Advertisement

ಮಾದಕ ವ್ಯಸನದಿಂದ ದೂರ ಇರಿ

10:55 AM Aug 22, 2019 | Naveen |

ದಾವಣಗೆರೆ: ಕ್ಷಣಿಕ ಸುಖದ ಮಾದಕ ವಸ್ತುಗಳಿಗೆ ಮಾರು ಹೋಗದೆ ಶಾಶ್ವತ ಸಂತೋಷದ ಕಡೆಗೆ ಮನಸ್ಸನ್ನು ಕೇಂದ್ರೀಕೃತಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಎಚ್. ಬಸವರಾಜೇಂದ್ರ ಸಲಹೆ ನೀಡಿದ್ದಾರೆ.

Advertisement

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಅಂತಾರಾಷ್ಟ್ರೀಯ ಮಾದಕ ವ್ಯಸನ, ಅನಧಿಕೃತ ಕಳ್ಳಸಾಗಣೆ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಾದಕ ವ್ಯಸನದಿಂದ ಯುವ ಜನಾಂಗ ದೂರ ಇರಬೇಕು ಎಂದರು. ಮಾದಕ ವಸ್ತುಗಳ ಸೇವನೆಯಿಂದ ಮುಕ್ತರಾಗಲು ಸಾತ್ವಿಕ ಆಹಾರ ಸೇವನೆ, ಯೋಗ, ಪ್ರಾಣಾಯಾಮ, ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿ ನಿತ್ಯ ಯೋಗ ಇತರೆ ದೈಹಿಕ ಚಟುವಟಿಕೆಯಿಂದ ದೈಹಿಕ ಮತ್ತು ಮಾನಸಿಕ ಕ್ಷಮತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ| ಸಿ.ವೈ. ಸುದರ್ಶನ್‌ ಮಾತನಾಡಿ, ಮಾದಕ ವಸ್ತು ಒಳಗೊಂಡಂತೆ ವ್ಯಸನ ಸಂಕೀರ್ಣ ಸಮಸ್ಯೆ. ಒತ್ತಡ ಕಡಿಮೆ, ಗೆಳೆಯರ ಒತ್ತಾಯ ಇತರೆ ಕಾರಣಕ್ಕೆ ಒಮ್ಮೆ ಮಾದಕ ವಸ್ತುಗಳ ಚಟಕ್ಕೆ ಮುಂದಾದರೆ ಅದರಿಂದ ಹೊರ ಬರುವುದು ಕಷ್ಟ. ಹಾಗಾಗಿ ಪ್ರಾರಂಭಿಕ ಹಂತದಿಂದಲೇ ದೂರವೇ ಉಳಿಯುವುದು ಒಳ್ಳೆಯ ವಿಧಾನ ಎಂದು ತಿಳಿಸಿದರು. ದಾವಿವಿ ಕುಲಸಚಿವ(ಆಡಳಿತ) ಪ್ರೊ| ಪಿ. ಕಣ್ಣನ್‌ ಮಾತನಾಡಿ, ಇಂದಿನ ಸಾಮಾಜಿಕ, ಕೌಟಂಬಿಕ ವ್ಯವಸ್ಥೆ ಮಾದಕ ವಸ್ತು ಸೇವನೆಗೆ ಪ್ರೇರಣೆಯಂತಿದೆ. ಸಾಮಾಜಿಕ ಜಾಲತಾಣ, ದೃಶ್ಯ ಮಾಧ್ಯಮಗಳಲ್ಲಿ ಮಾದಕ ವಸ್ತುಗಳ ಜಾಹೀರಾತನ್ನು ಸಂಪೂರ್ಣವಾಗಿ ನಿಷೇಧಿಸುವಂತಾಗಬೇಕು ಎಂದು ನುಡಿದರು.

ವಿಶ್ವವಿದ್ಯಾಲಯ ಪರೀಕ್ಷಾಂಗ ಕುಲಸಚಿವ ಪ್ರೊ| ಬಸವರಾಜ ಬಣಕಾರ್‌, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ| ಪಿ.ಡಿ. ಮುರುಳೀಧರ್‌, ಮನೋವೈದ್ಯ ಡಾ|ಗಂಗಂ ಸಿದ್ದಾರೆಡ್ಡಿ, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಯು.ಎಂ. ಲೋಕೇಶ್‌, ಸಹಾಯಕ ಪ್ರಾಧ್ಯಾಪಕ ಬಿ.ಎಸ್‌. ಪ್ರದೀಪ್‌ ಇತರರು ಇದ್ದರು.

ಕಸದ ಬುಟ್ಟಿಗೆ ಗುಟ್ಕಾ ಪ್ಯಾಕೆಟ್ ಇತರೆ ವಸ್ತು ಹಾಕುವ ಮೂಲಕ ದಿನಾಚರಣೆಗೆ ಚಾಲನೆ ನೀಡಿದ್ದು ವಿಶೇಷ.

Advertisement
Advertisement

Udayavani is now on Telegram. Click here to join our channel and stay updated with the latest news.

Next