ದಾವಣಗೆರೆ: ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಂಡಿರುವ ಹರಪನಹಳ್ಳಿ ತಾಲೂಕಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಾವಣಗೆರೆ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಸದ್ಯ ಆ ತಾಲೂಕಲ್ಲೇ ಇನ್ನೊಂದಿಷ್ಟು ದಿನ ಮುಂದುವರಿಯುವುದು ಅನಿವಾರ್ಯವಾಗಿದೆ.
ಬಳ್ಳಾರಿ ಜಿಲ್ಲೆಯಿಂದ ಬೇರ್ಪಟ್ಟು 1997ರಲ್ಲಿ ಹೊಸ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ದಾವಣಗೆರೆಗೆ ಸೇರಿದ್ದ ಹರಪನಹಳ್ಳಿ ತಾಲೂಕು ಮತ್ತೆ ಬಳ್ಳಾರಿ ಕಂದಾಯ ಜಿಲ್ಲೆಯ ಆಡಳಿತ ವ್ಯಾಪ್ತಿಗೆ ಒಳಪಟ್ಟಿದ್ದರೂ ದಾವಣಗೆರೆ ಶೈಕ್ಷಣಿಕ ಜಿಲ್ಲೆಯಲ್ಲೇ ಮುಂದವರಿದಿತ್ತು. ಮುಂದಿನ ದಿನಗಳಲ್ಲಿ ಹರಪನಹಳ್ಳಿ ಶೈಕ್ಷಣಿಕ ತಾಲೂಕು ಬಳ್ಳಾರಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಗೊಳಪಡುವುದರಿಂದ ಆ ತಾಲೂಕಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಾವಣಗೆರೆ ಜಿಲ್ಲೆಯ ಶಿಕ್ಷಕರು, ಹೆಚ್ಚುವರಿ ಶಿಕ್ಷಕರು ಸ್ಥಳ ನಿಯುಕ್ತಿ ಹಿನ್ನೆಲೆಯಲ್ಲಿ ಬೆಂಗಳೂರು ವಿಭಾಗದ ದಾವಣಗೆರೆ ಜಿಲ್ಲೆಯಲ್ಲೇ ಮುಂದುವರಿಯಲು ಮನವಿ ಸಲ್ಲಿಸಿದ್ದರು. ಆದರೆ, ಬೆಂಗಳೂರು ವಿಭಾಗದಲ್ಲೇ ಉಳಿದುಕೊಳ್ಳಲು ಕೋರಿದ್ದ ಶಿಕ್ಷಕರ ಸಂಖ್ಯೆ 345 ಆಗಿದ್ದು, ದಾವಣಗೆರೆ ಶೈಕ್ಷಣಿಕ ಜಿಲ್ಲೆಯಲ್ಲಿ ಕೇವಲ 172 ಶಿಕ್ಷಕರ ಹುದ್ದೆ ಮಾತ್ರ ಖಾಲಿ ಇರುವುದರಿಂದ ಎಲ್ಲಾ ಶಿಕ್ಷಕರಿಗೂ ಒಂದೇ ಬಾರಿಗೆ ವರ್ಗಾವಣೆ ಭಾಗ್ಯ ಸಿಗದು.
ಹರಪನಹಳ್ಳಿ ತಾಲೂಕಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಿಕ್ಷಕರು ಹಾಗೂ ಹೆಚ್ಚುವರಿ ಶಿಕ್ಷಕರ ಸ್ಥಳ ನಿಯುಕ್ತಿ ಹಿನ್ನೆಲೆಯಲ್ಲಿ ದಾವಣಗೆರೆ ಶೈಕ್ಷಣಿಕ ಜಿಲ್ಲೆಗೆ ಹಿಂದಿರುಗಲು ಶಿಕ್ಷಕರು ಹಾಗೂ ಜನಪ್ರತಿನಿಧಿಗಳು ಸಲ್ಲಿಸಿದ್ದ ಮನವಿ ಪರಿಶೀಲಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಖಾಲಿ ಹುದ್ದೆಗಳ ಅಂಕಿ-ಅಂಶ ಪಡೆದು, ಕೋರಿಕೆ ಶಿಕ್ಷಕರನ್ನು ಹಂತ ಹಂತವಾಗಿ ಖಾಲಿ ಹುದ್ದೆಗಳಿಗೆ ನಿಯೋಜಿಸಲು ಕ್ರಮ ವಹಿಸಲು ಆದೇಶಿಸಿದ್ದಾರೆ.
ಬೆಂಗಳೂರು ವಿಭಾಗದಲ್ಲೇ ಮುಂದುವರಿಯಲು ಇಚ್ಛಿಸಿದ್ದ ಹರಪನಹಳ್ಳಿ ಶೈಕ್ಷಣಿಕ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯ 345 ಶಿಕ್ಷಕರ ಪಟ್ಟಿಯನ್ನು ಆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಆಯುಕ್ತರು ದಾವಣಗೆರೆ ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಂದ ಮಾಹಿತಿ ತರಿಸಿಕೊಂಡಿದ್ದರು.
ಜಿಲ್ಲೆಯ ಎಲ್ಲಾ ಶೈಕ್ಷಣಿಕ ತಾಲೂಕುಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ವೃಂದದಲ್ಲಿ ಒಟ್ಟಾರೆ 172 ಖಾಲಿ ಹುದ್ದೆಗಳ ಲಭ್ಯವಿರುವುದರಿಂದ ಹರಪನಹಳ್ಳಿ ತಾಲೂಕಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ದಾವಣಗೆರೆ ಜಿಲ್ಲೆಗೆ ವಾಪಸ್ಸಾಗಲು ಅಭಿಮತ ಸಲ್ಲಿಸಿರುವ ಎಲ್ಲಾ ಶಿಕ್ಷಕರನ್ನು ಒಂದೇ ಬಾರಿಗೆ ನಿಯುಕ್ತಿಗೊಳಿಸಲು ಸಾಧ್ಯವಿಲ್ಲ. ಹಾಗಾಗಿ ಹಂತ ಹಂತವಾಗಿ ಸಾಮಾನ್ಯ ವರ್ಗಾವಣೆ ಅಥವಾ ಪ್ರತ್ಯೇಕ ಕೌನ್ಸೆಲಿಂಗ್ ಪ್ರಕ್ರಿಯೆ ಮೂಲಕ ದಾವಣಗೆರೆ ಜಿಲ್ಲೆಯಲ್ಲೇ ಮುಂದುವರಿಯಲು ಇಚ್ಛಿಸಿರುವ ಶಿಕ್ಷಕರಿಗೆ ಜೇಷ್ಠತೆ ಆಧಾರದ ಮೇಲೆ ಅವಕಾಶ ಕಲ್ಪಿಸಲು ಕ್ರಮ ವಹಿಸಬೇಕೆಂದು ಈ ಎಲ್ಲಾ ಪ್ರಕ್ರಿಯೆ ಕೈಗೊಳ್ಳಲು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿರುವ ದಾವಣಗೆರೆ ಡಿಡಿಪಿಐ ಅವರಿಗೆ ಆಯುಕ್ತರು ಆದೇಶಿಸಿದ್ದಾರೆ.
ಆದ್ದರಿಂದ ಹರಪನಹಳ್ಳಿ ಶೈಕ್ಷಣಿಕ ತಾಲೂಕಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕರಿಗೆ ಒಂದೇ ಬಾರಿಗೆ ಆ ತಾಲೂಕಿನಿಂದ ಬಿಡುಗಡೆ ಭಾಗ್ಯ ಸಿಗದು.