ದಾವಣಗೆರೆ: ಪರಿಶಿಷ್ಟ ಪಂಗಡಕ್ಕೆ ಶೇ 7.5 ಮೀಸಲಾತಿ ನೀಡುವಂತೆ ಒತ್ತಾಯಿಸಿ ರಾಜನಹಳ್ಳಿಯಿಂದ ರಾಜಧಾನಿವರೆಗೆ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆಯು ಭಾನುವಾರ ಹರಿಹರ ಮೂಲಕ ದಾವಣಗೆರೆ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಭವ್ಯವಾಗಿ ಸ್ವಾಗತಿಸಲಾಯಿತು.
ನಂತರ ಪಾದಯಾತ್ರೆಯು ಪಿ.ಬಿ. ರಸ್ತೆ, ರೇಣುಕಾ ಮಂದಿರ, ಎವಿಕೆ ರಸ್ತೆ ಮಾರ್ಗವಾಗಿ ನಾಯಕ ವಿದ್ಯಾರ್ಥಿ ನಿಲಯ ತಲುಪಿತು. ಈ ವೇಳೆ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಅವರನ್ನು ನಾಯಕ ಸಮಾಜದ ಮುಖಂಡರು ಪಾದ ತೊಳೆದು, ಹಾರ ಹಾಕಿ, ಆಶೀರ್ವಾದ ಪಡೆದು ಸಂಭ್ರಮದಿಂದ ಬರಮಾಡಿಕೊಂಡರು.
ಈ ವೇಳೆ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ನಾಳೆ ನಾಯಕ ವಿದ್ಯಾರ್ಥಿ ನಿಲಯದಿಂದ ಪಾದಯಾತ್ರೆ ಮುಂದುವರಿಯಲಿದೆ. ಇಂದು ಪಾದಯಾತ್ರೆಗೆ ಬೇರೆ ಭಾಗಗಳಿಂದ ಬಂದಂತಹ ಎಲ್ಲಾ ಸಮಾಜದ ಬಾಂಧವರಿಗೆ ಸಮಾಜದ ವಸತಿ ನಿಲಯದಲ್ಲಿ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಸಮಾಜದ ಎಲ್ಲರೂ ಕೂಡ ಇಂದಿನ ಪಾದಯಾತ್ರೆಯನ್ನು ಯಶಸ್ವಿಗೊಳಿಸಿದ್ದೀರಿ ಎಂದು ನುಡಿದರು.
ಪ್ರೊ| ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಒಂದೇ ರಾಜ್ಯದಲ್ಲಿ ಒಂದೇ ಸಮುದಾಯಕ್ಕೆ ಕೇಂದ್ರ ಮತ್ತು ರಾಜ್ಯ ಮೀಸಲಾತಿಯು ಶೈಕ್ಷಣಿಕ ಮತ್ತು ಉದ್ಯೋಗಕ್ಕೆ ಬೇರೆ ಬೇರೆಯಾಗಿ ಇರುವುದು ನಮ್ಮ ನಾಯಕ ಸಮಾಜಕ್ಕೆ ಮಾತ್ರ. ಈ ಬಗ್ಗೆ ಪ್ರತಿಯೊಬ್ಬ ಸಮಾಜದ ಬಾಂಧವರು ಜಾಗೃತರಾಗಬೇಕೆಂದರು.
ವಾಸ್ತವವಾಗಿ ಒಂದೇ ಪ್ರದೇಶದಲ್ಲಿ ವಾಸಿಸುವ ಶೋಷಿತ ಸಮುದಾಯಕ್ಕೆ ರಾಜಕೀಯ, ಆರ್ಥಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಮೀಸಲಾತಿ ಒಂದೇ ತೆರನಾಗಿರಬೇಕು. ಅದು ಸಾಮಾಜಿಕ ನ್ಯಾಯ ಪರವಾದುದು. ಹಾಗೂ ಸಂವಿಧಾನದ ಆಶಯ ಕೂಡ ಇದೆ ಆಗಿದೆ. ಆದರೆ, ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಜನಸಂಖ್ಯೆಗನುಗುಣವಾಗಿ ಮೀಸಲಾತಿ ವಿಸ್ತರಿಸದೇ ಶೈಕ್ಷಣಿಕ, ಔದ್ಯೋಗಿಕವಾಗಿ ನಾಯಕ ಸಮಾಜ ಹಿನ್ನಡೆಯಾಗಲೂ ನಮ್ಮನ್ನಾಳುವ ಸರ್ಕಾರಗಳೇ ಕಾರಣ. ಈ ಧೋರಣೆ ನಮ್ಮ ಪ್ರಜಾಪ್ರಭುತ್ವದ ದುರಂತವೇ ಸರಿ ಎಂದರು.
ನಾಯಕ ಸಮಾಜದ ಮುಖಂಡ ಎಚ್.ಕೆ. ರಾಮಚಂದ್ರಪ್ಪ ಮಾತನಾಡಿ, ನಾಳೆ ಬೆಳಗ್ಗೆ 10ಕ್ಕೆ ನಾಯಕ ವಿದ್ಯಾರ್ಥಿ ನಿಲಯದಿಂದ ಪಾದಯಾತ್ರೆ ಜಾಥಾ ಆರಂಭವಾಗಿ ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಗಾಂಧಿ ವೃತ್ತ, ಪಿ.ಬಿ. ರಸ್ತೆ, ಆವರಗೆರೆ ಮಾರ್ಗವಾಗಿಆನಗೋಡಿಗೆ ತಲುಪಲಿದೆ . ಹಾಗಾಗಿ ಸಮಾಜದ ಎಲ್ಲಾ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ನಾಯಕ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಬಿ. ವೀರಣ್ಣ, ತಾಲೂಕು ನಾಯಕ ಸಮಾಜದ ಅಧ್ಯಕ್ಷ ಹದಡಿ ಹಾಲಪ್ಪ, ಜಿಪಂ ಸದಸ್ಯ ಕೆ.ಎಚ್. ಓಬಳಪ್ಪ, ಲೋಕೇಶಪ್ಪ, ಜಿಗಳಿ ಆನಂದಪ್ಪ, ಗಣೇಶ್ ಹುಲ್ಮನಿ, ರಾಘು ದೊಡ್ಮನಿ, ಹತ್ರಿಕೋಟೆ ವೀರೇಂದ್ರ ಸಿಂಹ, ಲೋಹಿತ್‌ಕುಮಾರ್, ವಿನಾಯಕ ಪೈಲ್ವಾನ್, ಪಾದಯಾತ್ರಿಗಳು ಉಪಸ್ಥಿತರಿದ್ದರು.