ- ಆಗಮ, ಸಂಸ್ಕೃತ ಕಲಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಆದರೆ, ಎಲ್ಲರೂ ಇಲ್ಲಿನ ಕಟ್ಟಪಾಡಿಗೆ ಬದ್ಧವಾಗಿ ನಡೆದುಕೊಳ್ಳ ಬೇಕು. ಅದರಲ್ಲಿ ಯಾವುದೇ ರೀತಿಯ ವಿನಾಯತಿ ಇಲ್ಲ. ಮಕ್ಕಳ ಭವಿಷ್ಯಕ್ಕಾಗಿ ಕಟ್ಟುಪಾಡು, ಕಟ್ಟಳೆಗಳು ಎಂಬುದನ್ನ ಎಲ್ಲರೂ ತಿಳಿದುಕೊಂಡು ಅದರಂತೆ ನಡೆಯಬೇಕು ಎಂದು ತಿಳಿಸಿದರು.

ಶ್ರೀ ಜಗದ್ಗುರು ಪಂಡಿತಾರಾಧ್ಯ ವೇದಾಗಮ ಸಂಸ್ಕೃತ ಪಾಠಶಾಲೆ ಉದ್ಘಾಟಿಸಿದ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ವೇದ-ಆಗಮ-ಸಂಸ್ಕೃತ ಕಲಿಯುವುದು ಕೆಲವು ವರ್ಗಕ್ಕೆ ಮಾತ್ರವೇ ಸೀಮಿತ ಎನ್ನುವಂತಿತ್ತು.ಶ್ರೀಶೈಲ ಜಗದ್ಗುರುಗಳು ಯಾವುದೇ ಜಾತಿ, ಮತ, ಪಂಥ,ಲಿಂಗಭೇಧ ಇಲ್ಲದೆ ಜನ ಸಾಮಾನ್ಯರಿಗೆ ವೇದ- ಆಗಮ, ಸಂಸ್ಕೃತ ಕಲಿಸುವುದಕ್ಕೆ ಮುಂದಾಗಿದ್ದಾರೆ. ಎಲ್ಲರೂ ಚೆನ್ನಾಗಿ ಕಲಿತು ಉತ್ತಮ ಪಂಡಿತರಾಗಿ ಹೊರಹೊಮ್ಮಬೇಕು ಎಂದು ಆಶಿಸಿದರು.

ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಅಂಬಿಕಾನಗರದ ಶ್ರೀ ಈಶ್ವರ ಪಂಡಿತಾರಾಧ್ಯ ಸ್ವಾಮೀಜಿ, ಶಹಪುರದ ಶ್ರೀ ಸೂಗೂರೇಶ್ವರ ಸ್ವಾಮೀಜಿ, ಮುಷ್ಟೂರುಶ್ರೀಗಳು ನೇತೃತ್ವ ವಹಿಸಿದ್ದರು. ಅಥಣಿ ಎಸ್‌. ವೀರಣ್ಣ,ಎನ್‌.ಎಂ. ಮುರುಗೇಶ್‌, ಡಿ.ಎಂ. ಹಾಲಸ್ವಾಮಿ, ಬನ್ನಯ್ಯಸ್ವಾಮಿ ಇತರರು ಇದ್ದರು. ಮಂಜುನಾಥ ದೇವರು ನಿರೂಪಿಸಿದರು.

ಮಹಿಳಾ ವೇದಾಗಮ ಶಾಲೆ
ದಾವಣಗೆರೆಯಲ್ಲಿ ಮಹಿಳೆಯರಿಗೆ ಸಹ ವೇದಾಗಮ ಶಾಲೆ ಪ್ರಾರಂಭಿಸಬೇಕು ಎಂಬ ಅಪೇಕ್ಷೆ ಇದೆ. ಈಗಾಗಲೇ 30 ಮಹಿಳೆಯರ ತಂಡ ಸಿದ್ಧವಾಗಿದೆ. ಒಂದು ವಾರದಲ್ಲಿ ಮಹಿಳಾ ವೇದಾಗಮ ಶಾಲೆ ಪ್ರಾರಂಭಿಸಲಾಗುವುದು ಎಂದು ಶ್ರೀಶೈಲ ಜಗದ್ಗುರು ಡಾ| ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next